Chamrajpet Idgah Maidan: ಬಿಬಿಎಂಪಿ ಮೈದಾನದಲ್ಲಿ ಹಬ್ಬಗಳ ಆಚರಣೆಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ; ಪಿಸಿ ಮೋಹನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 14, 2022 | 11:23 AM

ಬಿಬಿಎಂಪಿ ಆಟದ ಮೈದಾನ. ಇಲ್ಲಿ ಹಬ್ಬಗಳ ಆಚರಣೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ ಎಂದು ನುಡಿದರು.

Chamrajpet Idgah Maidan: ಬಿಬಿಎಂಪಿ ಮೈದಾನದಲ್ಲಿ ಹಬ್ಬಗಳ ಆಚರಣೆಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ; ಪಿಸಿ ಮೋಹನ್
ಚಾಮರಾಜಪೇಟೆ ಈದ್ಗಾ ಮೈದಾನ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಅಂತ್ಯ ಕಾಣದ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ (PC Mohan) ಅವರು ಗುರುವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಚಾಮರಾಜಪೇಟೆ ಮೈದಾನವು ಈದ್ಗಾ ಮೈದಾನವೋ (Chamrajpet Idgah Maidan) ಅಥವಾ ಆಟದ ಅಂಗಳವೋ ಎಂಬ ಬಗ್ಗೆ ತೀರ್ಮಾನ ಮಾಡಬೇಕು ಎಂದು ಅವರು ಆಯುಕ್ತರಿಗೆ ಮನವಿ ಮಾಡಲಿದ್ದಾರೆ. ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪಿ.ಸಿ.ಮೋಹನ್ ವಿನಂತಿಸಲಿದ್ದಾರೆ. ಕೆಲ ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಸಹ ಪಿ.ಸಿ.ಮೋಹನ್ ಅವರ ಜೊತೆ ಇದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಪಿ.ಸಿ.ಮೋಹನ್, ಜುಲೈ 12ರಂದು ಚಾಮರಾಜಪೇಟೆ ಬಂದ್ ಯಶಸ್ವಿಯಾಗಿ ನಡೆಯಿತು. ಸ್ಥಳೀಯರ ಕರೆಗೆ ಅಂಗಡಿ ಮಾಲೀಕರು ಸಂಪೂರ್ಣ ಬೆಂಬಲ ನೀಡಿದ್ದರು. ಬಂದ್​ಗೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಚಾಮರಾಜಪೇಟೆ ಆಟದ ಮೈದಾನದವಾಗಿಯೇ ಇರುತ್ತದೆ. ಅದು ಬಿಬಿಎಂಪಿ ಆಟದ ಮೈದಾನ. ಇಲ್ಲಿ ಹಬ್ಬಗಳ ಆಚರಣೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ ಎಂದು ನುಡಿದರು.

ಸ್ವಾತಂತ್ರ್ಯ ಬಂದು‌ 75 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಅದೇ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲಿದ್ದೇವೆ. ಒಂದು ವೇಳೆ ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಕೊಡದಿದ್ದರೆ ಅದು ದೇಶಕ್ಕೆ ಮಾಡಿದ ಅವಮಾನವಾಗುತ್ತದೆ. ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಿಸಲು ಅನುಮತಿ‌ ಕೊಡಲೇಬೇಕು ಎಂದು ತಿಳಿಸಿದರು.

ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ, ಗಣೇಶ ಉತ್ಸವ ಮಾಡಲು ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ. ಇದು ಬಿಬಿಎಂಪಿ ಆಟದ ಮೈದಾನವಾಗಿರುವುದರಿಂದ ಅದಕ್ಕೆ ‘ಜಯಚಾಮರಾಜೇಂದ್ರ ಆಟದ ಮೈದಾನ’ ಎಂಬ ಹೆಸರಿಡಲು ನಾನು ಆಗ್ರಹಿಸಿದ್ದೇನೆ. ಇಲ್ಲಿ ಯಾರೂ ದೇಶ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ಹೀಗಾಗಿ ನಮಗೂ ಹಬ್ಬದ ಆಚರಣೆಗೆ ಅವಕಾಶ ಕೊಡಬೇಕು ಎಂದು ಒತ್ತಾಯ ಮಾಡಿದರು.

ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು, ವಾರದ ಒಳಗೆ ತೀರ್ಮಾನ ಮಾಡುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ. ಅನುಮತಿ ಕೊಡದಿದ್ದರೂ ರಾಷ್ಟ್ರಧ್ವಜ ಹಾರಿಸಿಯೇ ತೀರುತ್ತೇವೆ. ಚಾಮರಾಜಪೇಟೆ ಆಟದ ಮೈದಾನ ಸರ್ಕಾರದ ಸ್ವತ್ತು. ವರ್ಷಕ್ಕೊಂದು ಸಲ ಮೈದಾನವನ್ನು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಕೊಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ಹೇಳಿದರು.

ಬೃಹತ್ ಬೈಕ್ ಜಾಥಾಕ್ಕೆ ನಿರ್ಧಾರ

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಬಂದ್ ಬಳಿಕ ಮತ್ತೊಂದು ಹೋರಾಟ ತೀವ್ರಗೊಳಿಸಲು ಸಿದ್ಧತೆ. ನಾಗರಿಕರ ಒಕ್ಕೂಟವು ಬೃಹತ್ ಬೈಕ್ ರ‍್ಯಾಲಿ ನಡೆಸಲು ಕರೆ ನೀಡಲಾಗಿದೆ. ಇಇದು ಆಟದ ಮೈದಾನವಾಗಿಯೇ ಉಳಿಯಬೇಕು ಎಂದು ಒತ್ತಾಯಿಸಿ ಶುಕ್ರವಾರ (ಜುಲೈ 15) ಚಾಮರಾಜಪೇಟೆಯ ಪ್ರಮುಖ ರಸ್ತೆಗಳಲ್ಲಿ ಹಿಂದುತ್ವವಾದಿ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರ‍್ಯಾಲಿ ನಡೆಸಲಿದ್ದಾರೆ.

ರ‍್ಯಾಲಿ ಬಳಿಕ ಬಿಬಿಎಂಪಿ ಆಯುಕ್ತರಿಗೆ ಘೇರಾವ್ ಮಾಡಲು ಚಿಂತನೆ ನಡೆದಿದೆ. ಈ ಸಂಬಂಧ ಇಂದು ತುಷಾರ್ ಗಿರಿನಾಥ್ ಅವ​ರನ್ನು ಭೇಟಿ ಮಾಡಲಿರುವ ಒಕ್ಕೂಟದ ಪ್ರತಿನಿಧಿಗಳು ಭೇಟಿ ಮಾಡಲಿದ್ದಾರೆ. ಚಾಮರಾಜಪೇಟೆಯಲ್ಲಿರುವ ಮೈದಾನ ಬಿಬಿಎಂಪಿಯ ಸ್ವತ್ತು. ಇದನ್ನು ಆಟದ ಮೈದಾನವೆಂದೇ ಪಾಲಿಕೆ ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Published On - 11:23 am, Thu, 14 July 22