Ismart Jodi: ಗಣೇಶ್​ ಸಾರಥ್ಯದಲ್ಲಿ ಜುಲೈ 16ರಿಂದ ‘ಇಸ್ಮಾರ್ಟ್​ ಜೋಡಿ’; ‘ಸ್ಟಾರ್​ ಸುವರ್ಣ’ದ ಈ ಶೋ ವಿಶೇಷತೆ ಏನು?

Star Suvarna | Ismart Jodi: ‘ಇಸ್ಮಾರ್ಟ್​ ಜೋಡಿ’ ಶೋನಲ್ಲಿ ಗೆದ್ದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಚಿತ್ರರಂಗ, ಕಿರುತೆರೆ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಜನಪ್ರಿಯ ಆಗಿರುವ ಜೋಡಿಗಳು ಇದರಲ್ಲಿ ಭಾಗವಹಿಸುತ್ತಿವೆ.

Ismart Jodi: ಗಣೇಶ್​ ಸಾರಥ್ಯದಲ್ಲಿ ಜುಲೈ 16ರಿಂದ ‘ಇಸ್ಮಾರ್ಟ್​ ಜೋಡಿ’; ‘ಸ್ಟಾರ್​ ಸುವರ್ಣ’ದ ಈ ಶೋ ವಿಶೇಷತೆ ಏನು?
ಗೋಲ್ಡನ್ ಸ್ಟಾರ್ ಗಣೇಶ್
TV9kannada Web Team

| Edited By: Apurva Kumar Balegere

Jul 14, 2022 | 9:17 AM

Ismart Jodi | ಕಿರುತೆರೆ ವಾಹಿನಿಗಳ ನಡುವೆ ಭರ್ಜರಿ ಪೈಪೋಟಿ ಇದೆ. ಪ್ರತಿ ಚಾನೆಲ್​ನಲ್ಲೂ ಹಲವು ರಿಯಾಲಿಟಿ ಶೋಗಳು ಪ್ರೇಕ್ಷಕರ ಮನಗೆಲ್ಲಲು ಪ್ರಯತ್ನಿಸುತ್ತಿವೆ. ‘ಸ್ಟಾರ್​ ಸುವರ್ಣ’ (Star Suvarna) ವಾಹಿನಿಯಲ್ಲಿ ಹೊಸ ರಿಯಾಲಿಟಿ ಶೋ ‘ಇಸ್ಮಾರ್ಟ್​ ಜೋಡಿ’ (Ismart Jodi) ಪ್ರಸಾರಕ್ಕೆ ಕ್ಷಣಗಣನೆ ಶುರುವಾಗಿದೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ. ಇದೇ ಶನಿವಾರದಿಂದ (ಜುಲೈ 16) ಈ ಕಾರ್ಯಕ್ರಮ ಪ್ರಸಾರ ಆಗಲಿದ್ದು ‘ಗೋಲ್ಡನ್​ ಸ್ಟಾರ್​’ ಗಣೇಶ್​ ಅವರು ಇದರ ಸಾರಥ್ಯ ವಹಿಸುತ್ತಿದ್ದಾರೆ. ಈಗಾಗಲೇ ಪ್ರೋಮೋಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯಲಾಗಿದೆ. ಹಲವು ಜೋಡಿಗಳು ಈ ಶೋನಲ್ಲಿ ಭಾಗವಹಿಸಲಿವೆ. ಪ್ರತಿ ವೀಕೆಂಡ್​ನಲ್ಲಿ ಗಣೇಶ್ (Golden Star Ganesh)​ ಅವರನ್ನು ಕಿರುತೆರೆಯಲ್ಲಿ ನೋಡಲು ಅವರ ಫ್ಯಾನ್ಸ್​ ಕಾತರಾಗಿದ್ದಾರೆ.

‘ಇದುವರೆಗೂ ಮನರಂಜನೆಯ ಮತ್ತು ಸ್ನೇಹದ ಕುರಿತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. ಈಗ ಮೊದಲ ಬಾರಿಗೆ ಸೆಲೆಬ್ರಿಟಿ ಜೋಡಿಗಳ ಕುರಿತಾಗಿ ಒಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಎರಡು ವರ್ಷ ಗ್ಯಾಪ್​ ಆಗಿತ್ತು. ಬೇರೇನೋ ಹೊಸದು ಮಾಡಬೇಕು, ಫ್ಯಾಮಿಲಿ ಆಡಿಯನ್ಸ್​ ತಲುಪಬೇಕು ಎಂದು ಯೋಚಿಸುತ್ತಿದ್ದಾಗ ಸ್ಟಾರ್​ ಸುವರ್ಣದವರು ಈ ಕಾರ್ಯಕ್ರಮದ ಕುರಿತು ಹೇಳಿದರು. ಇದೊಂದು ಸೆಲೆಬ್ರಿಟಿ ಜೋಡಿಯ ಕುರಿತಾದ ಕಾರ್ಯಕ್ರಮ. ಇಲ್ಲಿ ಹೊಸದಾಗಿ ಮದುವೆಯಾದವರಿಂದ ಹಿಡಿದು 40 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರವರೆಗೂ ಇದ್ದಾರೆ’ ಎಂದು ಗಣೇಶ್​ ಹೇಳಿದ್ದಾರೆ.

‘ಇವತ್ತಿನ ದಿನಗಳಲ್ಲಿ ದಂಪತಿಗಳು ಸಣ್ಣಸಣ್ಣ ವಿಷಯಕ್ಕೂ ಬಹಳ ಬೇಗ ದೂರ ಆಗುತ್ತಿದ್ದಾರೆ. ಜೀವನ ಎಂದರೆ ಅದಲ್ಲ, ಇಲ್ಲಿ ಏಳು-ಬೀಳು, ಸುಖ-ದುಃಖ ಎಲ್ಲವೂ ಇರುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಇದು. ಈ ಕಾರ್ಯಕ್ರಮವು ನಾಲ್ಕು ಜನರಿಗೆ ಮಾದರಿ ಆಗಬೇಕು. ಒಳ್ಳೆಯ ಕಾನ್ಸೆಪ್ಟ್​ ಆದ್ದರಿಂದ ಒಪ್ಪಿಕೊಂಡೆ. ಒಟ್ಟು 26 ಕಂತುಗಳು. ಪ್ರತಿ ಶನಿವಾರ ಮತ್ತು ಭಾನುವಾರ ರಾತಿ 9 ಗಂಟೆಗೆ ಪ್ರಸಾರವಾಗಲಿದೆ’ ಎಂದು ಗಣೇಶ್​ ಮಾಹಿತಿ ನೀಡಿದ್ದಾರೆ.

ಹೇಗಿರಲಿದೆ ಇಸ್ಮಾರ್ಟ್​ ಜೋಡಿ ಶೋ?

‘ಎಲ್ಲರೂ ಪ್ರೀತಿಯಿಂದ ಬದುಕಿ ಅಂತ ಸಂದೇಶ ಸಾರುವಂತಹ ಕಾರ್ಯಕ್ರಮ ಇದು. ಇಲ್ಲಿ ತೀರ್ಪುಗಾರರು ಇರುವುದಿಲ್ಲ. ನಾನು ನಿರೂಪಕನಾಗಿರುತ್ತೇನೆ. ಸ್ಪರ್ಧಿಗಳಿಗೆ ಹಲವು ಟಾಸ್ಕ್​ಗಳನ್ನು ನೀಡಲಾಗುತ್ತದೆ. ಗೆದ್ದವರಿಗೆ ಅಂಕಗಳನ್ನು ನೀಡಲಾಗುತ್ತದೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್​ ಇರುವುದಿಲ್ಲ. ಗೆದ್ದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಇಲ್ಲಿ ಚಿತ್ರರಂಗ, ಕಿರುತೆರೆ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಜೋಡಿಗಳು ಭಾಗವಹಿಸುತ್ತಿವೆ. ಜತೆಗೆ ಸಿನಿಮಾ ಪ್ರಮೋಷನ್​ಗಳು ಸಹ ಇರುತ್ತವೆ. ಸೆಲೆಬ್ರಿಟಿಗಳು ಆಗಾಗ ಅತಿಥಿಯಾಗಿ ಬರುತ್ತಿರುತ್ತಾರೆ’ ಎಂದಿದ್ದಾರೆ ಗಣೇಶ್.

ವಿನಯ್​ ಗೌಡ ಮತ್ತು ಅಕ್ಷತಾ ಗೌಡ, ಸುಮನ್​ ನಗರ್​ಕರ್​ ಮತ್ತು ಗುರುದೇವ್​ ನಾಗರಾಜ, ದಿಶಾ ಮದನ್​ ಮತ್ತು ಶಶಾಂಕ್​ ವಾಸುಕಿ ಗೋಪಾಲ್​, ಪ್ರತೀಕ್​ ಪ್ರೊ ಮತ್ತು ಮೌಲ್ಯಶ್ರೀ ಎಂ, ಶ್ರೀರಾಮ ಸುಳ್ಯ ಮತ್ತು ಪುನೀತ್​ ಆಚಾರ್ಯ, ರಘು ವೈನ್​ ಸ್ಟೋರ್​ ಮತ್ತು ವಿದ್ಯಾಶ್ರೀ, ಇಂಪನಾ ಜಯರಾಜ್​ ಮತ್ತು ಅಜಿತ್​ ಜಯರಾಜ್​, ಸಪ್ನ ದೀಕ್ಷಿತ್​ ಮತ್ತು ಅಶ್ವಿನ್​ ದೀಕ್ಷಿತ್​, ಜೈ ಜಗದೀಶ್​ ಮತ್ತು ವಿಜಯಲಕ್ಷ್ಮಿ ಸಿಂಗ್​, ರಿಚರ್ಡ್​ ಲೂಯಿಸ್​ ಮತ್ತು ಹ್ಯಾರಿಯೆಟ್​ ಲೂಯಿಸ್​ ದಂಪತಿ ಇದರಲ್ಲಿ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada