ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡದಂತೆ ಶಿಕ್ಷಣ ಇಲಾಖೆಗೆ ಶಿಫಾರಸ್ಸು! ಎನ್ಇಪಿ ಸಮಿತಿ ವಿರುದ್ಧ ತೀವ್ರ ಆಕ್ರೋಶ
ಮೊಟ್ಟೆ ಹಾಗೂ ಮಾಂಸ ದೇಹಕ್ಕೆ ಪ್ರೋಟೀನ್ ಒದಗಿಸುತ್ತದೆ. ಮಾನವನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಭೀತಾಗಿದೆ.
ಬೆಂಗಳೂರು: ಶಿಕ್ಷಣ ಇಲಾಖೆಯ (Education Department) ಆರ್ಥಿಕ ಸಂಕಷ್ಟದಿಂದ ಶಾಲಾ ವಿದ್ಯಾರ್ಥಿಗಳಿಗೆ ಈ ಬಾರಿ ಶೂ- ಸಾಕ್ಸ್, ಬೈಸಿಕಲ್ ಪಡೆಯುವ ಭಾಗ್ಯ ಇಲ್ಲ. ಈ ನಡುವೆ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಮೊಟ್ಟೆ (Egg) ನೀಡದಿರಲು ಎನ್ಇಪಿ ಸಮಿತಿ ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿದೆ. ಮೊಟ್ಟೆ ಹಾಗೂ ಮಾಂಸದಿಂದ ಅನೇಕ ರೋಗಗಳು ಬರುತ್ತವೆ. ಹೀಗಾಗಿ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕೆಂದು ಎನ್ಇಪಿ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಎನ್ಇಪಿ ಸಮಿತಿಯ ಈ ಶಿಫಾರಸ್ಸಿಗೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮೊಟ್ಟೆ ಹಾಗೂ ಮಾಂಸ ದೇಹಕ್ಕೆ ಪ್ರೋಟೀನ್ ಒದಗಿಸುತ್ತದೆ. ಮಾನವನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಮೊಟ್ಟೆಯನ್ನು ಬಿಸಿಯೂಟದಲ್ಲಿ ಸೇರಿಸಿತ್ತು. ಆದ್ರೆ ಈ ಸಮಿತಿ ಮೊಟ್ಟೆ ಉತ್ತಮವಲ್ಲ ಅಂತಾ ಶಿಫಾರಸ್ಸು ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ಶಿಕ್ಷಣ ಇಲಾಖೆ ವಿರುದ್ಧ ಸಾಹಿತಿಗಳು, ವಿದ್ಯಾರ್ಥಿಗಳು ಸೇರಿ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಆಕ್ರೋಶಗೊಂಡಿದ್ದಾರೆ.
ಇನ್ನು ತಜ್ಞರ ಶಿಫಾರಸ್ಸಿಗೆ ಕಿಡಿ ಕಾರಿರುವ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಜನರ ಊಟದ ಪದ್ಧತಿಯನ್ನು ಹೇರಲು ಸಮಿತಿ ಮುಂದಾಗಿದೆ. ದೇಶದಲ್ಲಿ ಶೇ. 50 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವಾಗ ಸಮಿತಿಯು ಈ ವಾಸ್ತವವನ್ನು ಅಣಕಿಸಿದಂತಿದೆ. ಇದು ಅವೈಜ್ಞಾನಿಕ ಸಲಹೆ. ಸರ್ಕಾರ ಮಕ್ಕಳಿಗೆ ಮೊಟ್ಟೆ ಕೊಡಲೇಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಮಕ್ಕಳಿಗೆ ತಟ್ಟಿದ ಆರ್ಥಿಕ ಸಂಕಷ್ಟದ ಬಿಸಿ: ಆರ್ಥಿಕ ಸಂಕಷ್ಟದ ಹಿನ್ನೆಲೆ ಈ ವರ್ಷವೂ ಮಕ್ಕಳಿಗೆ ಉಚಿತ ಶೂ ಸಾಕ್ಸ್ ಭಾಗ್ಯ ಇಲ್ಲ. ಕೊರೊನಾ ಕಾರಣದಿಂದ ಮಕ್ಕಳಿಗೆ ಸೈಕಲ್ ವಿತರಣೆ ಮಾಡುತ್ತಿಲ್ಲ. ಶೂ ಹಾಗೂ ಸಾಕ್ಸ್ ಯೋಜನೆಗೂ ಇಲಾಖೆ ಬ್ರೇಕ್ ಹಾಕಲು ಮುಂದಾಗಿದೆ. ಕೊರೊನಾ ಕಾರಣದಿಂದ ದೇಶ ಲರ್ನಿಂಗ್ ಲಾಸ್ನಲ್ಲಿದೆ. ಗುಣಮಟ್ಟದ ಶಿಕ್ಷಣ ಕೊಡುವುದು ನಮ್ಮ ಪ್ರಮುಖ ಆದ್ಯತೆ ಎಂದು ಶಿಕ್ಷಣ ಇಲಾಖೆ ಯೋಜನೆಗೆ ಎಳ್ಳು ನೀರು ಬಿಡಲು ಮುಂದಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಕಿರು ಸೇತುವೆ ಮೇಲೆ ಯುವಕ- ಯುವತಿಯರ ಹುಚ್ಚಾಟ; ಸ್ಥಳಕ್ಕೆ ಆಗಮಿಸಿದ ಇಇಯಿಂದ ಯುವಕನಿಗೆ ಕಪಾಳಮೋಕ್ಷ
Published On - 9:35 am, Thu, 14 July 22