ಬೆಂಗಳೂರು: ಒಂಟಿ ಮಹಿಳೆ ಮನೆಗೆ ನುಗ್ಗಿ ಸುಲಿಗೆ ಮಾಡಿದ್ದವ ಅರೆಸ್ಟ್, ತನಿಖೆ ವೇಳೆ ದರೋಡೆ ಹಿಂದಿನ ರಹಸ್ಯ ಬಿಚ್ಚಿಟ್ಟ ಆರೋಪಿ
ಕಳೆದ ನಾಲ್ಕು ದಿನಗಳ ಹಿಂದೆ ಆಗ್ನೇಯ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ 5ನೇ ಸೆಕ್ಟರ್ನಲ್ಲಿ ಒಂಟಿ ಮಹಿಳೆ ಇದ್ದ ಮನೆಯಲ್ಲಿ ಆರೋಪಿ ಜೋಶ್ವಾ ಸುಲಿಗೆ ಮಾಡಿದ್ದ. ಚಾಕುವಿನಿಂದ ಮಹಿಳೆಯ ಕೈ ಕೊಯ್ದು, ಕುತ್ತಿಗೆಗೆ ಚಾಕು ಇಟ್ಟು ಸುಲಿಗೆ ಮಾಡಿದ್ದ. ಸದ್ಯ ಆರೋಪಿ ಅರೆಸ್ಟ್ ಆಗಿದ್ದು ವಿಚಾರಣೆ ವೇಳೆ ಹೊಸ ಕಂಪೆನಿ ತೆರೆಯಲು ಬಂಡವಾಳದ ಹಣಕ್ಕಾಗಿ ಸುಲಿಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಬೆಂಗಳೂರು, ಆ.29: ಹೊಸ ಕಂಪನಿ ತೆರೆಯಲು ಬಂಡವಾಳ ಬೇಕೆಂದು ಒಂಟಿ ಮಹಿಳೆಯನ್ನೇ ಟಾರ್ಗೆಟ್ ಮಾಡಿ ಚಾಕುವಿನಿಂದ ಹಲ್ಲೆ ನಡೆಸಿ ದರೋಡೆ(Robbery) ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು(HSR Layout Police) ಬಂಧಿಸಿದ್ದಾರೆ. ಜೋಶ್ವಾ ಬಂಧಿತ ಆರೋಪಿ. ಕಳೆದ ನಾಲ್ಕು ದಿನಗಳ ಹಿಂದೆ ಆಗ್ನೇಯ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ 5ನೇ ಸೆಕ್ಟರ್ನಲ್ಲಿ ಒಂಟಿ ಮಹಿಳೆ ಇದ್ದ ಮನೆಯಲ್ಲಿ ಆರೋಪಿ ಜೋಶ್ವಾ ಸುಲಿಗೆ ಮಾಡಿದ್ದ. ಚಾಕುವಿನಿಂದ ಮಹಿಳೆಯ ಕೈ ಕೊಯ್ದು, ಕುತ್ತಿಗೆಗೆ ಚಾಕು ಇಟ್ಟು ಸುಲಿಗೆ ಮಾಡಿದ್ದ. ಕೊನೆಗೆ ಮಹಿಳೆ ಕಣ್ಣಿಗೆ ಖಾರದಪುಡಿ ಎರಚಿ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯನ್ನು ಹಿಂಬಾಲಿಸಿ ಬಂದಿದ್ದ ಆರೋಪಿ
ಮಕ್ಕಳನ್ನು ಏರಿಯಾದ ಪ್ರತಿಷ್ಟಿತ ಶಾಲೆಗೆ ಡ್ರಾಪ್ ಮಾಡಲು ಬಂದಿದ್ದ ಮಹಿಳೆ ಬಳಿ ಮನೆ ಕೀ ಇರುವುದನ್ನು ಸುಲಿಗೆಕೋರ ಜೋಶ್ವಾ ಗಮನಿಸಿದ್ದ. ಮಹಿಳೆ ಒಂಟಿ ಇರುವುದು ತಿಳಿಯುತ್ತಿದ್ದಂತೆ ಆಕೆಯನ್ನು ಹಿಂಬಾಲಿಸಿದ್ದಾನೆ. ಬಳಿಕ ಮಹಿಳೆ ಒಳಗೆ ಹೋಗುತ್ತಿದ್ದಂತೆ ಮನೆ ಬಾಗಿಲು ತಟ್ಟಿ ಮನೆಯ ಒಳಗೆ ಎಂಟ್ರಿ ಕೊಟ್ಟಿದ್ದಾನೆ. ನಿಮ್ಮ ಪತಿ 5 ಲಕ್ಷ ಹಣ ಕೊಡಬೇಕು ಈಗಲೇ ಕೊಡಬೇಕು ಎಂದು ಗಾಬರಿಪಡಿಸಿದ್ದಾನೆ. ಏನಾಗ್ತಿದೆ ಎಂದು ಮಹಿಳೆ ಗ್ರಹಿಸುವಷ್ಟರಲ್ಲಿ ಚಾಕು ತೋರಿಸಿ ಬೆದರಿಸಿದ್ದಾನೆ. ಮಹಿಳೆ ಧರಿಸಿದ್ದ ಚಿನ್ನಾಭರಣ ಕಸಿದು, ಹಲ್ಲೆ ಮಾಡಿ ಖಾರದ ಪುಡಿ ಎರಚಿ ಎಸ್ಕೇಪ್ ಆಗಿದ್ದಾನೆ. ಖತರ್ನಾಕ್ ಸುಲಿಗೆಕೋರ ಮನೆಯಿಂದ ಎಸ್ಕೇಪ್ ಆಗುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮಾರ ದೃಶ್ಯ ಆಧರಿಸಿ HSR ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸುಲಿಗೆ ಮಾಡಿದ್ದ ಚಿನ್ನಾಭರಣಗಳ ಮಾರಾಟ ಮಾಡಲು ರೌಡಿಶೀಟರ್ಗಳ ಸಾಥ್
ಇನ್ನು ಸುಲಿಗೆಕೋರ ಜೋಶ್ವಾ ತಾನು ದರೋಡೆ ಮಾಡಿದ ಚಿನ್ನಾಭರಣಗಳ ಮಾರಾಟ ಮಾಡಲು ರೌಡಿಶೀಟರ್ಗಳ ಸಹಾಯ ಪಡೆಯುತ್ತಿದ್ದ. ಇನ್ನು ಮಹಿಳೆಯನ್ನು ಬೆದರಿಸಿ ದರೋಡೆ ಮಾಡಿದ್ದ ಚಿನ್ನಾಭರಣವನ್ನು ಸುದ್ದಗುಂಟೆಪಾಳ್ಯದ ರವೀಂದ್ರನ್ ಹಾಗೂ ಅಕ್ಷಯ್ ಎಂಬ ಇಬ್ಬರು ರೌಡಿಶೀಟರ್ಗಳ ಬಳಿ ಅಡವಿಟ್ಟಿದ್ದ. ಈ ಹಣದಲ್ಲೇ ಹೊಸ ಕಂಪೆನಿ ಕೂಡ ತೆರೆದಿದ್ದ. ಸುಲಿಗೆ ಮಾಡಿದ್ದ ಚಿನ್ನಾಭರಣ ಅಡವಿಟ್ಟು 40 ಸಾವಿರ ಹಣ ನೀಡಿ Great Job ಕಂಪೆನಿ ರಿಜಿಸ್ಟರ್ ಮಾಡಿಸಿದ್ದನಂತೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಹೊಸ ಕಂಪೆನಿ ತೆರೆಯಲು ಬಂಡವಾಳದ ಹಣಕ್ಕಾಗಿ ಸುಲಿಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಚಿನ್ನಾಭರಣ ಅಡವಿಡಲು ಸಹಕರಿಸಿದ್ದ ರೌಡಿಶೀಟರ್ಗಳಿಗಾಗಿ ಶೋಧ ನಡೆಯುತ್ತಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:21 pm, Tue, 29 August 23