Praveen Nettar: ಪ್ರವೀಣ್ ನೆಟ್ಟಾರು ಕೊಲೆಯಲ್ಲಿ ನೇರ ಭಾಗಿಯಾದ ಆರೋಪಿಗಳ ಸುಳಿವಿಲ್ಲ
ಕೊಲೆಗೆ ಸಹಕಾರ ಕೊಟ್ಟ ಆರೋಪಿಗಳನ್ನು ಮಾತ್ರವೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಖ್ಯ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ.
ಬೆಂಗಳೂರು: ಸುಳ್ಯ ತಾಲ್ಲೂಕು ಬೆಳ್ಳಾರೆಯ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಕೊಲೆಗೆ ಸಹಕಾರ ಕೊಟ್ಟ ಆರೋಪಿಗಳನ್ನು ಮಾತ್ರವೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ವಶದಲ್ಲಿರುವ ಶಫೀಕ್ ಮತ್ತು ಜಾಹೀರ್ ವಿಚಾರಣೆ ವೇಳೆ ಕೇವಲ ದಾರಿತಪ್ಪಿಸುವ ಹೇಳಿಕೆಗಳನ್ನಷ್ಟೇ ನೀಡುತ್ತಿದ್ದಾರೆ. ಇವರು ನೀಡುತ್ತಿರುವ ಬಹುತೇಕ ಹೇಳಿಕೆಗಳು ಕಟ್ಟುಕತೆಗಳಂತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ನಾವು ಯಾವುದೇ ತಪ್ಪು ಮಾಡಿಲ್ಲ. ಆರೋಪಿಗಳಿಗೆ ಸಹಕಾರ ಕೊಟ್ಟಿಲ್ಲ. ಕೇವಲ ಊಟ ತಂದು ಕೊಟ್ಟಿದ್ದಕ್ಕೆ ನೀವು ಬಂಧಿಸಿದ್ದೀರಿ. ನಾನು ನಮ್ಮ ಕೂಲಿ ಕಾರ್ಮಿಕರಿಗೆ ಊಟ ತಂದು ಕೊಟ್ಟಿದ್ದೇನೆ. ಪ್ರವೀಣ್ ಹತ್ಯೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ’ ಎಂದು ಹೇಳಿದ್ದಾರೆ. ಶಫೀಕ್ ಮತ್ತು ಜಾಹೀರ್ ಹೇಳಿಕೆಗಳಿಂದ ಪೊಲೀಸರು ಗೊಂದಲಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ಪತ್ತೆಯಾದವರ ಬಳಿಯೂ ಈ ಸಂಬಂಧ ಸಮರ್ಪಕ ಮಾಹಿತಿ ಲಭ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸರಿಗೆ ಪ್ರವೀಣ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಯಾರು ಎನ್ನುವುದು ತಲೆನೋವಾಗಿ ಪರಿಣಮಿಸಿದೆ.
ಮಂಗಳೂರು ಕಮಿಷನರ್ ಕಚೇರಿಯಲ್ಲಿ ಪ್ರವೀಣ್ ಸೂದ್ ಸಭೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ಐಜಿಪಿ ಪ್ರವೀಣ್ ಸೂದ್ ಸಭೆ ನಡೆಸಿದರು. ಪ್ರವೀಣ್ ಮತ್ತು ಫಾಜಿಲ್ ಕೊಲೆ ಪ್ರಕರಣದ ತನಿಖಾ ಪ್ರಗತಿ ಬಗ್ಗೆ ಮಾಹಿತಿ ಪಡೆದ ಅವರು, ಮುಂದಿನ ಹಂತದ ತನಿಖೆಯ ಬಗ್ಗೆ ಅಗತ್ಯ ಮಾರ್ಗದರ್ಶನ ಮಾಡಿದರು.
ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂರೂ ಪ್ರಕರಣಗಳ ತನಿಖೆಯ ಬಗ್ಗೆ ಚರ್ಚಿಸಿದ್ದೇನೆ. ಪೊಲೀಸರು ಸಮರ್ಪಕ ಜಾಡು ಹಿಡಿದೇ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಯಾರೇ ಇದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗದಂತೆ ನೋಡಿಕೊಳ್ಳುತ್ತೇವೆ ಎಂದರು ಭರವಸೆ ನೀಡಿದರು.
Published On - 3:16 pm, Mon, 1 August 22