ಬೆಂಗಳೂರು: ಕೆಇಎ (KEA) ಪ್ರೆಶರ್ಸ್ ಮತ್ತು ಪುನರಾವರ್ತಿ ಎಂದು ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಪುನರಾವರ್ತಿ ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ. ಪುನರಾವರ್ತಿತ ಪಿಯುಸಿ ವಿದ್ಯಾರ್ಥಿಗಳ (PUC Students) ಅಂಕ ಪರಿಗಣನೆ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ (High Court) (ಸೆ. 3) ರಂದು ಹಿಂದಿನಂತೆ ಪಿಯುಸಿ ಅಂಕ ಪರಿಗಣಿಸಲು ಆದೇಶ ನೀಡಿತ್ತು. ಆದರೆ ಕೆಇಎ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ಇದನ್ನು ವಿರೋಧಿಸಿ ಪುನರಾವರ್ತಿ ವಿದ್ಯಾರ್ಥಿಗಳ ಪೋಷಕರು ಸುದ್ದಿಗೋಷ್ಠಿ ನಡೆಸಿ ನೀವೇ ಕೊಟ್ಟ ಪಿಯು ಬೋರ್ಡ್ ಅಂಕಪಟ್ಟಿಯನ್ನೇ ಪರಿಗಣಿಸೊಲ್ಲ ಅಂದರೆ ಹೇಗೆ? ಒಂದು ವರ್ಷ ಮಕ್ಕಳಿಗೆ ಪ್ಲೇಸ್ಮೆಂಟ್ ಇಲ್ಲದಂತಾಗುತ್ತೆ. ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ನೇರ ಹೊಣೆಯಾಗುತ್ತೆ ಎಂದು ಹೇಳಿದರು.
ಒಂದು ವರ್ಷ ಮಕ್ಕಳ ಭವಿಷ್ಯ ಹಾಳಾಗುತ್ತೆ. ಕೋರ್ಟ್ ಆದೇಶವನ್ನ ಪಾಲಿಸದೆ ಮೇಲ್ಮನವಿ ಸಲ್ಲಿಸಿದರೆ ಕೋರ್ಟ್ ಆದೇಶಕ್ಕೂ ಬೆಲೆ ಇಲ್ವಾ ? ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ. ನಾವೂ ಕಾನೂನಾತ್ಮಕವಾಗಿ ಹೋರಾಟಕ್ಕೆ ಮುಂದಾಗುತ್ತೇವೆ. ಯಾವ ಮಕ್ಕಳಿಗೂ ಅನ್ಯಾಯವಾಗದಂತೆ ಸಮಿತಿ ರಚಿಸಿ ಎಂದು ಆಗ್ರಹಿಸಿದರು.
ಮಕ್ಕಳ ವಿರುದ್ಧವೇ ಕೆಇಎ ಹೋರಾಟಕ್ಕೆ ಮುಂದಾಗಿರೋದು ಸರಿಯಲ್ಲ. ಒಂದು ಕಮಿಟಿ ಮಾಡಿ ಮಕ್ಕಳಿಗೆ ಭವಿಷ್ಯಕ್ಕೆ ನ್ಯಾಯ ಒದಗಿಸಿ. ಇಲ್ಲಿ ಈ ರೀತಿ ಆದರೆ ಮಕ್ಕಳು ಬೇರೆ ರಾಜ್ಯಗಳಿಗೆ ಹೋಗುತ್ತಾರೆ. ಇದು ಸರ್ಕಾರ ಹಾಗೂ ಇಲಾಖೆಗೆ ದೊಡ್ಡ ಸಮಸ್ಯೆಯಾಗುತ್ತೆ. ಪದೇಪದೆ ಕೋರ್ಟ್ಗೆ ಅಲೆದಾಡುತ್ತಿದ್ದರೆ ಮಕ್ಕಳು ವ್ಯಾಸಾಂಗ ಹೇಗೆ ಮಾಡಬೇಕು. ಸರ್ಕಾರ ಕೂಡಲೆ ಕೆಇಎ ನಿರ್ವಾಹಕ ನಿರ್ದೇಶಕಿ ರಮ್ಯಾರನ್ನು ಬದಲಿಸ ಬೇಕು ಎಂದು ಪೋಷಕರು ಒತ್ತಾಯಿಸಿದರು.
ಘಟನೆ ಹಿನ್ನೆಲೆ
ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕ ಪರಿಗಣನೆ ವಿಚಾರಕ್ಕೆ ಸಂಬಂಧಿಸಿ ಹಿಂದಿನಂತೆ ಪಿಯುಸಿ ಅಂಕ ಪರಿಗಣಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕ ಪರಿಗಣಿಸಲ್ಲವೆಂಬ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು.
ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕ ಪರಿಗಣಿಸಲ್ಲವೆಂದು ರಾಜ್ಯ ಸರ್ಕಾರ ಜುಲೈ 30ರಂದು ಆದೇಶ ಹೊರಡಿಸಿತ್ತು. ಬಳಿಕ ಪುನರಾವರ್ತಿತ ವಿದ್ಯಾರ್ಥಿಗಳು ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದರು. ಕೊವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯದೇ ಪಿಯು ಉತ್ತೀರ್ಣರಾಗಿದ್ರು. ಹೀಗಾಗಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕವನ್ನು ಕೆಇಎ ಪರಿಗಣಿಸಲಿಲ್ಲ. ಸದ್ಯ ಈಗ ಪಿಯುಸಿ ಅಂಕ ಪರಿಗಣಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
2020-21ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿದ್ದು, ಸಿಇಟಿ ಪರೀಕ್ಷೆಗೆ ಪುನರಾವರ್ತಿತರಾಗಿರುವ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್ಗಳ ಸೀಟು ಹಂಚಿಕೆ ಮಾಡುವಾಗ ದ್ವಿತೀಯ ಪಿಯುಸಿಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಸಹ ಪರಿಗಣಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.