ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Education Authority – KEA) ಮತ್ತೊಮ್ಮೆ ಸಾಮಾನ್ಯ ಪ್ರವೇಶ ಪರೀಕ್ಷೆಯ (Common Entrance Test – CET) ಫಲಿತಾಂಶವನ್ನು ಮತ್ತೊಮ್ಮೆ ಪ್ರಕಟಿಸಲು ನಿರ್ಧರಿಸಿದೆ. ಸಿಬಿಎಸ್ಸಿ ಹಾಗೂ ಐಸಿಎಸ್ಸಿ ರಿಪಿಟರ್ಸ್ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಾಧಿಕಾರ ಮತ್ತೆ ಪ್ರಕಟಿಸಲಿದೆ. ರ್‍ಯಾಂಕ್ ಪಟ್ಟಿಯೂ ಮತ್ತೊಮ್ಮೆ ಅಪ್ಡೇಟ್ ಆಗಲಿದೆ. ರ್‍ಯಾಂಕ್ ಪಟ್ಟಿ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶ ಕುರಿತು ಪ್ರತಿಕ್ರಿಯಿಸಿದ್ದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ, ರ್‍ಯಾಂಕ್ ಪಟ್ಟಿ ನೀಡುವಾಗ ರಿಪೀಟರ್ಸ್ ಪಡೆದ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿದ್ದರು.
ಆದರೆ ವಿದ್ಯಾರ್ಥಿಗಳು ಹಾಗೂ ಪೋಷಕರು ರಿಪಿಟರ್ಸ್ ಪಡೆದ ಅಂಕಗಳನ್ನೂ ಪರಿಗಣಿಸಬೇಕೆಂದು ಒತ್ತಾಯಿಸಿದ್ದರು. ಒತ್ತಾಯದ ಕುರಿತು ಪ್ರತಿಕ್ರಿಯಿಸಿದ್ದ ಅವರು, ಈ ಬಗ್ಗೆ ಸಾಕಷ್ಟು ಅರ್ಜಿಗಳು ಈಗಾಗಲೇ ಬಂದಿವೆ. ಉನ್ನತ ಶಿಕ್ಷಣ ಸಚಿವರು ಸಹ ಪರಿಗಣಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಪರಿಶೀಲನೆಗೆ ಮುಂದಾಗಿದ್ದೇವೆ. ಇಂದು ಮಧ್ಯಾಹ್ನ 1 ಘಂಟೆಗೆ ಪರಿಷ್ಕೃತ ಸಿಇಟಿ ರ್‍ಯಾಂಕ್ ಪಟ್ಟಿಯು ವೆಬ್ಸೈಟ್ನಲ್ಲಿ ಅಪ್ಡೇಟ್ ಆಗಲಿದೆ. ನಿಯಮದ ಪ್ರಕಾರ ಈಗ ಬಂದಿರುವ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ತಿಳಿಸಿದ್ದರು.
ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರ ಮನವೊಲಿಸಲು ಯತ್ನಿಸಿದ ಪೊಲೀಸರು, ಇಲ್ಲಿ ಪ್ರತಿಭಟನೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಪ್ರತಿಭಟನೆ ಮಾಡಬೇಕಾಗಿದ್ದರೆ ಫ್ರೀಡಂ ಪಾರ್ಕ್ಗೆ ಹೋಗಿ. ಇಲ್ಲದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂದು ಸೂಚನೆ ನೀಡಿದರು. ಪೊಲೀಸರ ಮಾತು ಒಪ್ಪದ ವಿದ್ಯಾರ್ಥಿಗಳು ಹಾಗೂ ಪೋಷಕರು ಸ್ಥಳಕ್ಕೆ ಅಶ್ವತ್ಥ ನಾರಾಯಣ್ ಬರಬೇಕು ಎಂದು ಆಗ್ರಹಿಸಿದರು.
ಸಿಇಟಿ ಅಂಕದ ಜತೆ ಪಿಯು ಅಂಕ ಸೇರಿಸದೆ ಅನ್ಯಾಯ ಮಾಡಲಾಗಿದೆ ಎಂದು ಮಲ್ಲೇಶ್ವರಂ ಬಳಿ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿ ಮುಂದೆ ಸಿಇಟಿ (CET) ರಿಪೀಟರ್ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ಮಾಡಿದರು. ಕಳೆದ ಬಾರಿ ಕೊವಿಡ್ ಹಿನ್ನೆಲೆ ಪಿಯು ಪರೀಕ್ಷೆ ರದ್ದಾಗಿತ್ತು. ಆಗ ಕೇವಲ ಸಿಇಟಿ ಅಂಕ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಈ ವರ್ಷ ಸಿಇಟಿ ಜತೆ ಪಿಯು ಅಂಕವನ್ನು ಪರಿಗಣಿಸಲಾಗಿದೆ. ಅದೇ ರೀತಿ ನಮಗೂ ಸಿಇಟಿ, ಪಿಯು ಅಂಕ ಪರಿಗಣಿಸುವಂತೆ ಕೆಇಎ ಬೋರ್ಡ್ಗೆ ರಿಪೀಟರ್ ವಿದ್ಯಾರ್ಥಿಗಳು, ಪೋಷಕರಿಂದ ಆಗ್ರಹಿಸಿದರು.
ಕಳೆದ ಬಾರಿ 90 ಅಂಕ ಪಡೆದವರಿಗೂ 15000 ಒಳಗೆ ರ‍್ಯಾಂಕ್ ದೊರೆತಿತ್ತು. ಆದರೆ ಈ ಬಾರಿ 98 ಅಂಕ ಪಡೆದಿದ್ದರು ಸಹ 1 ಲಕ್ಷದ ಮೇಲೆ ರ‍್ಯಾಂಕಿಂಗ್ ದೊರೆತಿದೆ. ಈ ಸಮಸ್ಯೆ ಬಗೆಹರಿಸುವಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದು, ಕೆಇಎ ಮುಂದೆ ಪೋಷಕರು ಹಾಗೂ ರಿಪೀಟರ್ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದಾರೆ.
Published On - 2:13 pm, Mon, 1 August 22