ಚೆಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಲಂಚ ಪತ್ರ: ತನಿಖೆ ವೇಳೆ ಸಿಐಡಿಗೆ ಮಹತ್ವದ ಸಾಕ್ಷ್ಯಾಧಾರ ಲಭ್ಯ

ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬರೆಯಲಾಗಿದ್ದ ಲಂಚ ಆರೋಪದ ಪತ್ರ ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಐಡಿ ಅಧಿಕಾರಿಗಳು ಕೆ.ಆರ್‌.ಪೇಟೆಯ ಕೃಷಿ ಇಲಾಖೆಯ ಅಧಿಕಾರಿಗಳಾದ ಶಿವಪ್ರಸಾದ್ ಮತ್ತು ಗುರುಪ್ರಸಾದ್ ಇಬ್ಬರು ಅಧಿಕಾರಿಗಳನ್ನು ವಶಪಡಿಸಿಕೊಂಡಿದ್ದರು. ಇವರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ.

ಚೆಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಲಂಚ ಪತ್ರ: ತನಿಖೆ ವೇಳೆ ಸಿಐಡಿಗೆ ಮಹತ್ವದ ಸಾಕ್ಷ್ಯಾಧಾರ ಲಭ್ಯ
ಸಚಿವ ಚಲುವರಾಯಸ್ವಾಮಿ
Updated By: ವಿವೇಕ ಬಿರಾದಾರ

Updated on: Sep 01, 2023 | 12:33 PM

ಬೆಂಗಳೂರು: ಕೃಷಿ ಸಚಿವ ಚೆಲುವರಾಯಸ್ವಾಮಿ (Chaluvrayswamy) ವಿರುದ್ಧ ರಾಜ್ಯಪಾಲರಿಗೆ ಬರೆಯಲಾಗಿದ್ದ ಲಂಚ ಆರೋಪದ ಪತ್ರ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಠಿ ಮಾಡಿತ್ತು. ಇದು ರಾಜ್ಯ ಸರ್ಕಾರದ (Karnaraka Government) ವಿರುದ್ಧ ಟೀಕಿಸಲು ಪ್ರತಿಕ್ಷಗಳಿಗೆ ಅಸ್ತ್ರವಾಗಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಐಡಿ (CID) ಅಧಿಕಾರಿಗಳು ಕೆ.ಆರ್‌.ಪೇಟೆಯ (KR Pete) ಕೃಷಿ ಇಲಾಖೆಯ ಅಧಿಕಾರಿಗಳಾದ ಶಿವಪ್ರಸಾದ್ ಮತ್ತು ಗುರುಪ್ರಸಾದ್ ಇಬ್ಬರು ಅಧಿಕಾರಿಗಳನ್ನು ವಶಪಡಿಸಿಕೊಂಡಿದ್ದರು. ಬಂಧಿತ ಗುರುಪ್ರಸಾದ್​ ವಿಚಾರಣೆ ವೇಳೆ ಮಹತ್ವದ ಅಂಶಗಳನ್ನು ಬಾಯಿಬಿಟ್ಟಿದ್ದಾರೆ. ಇಡೀ ಘಟನಾವಳಿಗಳ ಹಿಂದೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರೊಬ್ಬರ ಕೈವಾಡವೂ ಇದೆ  ಎಂದು ಹೇಳಿದ್ದಾರೆ.

ಈ ಆರೋಪದ ಹಿನ್ನೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸಿಐಡಿ ಅಧಿಕಾರಿಗಳು ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಸಿಐಡಿ ವಿಚಾರಣೆ ವೇಳೆ ಜಂಟಿ ನಿರ್ದೇಶಕರು ಗೊಂದಲದ ಹೇಳಿಕೆ ನೀಡಿದ್ದಾರೆ. ಇನ್ನು ಜಂಟಿ ನಿರ್ದೇಶಕ ಕೈವಾಡದ ಕುರಿತು ಮಹತ್ವದ ಸಾಕ್ಷ್ಯಾಧಾರ ಸಿಐಡಿಗೆ ಲಭ್ಯವಾಗಿದೆ. ಸಾಕ್ಷ್ಯದ ಸತ್ಯಾಸತ್ಯತೆ ಪರಿಶೀಲನೆಗೆ ಸಿಐಡಿ ಪೊಲೀಸರು ಎಫ್​ಎಸ್​ಎಲ್​ಗೆ ರವಾನೆ ಮಾಡಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ನನ್ನ ವಿರುದ್ಧ ರಾಜ್ಯಪಾಲರಿಗೆ ಬರೆದ ಪತ್ರ ನಕಲಿ: ಚಲುವರಾಯಸ್ವಾಮಿ

ಏನಿದು ಪ್ರಕರಣ

ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರಿನ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದರು. 6 ರಿಂದ 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕೃಷಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಲಂಚಕ್ಕೆ ಕಡಿವಾಣ ಹಾಕದಿದ್ದರೆ ವಿಷ ಕುಡಿಯುವುದಾಗಿ ದೂರಿನ ಪತ್ರದಲ್ಲಿಉಲ್ಲೇಖಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯಪಾಲರು ಈ ಬಗ್ಗೆ ಸರ್ಕಾರ ಮುಖ್ಯಕಾರ್ಯದರ್ಶಿ ಪತ್ರ ಬರೆದಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಪ್ರದೀಪ್​ ಸೂಚಿಸಿದ್ದರು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಠಿಸಿತ್ತು. ಪ್ರತಿಪಕ್ಷಗಳು ಸಚಿವರ ರಾಜಿನಾಮೆಗೆ ಪಟ್ಟು ಹಿಡಿದಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ