Chamrajpet Idgah Maidan: ಮತ್ತೊಂದು ಮಜಲಿಗೆ ಚಾಮರಾಜಪೇಟೆ ಮೈದಾನ ವಿವಾದ; ಗೋಡೆ ಉರುಳಿಸುವ ಪರ-ವಿರುದ್ಧ ವಾಗ್ವಾದ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 08, 2022 | 12:28 PM

ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದಾದ ಮೇಲೆ ಅದರಲ್ಲಿ ಗೋಡೆ ಏಕಿರಬೇಕು ಎಂದು ಹಿಂದುತ್ವ ಪರ ಸಂಘಟನೆ ವಿಶ್ವ ಸನಾತನ ಪರಿಷತ್​ನ ನಾಯಕ ಭಾಸ್ಕರನ್ ಪ್ರಶ್ನಿಸಿದ್ದಾರೆ.

Chamrajpet Idgah Maidan: ಮತ್ತೊಂದು ಮಜಲಿಗೆ ಚಾಮರಾಜಪೇಟೆ ಮೈದಾನ ವಿವಾದ; ಗೋಡೆ ಉರುಳಿಸುವ ಪರ-ವಿರುದ್ಧ ವಾಗ್ವಾದ
ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Follow us on

ಬೆಂಗಳೂರು: ನಗರದ ಚಾಮರಾಜಪೇಟೆ (ಈದ್ಗಾ) ಮೈದಾನ (Chamrajpet Idgah Maidan) ವಿವಾದ ಮತ್ತೊಂದು ಮಜಲಿಗೆ ತಲುಪಿದೆ. ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದಾದ ಮೇಲೆ ಅದರಲ್ಲಿ ಗೋಡೆ ಏಕಿರಬೇಕು ಎಂದು ಹಿಂದುತ್ವ ಪರ ಸಂಘಟನೆ ವಿಶ್ವ ಸನಾತನ ಪರಿಷತ್​ನ ನಾಯಕ ಭಾಸ್ಕರನ್ ಪ್ರಶ್ನಿಸಿದ್ದಾರೆ. ಈ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿರುವ ಮುಸ್ಲಿಂ ಮುಖಂಡ ಮೊಹಮದ್ ಖಾಲಿದ್, ಗೋಡೆ ಉರುಳಿಸುವುದರಿಂದ ಸಂಘಟನೆಯವರಿಗೆ ಏನು ಸಿಗುತ್ತದೆ ಎಂದು ಕೇಳಿದ್ದಾರೆ.

‘ಈದ್ಗಾ ಮೈದಾನದ ಗೋಡೆಗೆ ನೂರಾರು ವರ್ಷಗಳ ಇತಿಹಾಸವಿದೆ. ಗೋಡೆ ಉರುಳಿಸುವುದರಿಂದ ಸಂಘಟನೆಯವರಿಗೆ ಏನು ತಾನೆ ಸಿಗಲು ಸಾಧ್ಯ? ಹಳೆಯ ಕಟ್ಟಡಗಳನ್ನು ಕೆಡವಿ ಏನನ್ನು ಸಾಧಿಸಲು ಹೊರಟಿದ್ದೀರಿ? ಹಿಂದುತ್ವವಾದಿ ಸಂಘಟನೆಗಳಿಗೆ ಒಡೆಯೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಶಾಲೆ, ಕಾಲೇಜು, ಆಸ್ಪತ್ರೆ, ಫ್ಲೈಓವರ್, ವಿಶ್ವವಿದ್ಯಾಲಯಗಳನ್ನು ಕಟ್ಟಲು ಪ್ರಯತ್ನ ಮಾಡಿದ್ದೀರಾ ಎಂದು ಪ್ರಶ್ನಿಸಿರುವ ಅವರು, ‘ಒಡೆಯುವವರ ಕೈಲಿ ಎಂದಿಗೂ ದೇಶ ಕಟ್ಟಲು ಸಾಧ್ಯವಿಲ್ಲ’ ಎಂದು ಹೇಳಿದರು.

ಮೈದಾನವನ್ನು ಹಿಂದೂಗಳು ಬಳಸಿಕೊಂಡರೆ ಪರವಾಗಿಲ್ಲ. ಹಾಗೆಂದು ಇಲ್ಲಿನ ಕುರುಹುಗಳನ್ನ ನಾಶಪಡಿಸುವುದೇಕೆ? ಮನುಷ್ಯನಿಗೆ ಇತಿಮಿತಿಗಳನ್ನು ಇರಿಸಿಕೊಳ್ಳಬಹುದು. ಆದರೆ ನಿರ್ಜೀವ, ಪ್ರಾಚ್ಯ ಕಟ್ಟಡಗಳ್ನು ಕೆಡವಿ ಏನು ಸಾಧನೆ ಮಾಡಬೇಕು ಎಂದುಕೊಂಡಿದ್ದೀರಿ? ಬಾಬರ್ ಮಸೀದಿ ಒಡೆದಿರಿ, ದರ್ಗಾ, ಈದ್ಗಾ ಗೋಡೆಗಳನ್ನು ಒಡೆದಿರಿ. ನಿಮ್ಮಿಂದ ದೇಶ ಕಟ್ಟಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಗೋಡೆಯಿಂದ ಹಿಂದೂಗಳಿಗೆ ಅಡಚಣೆ

ಈದ್ಗಾ ಮೈದಾನವು ಕಂದಾಯ ಇಲಾಖೆಯ ಸ್ವತ್ತು ಎಂದಾದರೆ ಅದರಲ್ಲಿ ಗೋಡೆ ಏಕಿರಬೇಕು? ಗೋಡೆಯಿಂದ ಹಿಂದೂ ಹಬ್ಬಗಳ ಆಚರಣೆಗೆ ಅಡ್ಡಿಯಾಗುತ್ತದೆ ಎಂದು ವಿಶ್ವ ಸನಾತನ ಪರಿಷತ್​​ನ ಅಧ್ಯಕ್ಷ ಭಾಸ್ಕರನ್ ಹೇಳಿದ್ದಾರೆ. ಚಾಮರಾಜಪೇಟೆ ಮೈದಾನದಲ್ಲಿರುವ ಮೈದಾನದ ಈದ್ಗಾ ಗೋಡೆ ನೆಲಸಮಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೈದಾನವು ಕಂದಾಯ ಇಲಾಖೆಯ ಸ್ವತ್ತು ಎಂದಾದರೆ ಅದರಲ್ಲಿ ಏಕೆ ಇರಬೇಕು? ಬೇರೆಡೆಗೆ ಸ್ಥಳಾಂತರಕ್ಕೆ ಜಾಗ ಇರುವಾಗ ಈ ಮೈದಾನವೇಕೆ? ಗಣೇಶೋತ್ಸವ ವೇಳೆ ಗೋಡೆ ಮೇಲೆ ಲೇಜರ್ ಲೈಟ್ ಬೀಳಲ್ವಾ? ಹುಬ್ಬಳ್ಳಿಯಲ್ಲಿ ಆದ ಘಟನೆ ಇಲ್ಲೂ ಆದರೆ ಏನು ಮಾಡೋದು ಎಂದು ಕೇಳಿರುವ ಅವರು ಮೈದಾನದ ಈದ್ಗಾ ಗೋಡೆ ನೆಲಸಮಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಈ ಸಂಬಂಧ ಎಲ್ಲರೂ ಸೇರಿ ಹೋರಾಡುತ್ತೇವೆ ಎಂದು ಘೋಷಿಸಿದರು.

ಬಾಡಿಗೆ ಮನೆಯಿಂದ ಭೋಗ್ಯಕ್ಕೆ ಹೋದ್ಮೇಲೆ ಬಾಡಿಗೆ ಮನೆಯ ಕೀ ಕೊಡಬೇಕಲ್ವಾ? ಬಾಡಿಕೆ ಮನೆ ಹಾಗೂ ಲೀಸ್​ದ ಎರಡೂ ಮನೆಯ ಕೀ ಕೊಡದಿದ್ದರೆ ಹೇಗೆ ಎಂದು ಸೂಚ್ಯವಾಗಿ ಪ್ರಶ್ನಿಸಿದರು. ಸದ್ಯ ವಕ್ಫ್ ಮಂಡಳಿಯು ಇದೇ ರೀತಿ ನಡೆದುಕೊಳ್ಳುತ್ತಿದೆ. ಬದಲಿ ಈದ್ಗಾ ಕೊಟ್ಟಿರುವುದರಿಂದ ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಲಿ. ಈ ವಿಚಾರವಾಗಿ ಗಟ್ಟಿ ನಿಲುವು ತೆಗೆದುಕೊಳ್ಳೋಕೆ ಸರ್ಕಾರ ಹಿಂಜರಿಯಬಾರದು. ಈ ಗೋಡೆಯ ವಿಚಾರವನ್ನೇ ದೊಡ್ಡದು ಮಾಡಿಕೊಂಡು ನಂತರದ ದಿನಗಳಲ್ಲಿ ಹಿಂದೂಗಳ ಹೆಣ ಉರುಳಿಸಬೇಡಿ. ಸ್ಥಳಾಂತರ ಮಾಡದೆ ಹೋದರೆ ನೆಲಸಮ ಮಾಡಿ ಸಂಪೂರ್ಣವಾಗಿ ಮೈದಾನ ಬಿಟ್ಟು ಕೊಡಿ. ಈ ವಿವಾದ ನಮ್ಮ ಕಾಲಕ್ಕೆ ಮುಗಿಸಿ, ದೀರ್ಘ ಕಾಲ ಎಳೆಯಬೇಡಿ ಎಂದು ಕೋರಿದರು.

ಈ ವಿವಾದವು ಸಂಪೂರ್ಣ ಇತ್ಯರ್ಥವಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಹಿಂದೂ ಜನಜಾಗೃತಿ ಸಮಿತಿ, ವಿಶ್ವ ಸನಾತನ ಪರಿಷತ್, ಚಾಮರಾಜಪೇಟೆ ನಾಗರೀಕರ ಒಕ್ಕೂಟ ಸೇರಿದಂತೆ ಹಲವು ಹಿಂದುತ್ವವಾದಿ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ.

ಪೊಲೀಸ್ ಬಂದೋಬಸ್ತ್

ಚಾಮರಾಜಪೇಟೆಯ ಮೈದಾನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೈದಾನದ ಸುತ್ತಲೂ ಪೊಲೀಸ್ ಬಂದೋಬ್ತ್ ಮುಂದುವರಿಸಲಾಗಿದೆ. ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಕೆಎಸ್​ಆರ್​ಪಿ ತುಕಡಿ ಸಹ ಬೀಡುಬಿಟ್ಟಿದೆ. ಮೈದಾನದ ಬಳಿ ಪ್ರತಿಭಟನೆ ಅಥವಾ ಸಂಭ್ರಮಾಚರಣೆಗೆ ಅವಕಾಶವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೂರು 3 ಹೊಯ್ಸಳ ವಾಹನಗಳು ಹಾಗೂ ಪೊಲೀಸ್ ಜೀಪ್ ಸಹ ಮೈದಾನದಲ್ಲಿದೆ. ಮೈದಾನದ ಬಳಿ ಗುಂಪು ಸೇರದಂತೆಯೂ ಸೂಚನೆ ನೀಡಲಾಗಿದೆ.

Published On - 12:28 pm, Mon, 8 August 22