ಈ ಕಾರ್ಯಕ್ರಮವನ್ನು ರೂಪಿಸಲು ಜೀ ಕನ್ನಡ ವಾಹಿನಿಯವರು ಗಣೇಶ್ ಜೊತೆ 8 ತಿಂಗಳಿಂದ ಮೀಟಿಂಗ್ ನಡೆಸಿದ್ದರು. ಅಂತಿಮವಾಗಿ ಸ್ನೇಹದ ಕುರಿತಾಗಿ ಒಂದು ಶೋ ಮಾಡೋಣ ಎಂಬ ತೀರ್ಮಾನಕ್ಕೆ ಬರಲಾಯಿತು. ಆಗ ರೂಪುಗೊಂಡಿದ್ದೇ ‘ಗೋಲ್ಡನ್ ಗ್ಯಾಂಗ್’ ಕಾರ್ಯಕ್ರಮ. ಇದನ್ನು ನಿರೂಪಣೆ ಮಾಡಲು ಗಣೇಶ್ ತುಂಬ ಉತ್ಸುಕರಾಗಿದ್ದಾರೆ. ‘ಗೆಳೆತನವನ್ನು ಸಂಭ್ರಮಿಸುವ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದು ಅವರು ಹೇಳಿದ್ದಾರೆ.
‘ಗೆಳೆತನದಲ್ಲಿ ಮನಸ್ತಾಪ ಸಹಜ. ಅದರ ನಂತರವೇ ಬಾಂಧವ್ಯ ಇನ್ನಷ್ಟು ಬೆಳೆಯುತ್ತದೆ. ಮುಂಗಾರು ಮಳೆ ಸಿನಿಮಾ ಆದ ಮೇಲೆ ನಮ್ಮಲ್ಲೇ ಮನಸ್ತಾಪ ಆಗಿತ್ತು. ನಾನು, ಯೋಗರಾಜ್ ಭಟ್, ಪ್ರೀತಂ ಗುಬ್ಬಿ ನಾವೆಲ್ಲ ಉತ್ತಮ ಗೆಳೆಯರು. ಆದರೆ ಮನಸ್ತಾಪದಿಂದ ನಾನು ಮತ್ತು ಪ್ರೀತಂ ಗುಬ್ಬಿ ಮಾತನಾಡೋದು ಬಿಟ್ಟಿದ್ವಿ. ನಂತರ ಒಂದಾದ್ವಿ. ಆ ಎಲ್ಲ ವಿಚಾರಗಳನ್ನು ಈ ಶೋನಲ್ಲಿ ಹೇಳಿದ್ದೇವೆ’ ಎಂದಿದ್ದಾರೆ ಗಣೇಶ್.
‘ನಾನು ಮತ್ತು ಶಿಲ್ಪಾ ಕೂಡ ಮೊದಲು ಸ್ನೇಹಿತರಾಗಿ ಇದ್ದವರು. ನಂತರ ಪ್ರೀತಿ ಮಾಡಿ ಮದುವೆ ಆದೆವು. ನಮ್ಮಿಬ್ಬರ ಸ್ನೇಹದ ಬಗ್ಗೆ ಹೇಳಲು ನನಗೂ ಖುಷಿ ಇದೆ’ ಎಂದು ಹೇಳುವ ಮೂಲಕ ಈ ಶೋ ಬಗ್ಗೆ ಇನ್ನಷ್ಟು ಕೌತುಕ ಹೆಚ್ಚುವಂತೆ ಗಣೇಶ್ ಮಾಡಿದ್ದಾರೆ.
ಗಣೇಶ್ ಅವರು ಮೊದಲು ಗುರುತಿಸಿಕೊಂಡಿದ್ದೇ ಕಿರುತೆರೆ ಕಾರ್ಯಕ್ರಮದ ಮೂಲಕ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ನಾನು ವೃತ್ತಿಜೀವನ ಶುರು ಮಾಡಿದ್ದೇ ಕಿರುತೆರೆ ಮೂಲಕ. ಅದು ಎಲ್ಲರಿಗೂ ಗೊತ್ತು. ಮೂರು ನಮಸ್ಕಾರ ಹಾಕುತ್ತಿದ್ದೆ. ಎಲ್ಲರೂ ಆಶೀರ್ವಾದ ಮಾಡಿ ಜನಪ್ರಿಯ ನಟನನ್ನಾಗಿ ಮಾಡಿದರು. ಹಾಗಾಗಿ ಕಿರುತೆರೆ ಜೊತೆಗೆ ನನಗೊಂದು ಭಾವನಾತ್ಮಕ ಸಂಬಂಧ ಇದೆ. ಇಂಥ ಕಾರ್ಯಕ್ರಮದ ಮೂಲಕ ಎಲ್ಲರ ಮನೆಯನ್ನೂ ತಲುಪುತ್ತೇನೆ. ಮನೆಯಲ್ಲಿ ಕುಳಿತವರಿಗೆ ಮನರಂಜನೆ ನೀಡುತ್ತೇವೆ ಎಂಬ ಖುಷಿ ಇರುತ್ತದೆ. ಹಾಗಾಗಿ ಕಿರುತೆರೆ ನನಗೆ ಸ್ಪೆಷಲ್’ ಎಂದು ಗಣೇಶ್ ಹೇಳಿದ್ದಾರೆ.
ಇದನ್ನೂ ಓದಿ:
‘ಗೋಲ್ಡನ್ ಗ್ಯಾಂಗ್’ ಶೋ ಅದ್ದೂರಿ ಪ್ರೀ-ಲಾಂಚ್ ಕಾರ್ಯಕ್ರಮ; ಗಣೇಶ್ ಅಭಿಮಾನಿಗಳಿಗೆ ಹಬ್ಬ
ಗಣೇಶ್ ನಿರೂಪಣೆಯ ‘ಗೋಲ್ಡನ್ ಗ್ಯಾಂಗ್’ ಜ.8ರಿಂದ ಶುರು; ಜೀ ಕನ್ನಡದಲ್ಲಿ ಹೊಸ ಶೋ