R Ashok: ಲಂಬಾಣಿ ತಾಂಡಾ, ಕುರುಬರಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನಮಾನ; ಅಧಿಸೂಚನೆಗೆ ಸರ್ಕಾರ ನಿರ್ಧಾರ
Gazette Notification: 1847 ಜನವಸತಿಗಳನ್ನು ಕಂದಾಯಗ್ರಾಮಗಳೆಂದು ಘೋಷಿಸಲು ಅಧಿಸೂಚನೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರು: ಕಂದಾಯ ಗ್ರಾಮಗಳ (Revenue Village) ಸ್ಥಾನಮಾನ ಪಡೆಯದ ಕಾರಣ ಹಲವು ಸೌಲಭ್ಯಗಳಿಂದ ವಂಚಿತವಾಗಿರುವ ಲಂಬಾಣಿ ತಾಂಡಾ (Lambani Tanda) ಹಾಗೂ ಕುರುಬರಹಟ್ಟಿಗಳಿಗೆ (Kurubarahatti) ಕಾಯಕಲ್ಪ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಒಟ್ಟು 3227 ಇಂಥ ಜನವಸತಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ 1847 ಜನವಸತಿಗಳನ್ನು ಕಂದಾಯಗ್ರಾಮಗಳೆಂದು ಘೋಷಿಸಲು ಅಧಿಸೂಚನೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ (R Ashok) ಹೇಳಿದರು. ಸರ್ಕಾರವು ಗೆಜೆಟ್ ನೊಟಿಫಿಕೇಶನ್ (Gazette Notification) ಮಾಡಿದ ನಂತರ ಈ ಜನವಸತಿಗಳಿಗೆ ಕಂದಾಯ ಗ್ರಾಮಗಳ ಸ್ಥಾನಮಾನ ಸಿಗಲಿದೆ ಎಂದು ಅಶೋಕ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ರಾಜೀವ್ ಅವರು ಇದೀಗ ಲಂಬಾಣಿ ತಾಂಡಾದ ಅಧ್ಯಕ್ಷರಾಗಿದ್ದಾರೆ. ಮುಂದಿನ ದಿನಗಳಲ್ಲಿ ಲಂಬಾಣಿ ಬಂಧುಗಳ ಅಭಿವೃದ್ಧಿಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕಲಬುರ್ಗಿ ಮತ್ತು ಯಾದಗಿರಿಯಲ್ಲಿ ಹೆಚ್ಚಿನ ಸಂಖ್ಯೆಯ ಲಂಬಾಣಿ ಜನರಿದ್ದಾರೆ. ಇಷ್ಟು ದಿನ ಅವರನ್ನು ಅಲೆಮಾರಿಗಳ ರೀತಿ ನೋಡಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಈ ವಾತಾವರಣ ಬದಲಿಸುತ್ತೇವೆ ಎಂದು ಹೇಳಿದರು.
ಅದೇ ಸಮುದಾಯದಿಂದ ಬಂದ ನಾಯಕರು ಸಹ ಲಂಬಾಣಿ ತಾಂಡಾ ಮತ್ತು ಕುರುಬರಹಟ್ಟಿಗಳಿಗೆ ಕಾಯಕಲ್ಪ ಕಲ್ಪಿಸುವ ಕೆಲಸ ಮಾಡಿರಲಿಲ್ಲ. ಯಾವುದೇ ಸರ್ಕಾರ ಅವರ ಬೇಡಿಕೆಗಳಿಗೆ ಗಮನ ಹರಿಸಿರಲಿಲ್ಲ. ಇದೀಗ ಅವರು ವಾಸಿಸುತ್ತಿರುವ ಸ್ಥಳವನ್ನು ಕಂದಾಯ ಗ್ರಾಮವಾಗಿ ಪರಿಗಣಿಸಲು ನಿರ್ಧರಿಸಿದ್ದೇವೆ. ಅವರು ಮನೆ ಕಟ್ಟಿಕೊಂಡಿರುವುದಿಲ್ಲ. ಕೇವಲ ಶೀಟ್ ಹಾಕಿಕೊಂಡು ಮನೆಯ ಆಕಾರ ರೂಪಿಸಿಕೊಂಡಿರುತ್ತಾರೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಇಂಥ ಜನವಸತಿಗಳನ್ನು ಕಂದಾಯಗ್ರಾಮ ಎಂದು ಘೋಷಿಸಿ, ನೆಲೆ ಕಲ್ಪಿಸಲು ನಮ್ಮ ಸರ್ಕಾರ ಮುಂದಾಗಿದೆ. ಅವರಿಗೆ ಯಾವುದೇ ದಾಖಲೆ ಇರುವುದಿಲ್ಲ. ಸುಮ್ಮನೆ ವಾಸ ಮಾಡುತ್ತಿರುತ್ತಾರೆ. ಇಡೀ ರಾಜ್ಯದಲ್ಲಿ 3227 ತಾಂಡಾ ಮತ್ತು ಕುರುಬರಹಟ್ಟಿಗಳನ್ನು ಗುರುತಿಸಲಾಗಿದೆ. 1847 ಪ್ರಾಥಮಿಕ ಅಧಿಸೂಚನೆ ಮತ್ತು 1147ಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ್ದೇವೆ. ಶೀಘ್ರದಲ್ಲಿಯೇ ಗೆಜೆಟ್ ನೋಟಿಫಿಕೇಶನ್ ಹೊರಡಿಸುತ್ತೇವೆ ಎಂದು ಹೇಳಿದರು.
ಶ್ರೀರಂಗಪಟ್ಟಣದಲ್ಲಿ 60 ವರ್ಷದಿಂದ ಕೆಆರ್ಎಸ್ ಡ್ಯಾಮ್ ಕಟ್ಟಲು ಬಂದವರು ವಾಸವಿದ್ದರು. ಅವರನ್ನು ನಾನು ಭೇಟಿ ಮಾಡಿ, ಅವರಿಗೆ ಹಕ್ಕುಪತ್ರ ಕೊಟ್ಟು ಬಂದಿದ್ದೇನೆ. 740 ಜನರಿಗೆ ಭೂಮಿಯನ್ನು ನೋಂದಣಿ ಮಾಡಿಕೊಡಲು ಸೂಚಿಸಿದ್ದೇನೆ ಎಂದು ಹೇಳಿದರು.
ಸರ್ಕಾರಿ ಜಮೀನಿನಲ್ಲಿರುವವರಿಗೆ ಮೊದಲು ಹಕ್ಕುಪತ್ರ ಕೊಡುತ್ತೇವೆ. ಯಾದಗಿರಿ ಮತ್ತು ಕಲಬುರ್ಗಿಯಲ್ಲಿ ಎರಡು ತಿಂಗಳ ಒಳಗೆ ಸುಮಾರು 20,000 ಜನರಿಗೆ ಹಕ್ಕುಪತ್ರ ಕೊಡಲು ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದೇವೆ. ಖಾಸಗಿ ಜಮೀನುಗಳಲ್ಲಿ ವಾಸವಿರುವವರ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಅದಕ್ಕಾಗಿ ಪ್ರತ್ಯೇಕ ಅಧಿಸೂಚನೆ ಹೊರಡಿಸಿ ಪರಿಹಾರ ಕೊಟ್ಟು ಭೂಮಿ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಒಮ್ಮೆ ಕಂದಾಯ ಗ್ರಾಮ ಎಂದು ಘೋಷಣೆಯಾದರೆ ಅಲ್ಲಿನ ನಿವಾಸಿಗಳಿಗೆ ಅಗತ್ಯ ದಾಖಲೆಗಳು ಲಭ್ಯವಾಗುತ್ತವೆ. ಅದನ್ನು ಸಲ್ಲಿಸಿ ಅವರು ಸಾಲಸೌಲಭ್ಯ ಸೇರಿದಂತೆ ಹಲವು ಅನುಕೂಲ ಪಡೆದುಕೊಳ್ಳಬಹುದು. ಕಲಬುರ್ಗಿ ಮತ್ತು ಯಾದಗಿರಿಯಲ್ಲಿ ಶೀಘ್ರ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಈ ಎರಡು ಜಿಲ್ಲೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಲಂಬಾಣಿಗಳು ಇದ್ದಾರೆ ಎಂದು ಹೇಳಿದರು.
Published On - 2:36 pm, Mon, 8 August 22