ಬೆಂಗಳೂರು: ನಾಳೆ (ಜುಲೈ 12) ಚಾಮರಾಜಪೇಟೆ (Chamrajpet) ಬಂದ್ (Bandh) ಹಿನ್ನೆಲೆ ಚಾಮರಾಜಪೇಟೆಯಲ್ಲಿ ಬಿಗಿ ಪೊಲೀಸ್ (Police) ಬಂದೋಬಸ್ತ್ ಕೈಗೊಳ್ಳಲಾಗಿದೆ. 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ಬಂದೋಬಸ್ತ್ ಮಾಡಿದ್ದು, 2 ಡಿಸಿಪಿ, 10 ಎಸಿಪಿ, 20 ಇನ್ಸ್ಪೆಕ್ಟರ್, 120 ಪಿಎಸ್ಐ, 500ಕ್ಕೂ ಹೆಚ್ಚು ಜನ ಪೊಲೀಸ್ ಕಾನ್ಸ್ಟೇಬಲ್ಗಳನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷಣ್ ನಿಂಬರ್ಗಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.
ಬಂದ್ ಗೆ ಪೊಲೀಸ್ ಠಾಣೆಯಿಂದ ಯಾವುದೇ ಅನುಮತಿ ನೀಡಿಲ್ಲ. ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸ್ವಯಂ ಪ್ರೇರಿತವಾಗಿ ಬಂದ್ಗೆ ಕರೆ ನೀಡಿದೆ. ನಾಳೆ ಬಲವಂತದಿಂದ ಯಾರೂ ಅಂಗಡಿ – ಮುಂಗಟ್ಟು ಮುಚ್ಚಿಸುವಂತಿಲ್ಲ. ಒಂದ್ ವೇಳೆ ಬಲವಂತವಾಗಿ ಅಂಗಡಿ ಮುಚ್ಚಿಸಿದರೆ ಕೇಸ್ ದಾಖಲಾಗುವುದು. ಸರ್ಕಾರದಿಂದ ಅಥವಾ ಪೊಲೀಸ್ ಇಲಾಖೆಯಿಂದ ಬಂದ್ಗೆ ಅನುಮತಿ ನೀಡಿಲ್ಲ ಎಂದು ಟಿವಿ9 ಗೆ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಚಾಮರಾಜಪೇಟೆ ನಾಗರಿಕ ಒಕ್ಕೂಟ ನೀಡಿರುವ ಬಂದ್ ಕರೆಗೆ ಹಿಂದೂ ಜನಜಾಗೃತಿ ಸಮಿತಿ, ವಿಶ್ವ ಸನಾತನ ಪರಿಷತ್, ಶ್ರೀರಾಮಸೇನೆ, ಬಜರಂಗದಳ, ಹಿಂದೂ ಜಾಗರಣ ಸಮಿತಿ ಸೇರಿದಂತೆ ಹಲವು ಹಿಂದುತ್ವವಾದಿ ಸಂಘಟನೆಗಳು ಬೆಂಬಲ ಘೋಷಿಸಿವೆ.
50ಕ್ಕೂ ಹೆಚ್ಚು ಸಂಘಟನೆಗಳು ನೀಡಿರುವ ಬಂದ್ ಕರೆ ಯಶಸ್ವಿಯಾಗಬಹುದು ಎಂದು ಹೇಳಲಾಗುತ್ತಿದೆ. ಬಂದ್ ಕರೆ ಕುರಿತು ಜಾಗೃತಿ ಮೂಡಿಸಲು ನಾಗರಿಕ ಒಕ್ಕೂಟದ ಕಾರ್ಯಕರ್ತರು 10 ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಹಂಚಲು ಮುಂದಾಗಿದ್ದಾರೆ. ಅಂಗಡಿ, ಬ್ಯಾಂಕ್, ಶಾಲಾ-ಕಾಲೇಜು, ಮಾಲ್ಗಳಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಹಿಂದುತ್ವವಾದಿ ಸಂಘಟನೆಗಳ ಮುಖಂಡರಾದ ಮೋಹನ್ ಗೌಡ, ಭಾಸ್ಕರನ್ ಕರಪತ್ರ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಚಾಮರಾಜಪೇಟೆ ಬಂದ್ಗೆ ಬೆಂಬಲ ನೀಡುವಂತೆ ಮೈಕ್ ಅಳವಡಿಸಿರುವ ಆಟೊಗಳ ಮೂಲಕವೂ ಮನವಿ ಮಾಡಲಾಗುತ್ತಿದೆ. ನಾಳೆ ಒಂದು ದಿನದ ಮಟ್ಟಿಗೆ ಅಂಗಡಿ ಮುಂಗಟ್ಟು ತೆರೆಯಬೇಡಿ. ಮೈದಾನದ ಉಳಿವಿಗಾಗಿ ಕೈಜೋಡಿಸಿ ಎಂದು ಮುಖಂಡರು ಚಾಮರಾಜಪೇಟೆ ಕ್ಷೇತ್ರದ ಎಲ್ಲ 7 ವಾರ್ಡ್ಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಛಲವಾದಿಪಾಳ್ಯ, ಕೆ.ಆರ್.ಮಾರ್ಕೆಟ್, ಆಜಾದ್ನಗರ ವಾರ್ಡ್, ಚಾಮರಾಜಪೇಟೆ, ಪಾದರಾಯನಪುರ, ರಾಯಪುರ ವಾರ್ಡ್, ಜೆಜೆಆರ್ ನಗರ ವಾರ್ಡ್ಗಳಲ್ಲಿ ಮೈಕ್ ಕಟ್ಟಿರುವ ಆಟೊಗಳು ಸಂಚರಿಸುತ್ತಿವೆ.
Published On - 9:00 pm, Mon, 11 July 22