ಬೆಂಗಳೂರು, ಸೆ.12: ನಗರದ ವಿಕ್ಟೋರಿಯಾ ಆಸ್ಪತ್ರೆ (Victoria Hospital) ಆವರಣದಲ್ಲಿರುವ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ 5 ರೋಗಿಗಳು ಕೋಮಾಗೆ ಹೋಗಿದ್ದರು. ಈ ಮಾಹಿತಿಯನ್ನು ನೆಫ್ರೋ ಯುರಾಲಜಿ ಸಂಸ್ಥೆಯ ಪ್ರಭಾರಿ ನಿರ್ದೇಶಕ ಡಾ.ಕೇಶವ ಮೂರ್ತಿ ಮುಚ್ಚಿಟ್ಟಿದ್ದರು. ಈ ಬಗ್ಗೆ ಡಾ.ಶಂಕರ್ ಗುಹಾ ಹಾಗೂ ಮಾಜಿ ಎಂಎಲ್‌ಸಿ ಪಿ.ಆರ್ ರಮೇಶ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಇದೀಗ ಡಾ.ಕೇಶವ ಮೂರ್ತಿ ವಿರುದ್ಧ ತನಿಖೆ ನಡೆಸುವಂತೆ ಖುದ್ದು ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ಅವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ, ಹಣಕಾಸು ಅವ್ಯವಹಾರ ಹಾಗೂ ಅಕ್ರಮ ಬಡ್ತಿ ಬಗ್ಗೆಯೂ ತನಿಖೆ ನಡೆಸಲು ಸಿಎಸ್‌ಗೆ ಹೇಳಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸುವಂತೆಯೂ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇದರ ಜೊತೆಗೆ ಕೂಡಲೇ ನೆಫ್ರೋ ಯುರಾಲಜಿ ಸಂಸ್ಥೆಗೆ ಮುಖ್ಯ ಆಡಳಿತಾಧಿಕಾರಿ ನೇಮಿಸುವಂತೆಯೂ ಸಿಎಂ ಆದೇಶಿಸಿದ್ದಾರೆ.
ಇನ್ನು ಈ ಸಂಸ್ಥೆಯಲ್ಲಿ ಆಪರೇಷನ್ ಮಾಡಿಸಿಕೊಂಡಿದ್ದ ರೋಗಿಗಳ ಪೈಕಿ ನಾಲ್ವರು ಈಗಾಗಲೇ ಸಾವನ್ನಪ್ಪಿದ್ದು, ಐವರು ರೋಗಿಗಳು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಮತ್ತು ಕಳೆದ 11 ತಿಂಗಳಿಂದ ರಾಮನಗರ ಮೂಲದ ರಂಜಿತ್‌ರಾಜ್ ಎಂಬುವವರು ಕೋಮಾದಲ್ಲಿದ್ದಾರೆ. ಈ ಬಗ್ಗೆ ಹಿರಿಯ ವೈದ್ಯಾಧಿಕಾರಿಗಳಿಗೆ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಡಾ.ಕೇಶವಮೂರ್ತಿ.ಆರ್ ಮಾಹಿತಿ ಮುಚ್ಚಿಟ್ಟ ಆರೋಪ ಇದೀಗ ಅವರ ಹುದ್ದೆಯನ್ನು ಕಳದುಕೊಳ್ಳುವ ಸ್ಥಿತಿಗೆ ಬಂದಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ