ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪಟ್ಟು: ಶಾಂತಿಸಭೆ ಕರೆದ ಪೊಲೀಸರು
ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತೇವೆ. ಆದರೆ ಹಬ್ಬಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ. ಆದರೆ ಹಿಂದುತ್ವ ಪರ ಸಂಘಟನೆಗಳು ಸಹ ತಮ್ಮ ಪಟ್ಟು ಸಡಿಲಿಸಿಲ್ಲ.
ಬೆಂಗಳೂರು: ನಗರದ ಚಾಮರಾಜಪೇಟೆ ಮೈದಾನ ವಿವಾದವು ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಮೈದಾನವು ಕಂದಾಯ ಇಲಾಖೆ ಸುಪರ್ದಿಯಲ್ಲಿದೆ ಎಂಬ ಬಿಬಿಎಂಪಿ ಜಂಟಿ ಆಯುಕ್ತರ ಹೇಳಿಕೆಯನ್ನು ಕಂದಾಯ ಸಚಿವ ಆರ್.ಅಶೋಕ್ ಸಮರ್ಥಿಸಿಕೊಂಡಿದ್ದಾರೆ. ಮೈದಾನದಲ್ಲಿ ಯಾವ ಚಟುವಟಿಕೆ ನಡೆಸಬಹುದು ಮತ್ತು ಯಾರಿಗೆ ಅದರ ಬಳಕೆಗೆ ಅವಕಾಶ ನೀಡಬೇಕು ಎನ್ನುವುದು ಕಂದಾಯ ಇಲಾಖೆಯ ವಿವೇಚನೆಗೆ ಬಿಟ್ಟ ವಿಚಾರ ಎಂದು ಸಚಿವ ಅಶೋಕ್ ಹೇಳಿದ ನಂತರ ವಿವಾದ ಮತ್ತೊಂದು ಸ್ವರೂಪಕ್ಕೆ ಹೊರಳಿಕೊಂಡಿದೆ. ‘ಇದು ಈದ್ಗಾ ಮೈದಾನ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಸುಪ್ರೀಂಕೋರ್ಟ್ ತೀರ್ಪು ಸಹ ಇದನ್ನೇ ಹೇಳಿದೆ’ ಎಂದು ಮುಸ್ಲಿಂ ಮುಖಂಡರು ವಾದಿಸುತ್ತಿದ್ದಾರೆ. ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡುತ್ತೇವೆ. ಆದರೆ ಹಬ್ಬಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ. ಮತ್ತೊಂದೆಡೆ ಹಿಂದುತ್ವ ಪರ ಸಂಘಟನೆಗಳು ಸಹ ತಮ್ಮ ಪಟ್ಟು ಸಡಿಲಿಸಿಲ್ಲ. ‘ಮೈದಾನದಲ್ಲಿ ಗಣೇಶೋತ್ಸವ ಆಚರಿಸುತ್ತೇವೆ’ ಎಂದು ಮುಖಂಡರು ಘೋಷಿಸಿದ್ದಾರೆ.
ಜಮೀರ್ ಹೇಳಿಕೆಗೆ ಕಿಡಿ
ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿರುವ ಹಿಂದುತ್ವಪರ ಸಂಘಟನೆಗಳ ಕಾರ್ಯಕರ್ತರು, ಶಾಸಕ ಜಮೀರ್ ಹೇಳಿಕೆಗೆ ಕಿಡಿಕಾರಿದ್ದಾರೆ. ಮೈದಾನದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಎನ್ನುವ ಜಮೀರ್ ಹೇಳಿಕೆ ಖಂಡಿಸಿರುವ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್, ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲವೆನ್ನಲು ಜಮೀರ್ ಯಾರು ಎಂದು ಪ್ರಶ್ನಿಸಿದ್ದಾರೆ. ಆ ಮೈದಾನ ಜಮೀರ್ ಹೆಂಡತಿಯಿಂದ ಬಂದ ವರದಕ್ಷಿಣೆನಾ? ಕೊಡಲ್ಲ ಅಂತ ಹೇಳೋಕೆ ಜಮೀರ್ ಯಾರು? ಅದು ಶಾಸಕರ ಸ್ವಂತ ಆಸ್ತಿ ಅಲ್ಲ ಎಂದು ಹೇಳಿದರು.
ಇದ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶನ ಹಬ್ಬವನ್ನು ಒಟ್ಟಿಗೆ ಮಾಡುತ್ತೇವೆ. ನಾಳೆ ಮಧ್ಯಾಹ್ನ 3.30ಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಪ್ರಮೋದ್ ಮುತಾಲಿಕ್ ನೇತೃತ್ವದ ನಿಯೋಗದೊಂದಿಗೆ ಭೇಟಿಯಾಗುತ್ತೇನೆ. ಅನುಮತಿ ನೀಡದಿದ್ದರೆ ಪ್ರತಿಭಟನೆ ಮಾಡುತ್ತೇವೆ, ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಘೋಷಿಸಿದರು.
ಇದೇ ಮೈದಾನದಲ್ಲಿ ಮುಸ್ಲಿಮರು ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡುತ್ತಿದ್ದಾರೆ. ಅದು ಧಾರ್ಮಿಕ ಆಚರಣೆ ಅಲ್ಲವೇ? ಹಿಂದೂಗಳಿಗೆ ಒಂದು ನ್ಯಾಯ, ಮುಸ್ಲಿಮರಿಗೆ ಮತ್ತೊಂದು ನ್ಯಾಯ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಚಾಮರಾಜಪೇಟೆ ಮೈದಾನವು ಕಂದಾಯ ಇಲಾಖೆಯ ಸ್ವತ್ತು, ಸರ್ಕಾರದ ಆಸ್ತಿ. ಅದು ಶಾಸಕರ ಸ್ವಂತ ಆಸ್ತಿ ಅಲ್ಲ ಎಂದು ಹೇಳಿದರು.
ಪೇಚಿಗೆ ಸಿಲುಕಿದ ಪೊಲೀಸ್ ಇಲಾಖೆ
ಮೈದಾನವನ್ನು ಪ್ರಾರ್ಥನೆಗೆ ನೀಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಹಿಂದುಮುಂದು ನೋಡುತ್ತಿದೆ. ಹಿಂದೂ ಮತ್ತು ಮುಸ್ಲಿಂ ಮುಖಂಡರನ್ನು ಇಂದು (ಆಗಸ್ಟ್ 9) ಸಂಜೆ 4.30ಕ್ಕೆ ಶಾಂತಿಸಭೆಗೆ ಆಹ್ವಾನಿಸಿದೆ. ಕನ್ನಡ ಸಂಘಟನೆಗಳು, ಹಿಂದುತ್ವವಾದಿ ಸಂಘಟನೆಗಳು, ಚಾಮರಾಜಪೇಟೆ ನಾಗರಿಕ ವೇದಿಕೆ, ಸ್ಥಳೀಯ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸ್ಥಳೀಯ ಎಸಿಪಿ, ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಸೌಹಾರ್ದದಿಂದ ಸ್ವಾತಂತ್ರ ದಿನ ಆಚರಿಸಬೇಕು ಎಂದು ಸಭೆಯಲ್ಲಿ ಮುಖಂಡರ ಮನವೊಲಿಸಲು ಪೊಲೀಸರು ಯತ್ನಿಸಲಿದ್ದಾರೆ.
ಸರ್ಕಾರದ ಸೂಚನೆಯಂತೆ ಕ್ರಮ: ಪ್ರತಾಪ್ ರೆಡ್ಡಿ
ಚಾಮರಾಜಪೇಟೆ ಈದ್ಗಾ ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಹೇಳಿದೆ. ಮೈದಾನದ ಬಳಿ ಸಂಪೂರ್ಣ ಭದ್ರತೆ ಒದಗಿಸಲಾಗಿದೆ. ಸರ್ಕಾರ ನೀಡುವ ನಿರ್ದೇಶನಕ್ಕೆ ಅನುಗುಣವಾಗಿ ವ್ಯವಸ್ಥೆ ಮಾಡುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು.
Published On - 1:16 pm, Tue, 9 August 22