ಬೆಂಗಳೂರು: ನಗರದ ಚಾಮರಾಜಪೇಟೆ ಮೈದಾನದ ಗಣೇಶೋತ್ಸವ (Chamarajpet Ganeshotsav) ಗೊಂದಲ ಮತ್ತೊಂದು ಹಂತಕ್ಕೆ ತಲುಪಿದೆ. ಮೈದಾನದಲ್ಲಿ ಗಣೇಶನನ್ನು ಯಾರು ಕೂಡಿಸಬೇಕು ಎನ್ನುವ ಬಗ್ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಗಣೇಶೋತ್ಸವ ಸಮಿತಿ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಹಿಂದಿನ ಈದ್ಗಾ ಮೈದಾನವನ್ನು ಮುಸ್ಲಿಮರ ಹಿಡಿತದಿಂದ ಬಿಡಿಸಿಕೊಳ್ಳಲು ಹೋರಾಡಿದ್ದು ನಾವು ಎಂದು ಪ್ರತಿಪಾದಿಸುತ್ತಿರುವ ನಾಗರಿಕ ಒಕ್ಕೂಟವು ವಿನಾಯಕ ಪ್ರತಿಷ್ಠಾಪನೆಯ ಅವಕಾಶ ತನಗೇ ಸಿಗಬೇಕು ಎಂದು ಒತ್ತಾಯಿಸುತ್ತಿದೆ. ಆದರೆ ಈ ಒತ್ತಾಯವನ್ನು ಗಣಶೋತ್ಸವ ಸಮಿತಿ ಒಪ್ಪುತ್ತಿಲ್ಲ. ಮೈದಾನದಲ್ಲಿ 11 ದಿನ ಗಣೇಶನನ್ನು ಕೂಡಿಸಿ ಪೂಜಿಸುತ್ತೇವೆ ಎಂದು ಗಣೇಶೋತ್ಸವ ಸಮಿತಿ ಕೋರಿದೆ.
ಮೈದಾನದಲ್ಲಿ ಗಣೇಶನನ್ನು ಕೂಡಿಸಲು ಅನುಮತಿ ನೀಡಬೇಕು ಎಂದು ಕೋರಿ ಹಿಂದುತ್ವಪರ ಸಂಘಟನೆಗಳು, ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಗಣೇಶೋತ್ಸವ ಸಮಿತಿ ಮನವಿ ಸಲ್ಲಿಸಿವೆ. ಕಂದಾಯ ಇಲಾಖೆಯು ಈ ಕುರಿತು ತನ್ನ ಅಭಿಪ್ರಾಯವನ್ನು ಬಹಿರಂಗಪಡಿಸಿಲ್ಲ. ಈವರೆಗೂ ಯಾವ ಸಂಘಟನೆಗೂ ಗಣೇಶೋತ್ಸವಕ್ಕೆ ಅನುಮತಿ ಕೊಟ್ಟಿಲ್ಲ. ಏನು ತೀರ್ಮಾನ ತೆಗೆದುಕೊಂಡರೆ ಅದರ ಪರಿಣಾಮ ಏನಾಗುತ್ತದೆಯೋ ಎನ್ನುವ ಗೊಂದಲ ಕಂದಾಯ ಇಲಾಖೆಯನನ್ನು ಕಾಡುತ್ತಿದೆ.
ಚಾಮರಾಜಪೇಟೆ ಮೈದಾನದಲ್ಲಿ 3 ದಿನ ಗಣೇಶನನ್ನು ಕೂಡಿಸುತ್ತೇವೆ ಎಂದು ಒಕ್ಕೂಟದ ಪದಾಧಿಕಾರಿಗಳು ಹೇಳುತ್ತಿದ್ದಾರೆ. ಮೊದಲ ದಿನ ಪ್ರತಿಷ್ಠಾಪನೆ ಮತ್ತು ಪೂಜಾ ವಿಧಿಗಳನ್ನು ನಡೆಸಲಾಗುವುದು. ಎರಡನೇ ದಿನ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮೂರನೇ ದಿನ ಚಾಮರಾಜಪೇಟೆ ಸುತ್ತಮುತ್ತ ಅದ್ದೂರಿ ಮೆರವಣಿಗೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಒಕ್ಕೂಟ ಹೇಳುತ್ತಿದೆ.
ಮತ್ತೊಂದೆಡೆ ಬೆಂಗಳೂರು ಗಣೇಶೋತ್ಸವ ಸಮಿತಿಯು ಚಾಮರಾಜಪೇಟೆ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು ಕೋರಿದೆ. ಮೈದಾನದಲ್ಲಿ ಒಟ್ಟು 10 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಗಣೇಶೋತ್ಸವ ಸಮಿತಿ ಚಿಂತನೆ ನಡೆಸಿದೆ. 11ನೇ ದಿನ ಚಾಮರಾಜಪೇಟೆಯ ಗಲ್ಲಿಗಲ್ಲಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಗಣೇಶೋತ್ಸವ ಸಮಿತಿಯ ಪ್ರಸ್ತಾವಕ್ಕೆ ನಾಗರಿಕ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.
ಕಂದಾಯ ಇಲಾಖೆಯೇ ಗಣೇಶೋತ್ಸವ ನಡೆಸಬೇಕು. ಇಲ್ಲದಿದ್ದರೆ ಮುಜರಾಯಿ ಇಲಾಖೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಬೇಕು. ಈ ಎರಡೂ ಸಾಧ್ಯವಿಲ್ಲ ಎಂದಾದರೆ ಚಾಮರಾಜಪೇಟೆ ನಾಗರಿಕರ ಒಕ್ಕೂಟಕ್ಕೆ ಅನುಮತಿ ಕೊಡಬೇಕು. ನಮ್ಮೊಂದಿಗೆ ಎಲ್ಲ ಸಂಘಟನೆಗಳು ಸೇರಿ ಗಣೇಶೋತ್ಸವ ಆಚರಿಸುತ್ತೇವೆ. ಸ್ಥಳೀಯರು ನಾವು, ಜನರು ಐತಿಹಾಸಿಕ ಹಬ್ಬದ ಆಚರಣೆಗೆ ಕಾಯುತ್ತಿದ್ದಾರೆ ಎಂದು ‘ಟಿವಿ9’ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಪ್ರತಿಕ್ರಿಯಿಸಿದರು.
ಗಣಶೋತ್ಸವದಲ್ಲಿ ಸಾವರ್ಕರ್ ಘೋಷಣೆ
ಬೆಂಗಳೂರಿನಲ್ಲಿ ಈ ಬಾರಿ ಗಣೇಶೋತ್ಸವ ಸಂದರ್ಭದಲ್ಲಿ ಗಲ್ಲಿಗಲ್ಲಿಗಳಲ್ಲೂ ಸಾವರ್ಕರ್ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮ ರೂಪಿಸಿದೆ. ಗಣೇಶ ಪ್ರತಿಷ್ಠಾಪನೆಯಾದ ಸ್ಥಳಗಳಲ್ಲಿ ದೇಶಭಕ್ತರ ಸ್ಮರಣೆಗೂ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ನಿನ್ನೆ ನಡೆಸಿದ ವಿವಿಧ ಸಂಘಟನೆಯ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪೋಟೊ ಜೊತೆಗೆ ಗಣೇಶೋತ್ಸವ ಆಚರಿಸಲಾಗುವುದು. ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲಾಗುವುದು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಹೇಳಿದ್ದಾರೆ.
Published On - 9:20 am, Mon, 22 August 22