ಜೈಲಿನಿಂದ ಪರಾರಿಯಾಗಲು ಕೈದಿಯೊಬ್ಬನಿಗೆ ನೆರವಾಗಿ ಅವನೊಂದಿಗೆ ತಾನೂ ನಾಪತ್ತೆಯಾದ ಮಹಿಳಾ ಜೈಲು ಅಧಿಕಾರಿ ಸಿಕ್ಕಿದ್ದು ಮಾತ್ರ ಶವವಾಗಿ!

ಅಲಾಬಾಮದಲ್ಲಿ ಜಾರಿಯಲ್ಲಿರುವ ಕಾನೂನಿನ ಪ್ರಕಾರ ಯಾವುದಾದರೂ ವ್ಯಕ್ತಿಯ ಸಾವಿಗೆ ಕಾರಣನಾದವನನ್ನು ಹಂತಕ ಎಂದೇ ಪರಿಗಣಿಸಲಾಗುತ್ತದೆ. ಅಂದರೆ ಅವನು ಕೊಲೆ ಮಾಡಿರಲೇಬೇಕು ಅಂತೇನಿಲ್ಲ.

ಜೈಲಿನಿಂದ ಪರಾರಿಯಾಗಲು ಕೈದಿಯೊಬ್ಬನಿಗೆ ನೆರವಾಗಿ ಅವನೊಂದಿಗೆ ತಾನೂ ನಾಪತ್ತೆಯಾದ ಮಹಿಳಾ ಜೈಲು ಅಧಿಕಾರಿ ಸಿಕ್ಕಿದ್ದು ಮಾತ್ರ ಶವವಾಗಿ!
ಕೇಸಿ ವ್ಹೈಟ್​ ಮತ್ತು ವಿಕ್ಕಿ ವ್ಹೈಟ್​​ ​
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 14, 2022 | 8:05 AM

ಸೆರೆವಾಸ ಶಿಕ್ಷೆ ಅನುಭವಿಸುತ್ತಿದ್ದ ಅಲಬಾಮಾ (Alabama) ಜೈಲಿನಿಂದ ಪರಾರಿಯಾಗಿ ಅಮೆರಿಕದಾದ್ಯಂತ ಸಂಚಲನ ಮೂಡಿಸಿದ್ದ ಕೈದಿಯೊಬ್ಬ ತಾನು ತಪ್ಪಿಸಿಕೊಳ್ಳಲು ನೆರವಾದ ಒಬ್ಬ ಮಹಿಳಾ ಜೈಲು ಅಧಿಕಾರಿಯನ್ನು ಕೊಂದ ಅರೋಪಕ್ಕೊಳಗಾಗಿದ್ದಾನೆ. ಲಾಡರ್ ಡೇಲ್ (Lauderdale) ಡಿಸ್ಟ್ರಿಕ್ಟ್ ಅಟಾರ್ನಿ ಕ್ರಿಸ್ ಕಾನ್ನೊಲಿ (Chris Connolly) ಅವರು ಮಂಗಳವಾರ ಹೊರಡಿಸಿರುವ ಪ್ರಕಟಣೆಯೊಂದರ ಪ್ರಕಾರ 38-ವರ್ಷ ವಯಸ್ಸಿನ ಕೇಸಿ ವ್ಹೈಟ್ ವಿರುದ್ಧ ವಿಕ್ಕಿ ವ್ಹೈಟ್ ಸಾವಿಗೆ ಕಾರಣವಾಗಿರುವ ಪ್ರಕರಣ ದಾಖಲಿಸಲಾಗಿದೆ.

ಏಪ್ರಿಲ್ ನಲ್ಲಿ ವ್ಹೈಟ್ ಮತ್ತು ಮಹಿಳಾ ಅಧಿಕಾರಿ ವಿಕ್ಕಿ ವ್ಹೈಟ್ ಒಟ್ಟಿಗೆ ಕಾಣೆಯಾಗಿದ್ದು ಅಮೆರಿಕದಲ್ಲಿ ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಆದರೆ ಈ ಪ್ರಕರಣ ರಕ್ತಪಾತದೊಂದಿಗೆ ಕೊನೆಗೊಳ್ಳಲಿದೆ ಎಂದು ಯಾರೂ ಊಹಿಸಿರಲಿಲ್ಲ. ಇಂಡಿಯಾನಾದ ಸ್ಥಳವೊಂದರಲ್ಲಿ ವಿಕ್ಕಿ ವ್ಹೈಟ್ಳ ರಕ್ತಸಿಕ್ತ ದೇಹ ಪತ್ತೆಯಾಗಿದೆ ಮತ್ತು ಕೇಸಿ ವ್ಹೈಟ್ ನನ್ನು ಬಂಧಿಸಲಾಗಿದೆ.

ಕೇಸಿ ವಿರುದ್ಧ ದಾಖಲಾಗಿರುವ ಅರೋಪಪಟ್ಟಿಯ ಪ್ರಕಾರ ಪರಾರಿಯಾಗುವಾಗ ಅವನು ವಿಕ್ಕಿಯ ಸಾವಿಗೆ ಕಾರಣನಾಗಿದ್ದಾನೆ. ಅವಳ ತಲೆಗೆ ಗುಂಡು ಹಾರಿಸಲಾಗಿದೆ. ಆದರೆ ಅವಳ ಸಾವಿಗೆ ಕಾರಣವಾದ ಪಿಸ್ಟಲ್ನ ಟ್ರಿಗ್ಗರ್ ಯಾರು ಅದುಮಿದರು ಅನ್ನೋದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿಲ್ಲ. ಕೆಲ ಅಧಿಕಾರಿಗಳು, ವಿಕ್ಕಿ ತಾನೇ ಗುಂಡು ಹಾರಿಸಿಕೊಂಡು ಸತ್ತಿದ್ದಾಳೆ ಎಂದು ಹೇಳುತ್ತಿದ್ದಾರೆ.

ಕೇಸಿ ಪರ ವಾದಿಸಲಿರುವ ವಕೀಲ ಮಾರ್ಕ್ ಮ್ಯಾಕ್ಡ್ಯಾನಿಯೇಲ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ವಿಚಾರಣೆಯ ವೇಳೆ ಕೇಸಿ ತಾನು ನಿರ್ದೋಷಿ ಅಂತ ಹೇಳಲಿದ್ದಾನೆ ಎಂದಿದ್ದಾರೆ. ಕೇಸಿ ಜೈಲಿನಿಂದ ಪರಾರಿಯಾಗುವುದಕ್ಕೆ ವಿಕ್ಕಿಯೇ ಕಾರಣ ಮತ್ತು ಅಲ್ಲಿಂದ ತಪ್ಪಿಸಿಕೊಂಡ ಬಳಿಕ ಕೇಸಿ ಎಲ್ಲಾ ಸಮಯ ವಿಕ್ಕಿಯ ಆರೈಕೆ ಮತ್ತು ವಶದಲ್ಲಿದ್ದ ಎಂದು ವಕೀಲರು ಹೇಳಿದ್ದಾರೆ.

ಏಪ್ರಿಲ್ ನಲ್ಲಿ ಅಲಾಬಾಮಾ ಜೈಲಿನಲ್ಲಿ ಸುಧಾರಣಾ ವಿಭಾಗದ ಸಹಾಯಕ ನಿರ್ದೇಶಕಿಯಾಗಿದ್ದ ವಿಕ್ಕಿ ವ್ಹೈಟ್ ಜೊತೆ ಕೈಕೋಳಗಳೊಂದಿಗೆ ಕೇಸಿ ವ್ಹೈಟ್ ಹೊರಬಂದ. ಅದಾದ ನಂತರವೇ ದೇಶದೆಲ್ಲೆಡೆ ಅವರ ಹುಡುಕಾಟ ಆರಂಭವಾಯಿತು. 56-ವರ್ಷ ವಯಸ್ಸಿನವಳಾಗಿದ್ದ ವಿಕ್ಕಿ, ಕೇಸಿಯನ್ನು ಮಾನಸಿಕ ಆರೋಗ್ಯ ತಪಾಸಣೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಳು, ಅದರೆ ಮಾನಸಿಕ ರೋಗ ತಜ್ಞರಿಂದ ಆಕೆ ಅಪಾಯಿಂಟ್ ಮೆಂಟ್ ತೆಗೆದುಕೊಂಡ ಬಗ್ಗೆ ಯಾವುದೇ ಪುರಾವೆ ಇಲ್ಲ.

ಅಂತಿಮವಾಗಿ ಅವರಿಬ್ಬರು ಕೇಸಿ ಸೆರೆಸಿಕ್ಕ ಇಂಡಿಯಾನಾದಲ್ಲಿ ಪತ್ತೆಯಾದರು. ಅಧಿಕಾರಿಗಳು ಹೇಳುವ ಪ್ರಕಾರ ವಿಕ್ಕಿ ತಲೆಗೆ ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಲಾಬಾಮದಲ್ಲಿ ಜಾರಿಯಲ್ಲಿರುವ ಕಾನೂನಿನ ಪ್ರಕಾರ ಯಾವುದಾದರೂ ವ್ಯಕ್ತಿಯ ಸಾವಿಗೆ ಕಾರಣನಾದವನನ್ನು ಹಂತಕ ಎಂದೇ ಪರಿಗಣಿಸಲಾಗುತ್ತದೆ. ಅಂದರೆ ಅವನು ಕೊಲೆ ಮಾಡಿರಲೇಬೇಕು ಅಂತೇನಿಲ್ಲ. ಪರಾರಿಯಾಗುವಾಗುವಂಥ ಅಪರಾಧ ನಡೆಸುವಾಗ ಇಲ್ಲವೇ ತನ್ನೊಂದಿಗಿರುವ ವ್ಯಕ್ತಿಗೆ ಅಪಾಯಕಾರಿಯಾಗಿ ಪರಿಣಮಿಸುವಂಥ ವರ್ತನೆ ಪ್ರದರ್ಶಿಸಿ ಸಾವಿಗೆ ಕಾರಣವಾದರೆ ಅವನನ್ನು ಕೊಲೆಗಡುಕ ಅಂತಲೇ ಪರಿಗಣಿಸಲಾಗುತ್ತದೆ.

ವಿಕ್ಕಿ ವ್ಹೈಟ್ ಳ ಸ್ನೇಹಿತರು ಮತ್ತು ಸಹೊದ್ಯೋಗಿಗಳಿಗೆ ಇದೆನ್ನೆಲ್ಲ ನಂಬಲು ಸಾಧ್ಯವಾಗುತ್ತಿಲ್ಲ. ಶರೀಫ್ ಕಚೇರಿಯಲ್ಲಿ 16 ವರ್ಷಗಳಿಂದ ಕೆಲಸ ಮಾಡುತ್ತಿದ್ದ ವಿಕ್ಕಿ ಹತ್ಯೆ ಪ್ರಯತ್ನ ಮತ್ತು ಇತರ ಅಪರಾಧಗಳಿಗೆ 75 ವರ್ಷಗಳ ಸೆರೆವಾಸ ಅನುಭವಿಸುತ್ತಿದ್ದ ವ್ಯಕ್ತಿಗೆ ಸಹಾಯ ಮಾಡಿ ತನ್ನ ಬದುಕಿಗೆ ದುರಂತ ಅಂತ್ಯ ತಂದುಕೊಂಡಾಳೆಂಬ ಸಂಗತಿಯನ್ನು ನಂಬುವುದು ಕಷ್ಟವೇ.

ಇದನ್ನೂ ಓದಿ:  ಅಮೇರಿಕದ ಮಾಜಿ ಒಲಂಪಿಯನ್ ಕಿಮ್ ಗ್ಲಾಸ್ ಮೇಲೆ ಆಗಂತುಕನಿಂದ ಹಲ್ಲೆ, ಮುಖದಲ್ಲಿನ ಮೂಳೆ ಮುರಿದಿವೆ, ಕಣ್ಣು ಊದಿಕೊಂಡಿದೆ!