ಶ್ರೀಲಂಕಾ ಅಧ್ಯಕ್ಷರು ಕರೆ ಮಾಡಿ, ರಾಜೀನಾಮೆ ಪತ್ರ ಕಳಿಸುವುದಾಗಿ ಹೇಳಿದ್ದಾರೆ: ಸ್ಪೀಕರ್
ಇಂದು ರಾತ್ರಿಯೊಳಗೆ ನನಗೆ ರಾಜೀನಾಮೆ ತಲುಪುವುದಾಗಿ ಹೇಳಿದ್ದಾರೆ ಎಂದು ವಿಡಿಯೊ ಸಂದೇಶದ ಮೂಲಕ ಸ್ಪೀಕರ್ ಮಹಿಂದಾ ಯಾಪ ಅಬೇವರ್ಧೆನಾ ಹೇಳಿದ್ದಾರೆ.
ಕೊಲಂಬೊ: ಬುಧವಾರ ಮಾಲ್ಡೀವ್ಸ್ಗೆ ಪಲಾಯನ ಮಾಡಿರುವ ಶ್ರೀಲಂಕಾ ಅಧ್ಯಕ್ಷ (Sri Lankan President) ಗೊಟಬಯ ರಾಜಪಕ್ಸ (Gotabaya Rajapaksa) ಅವರು ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಇಂದು (ಬುಧವಾರ) ರಾಜೀನಾಮೆ ಪತ್ರ (Resignation) ಕಳಿಸುವುದಾಗಿ ಹೇಳಿದ್ದಾರೆ ಎಂದು ಶ್ರೀಲಂಕಾ ಸಂಸತ್ನ ಸ್ಪೀಕರ್ ಹೇಳಿದ್ದಾರೆ.ಅಧ್ಯಕ್ಷರು ನನಗೆ ಫೋನ್ ಕರೆ ಮಾಡಿದ್ದರು. ಇಂದು ರಾತ್ರಿಯೊಳಗೆ ನನಗೆ ರಾಜೀನಾಮೆ ತಲುಪುವುದಾಗಿ ಹೇಳಿದ್ದಾರೆ ಎಂದು ವಿಡಿಯೊ ಸಂದೇಶದ ಮೂಲಕ ಸ್ಪೀಕರ್ ಮಹಿಂದಾ ಯಾಪ ಅಬೇವರ್ಧೆನಾ ಹೇಳಿದ್ದಾರೆ. ಜನರು ಸಂಸತ್ತಿನ ಕಾರ್ಯ ಕಲಾಪದ ಮೇಲೆ ನಂಬಿಕೆ ಇಡಬೇಕು. ನಾವು 20ನೇ ತಾರೀಖಿನಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಶಾಂತವಾಗಿರಿ ಎಂದು ಸ್ಪೀಕರ್ ಜನರಲ್ಲಿ ಮನವಿ ಮಾಡಿದ್ದಾರೆ.
ತುರ್ತು ಪರಿಸ್ಥಿತಿ ಘೋಷಣೆ
ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಶ್ರೀಲಂಕಾದ ರಾಜ್ಯಗಳಿಗೆ ಲಂಕಾದ ಸೈನಿಕರು ಬಂದಿದ್ದು ಟಿವಿ, ರೇಡಿಯೋ ಕೇಂದ್ರಗಳು ಲಂಕಾ ಸೇನಾ ಸುಪರ್ದಿಗೆ ತೆಗೆದುಕೊಂಡಿದೆ. ದೂರದರ್ಶನ ಪ್ರಸಾರಗಳು ಕೂಡ ಸ್ಥಗಿತಗೊಂಡಿದೆ. ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸ ಸೇನಾ ವಿಮಾನದಲ್ಲಿ ಮಾಲ್ಡೀವ್ಸ್ಗೆ ಪಲಾಯನ ಮಾಡಿದ ನಂತರ ಜನರ ಆಕ್ರೋಶ ತೀವ್ರಗೊಂಡಿದ್ದು, ರಾಜಧಾನಿ ಕೊಲಂಬೊದ ರಸ್ತೆಗಳಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ನಿಯಂತ್ರಣ ಮಾಡಲು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ, ಇದೀಗ ಶ್ರೀಲಂಕಾದ ರಾಜ್ಯಗಳಿಗೆ ಲಂಕಾದ ಸೈನಿಕರ ಆಗಮನವಾಗಿದ್ದು ಮಾಧ್ಯಮ ಕೇಂದ್ರಗಳನ್ನು ತನ್ನ ಕೈವಶ ಮಾಡಿಕೊಂಡಿದೆ. ಟಿವಿ ಮಾಧ್ಯಮಗಳಲ್ಲಿ ಮಾಹಿತಿ ಮತ್ತು ಕಾರ್ಯಕ್ರಮಗಳು ಸ್ಥಗಿತಗೊಂಡಿದೆ.