ಬೆಂಗಳೂರು: ಬಾಲ್ಯ ವಿವಾಹ( , ಸತಿಸಹಗಮನ, ಕೇಶ ಮುಂಡನೆಯ ವಿರುದ್ಧ ನಿರಂತರ ಹೋರಾಟ ನಡೆಸಿದ ಅಕ್ಷರದವ್ವ ಎಂದೇ ಕರೆಯಲ್ಪಡುವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ನಿನ್ನೆಯಷ್ಟೇ(ಜ.03) ಆಚರಿಸಲಾಯಿತು. ಆದ್ರೆ ಇಂದು ರಾಜ್ಯ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಬಾಲ್ಯ ವಿವಾಹಗಳ ಪ್ರಕರಣಗಳು ಹೆಚ್ಚು ದಾಖಲಾಗಿರುವ ಬಗ್ಗೆ ವರಿದಿಯೊಂದು ಬಿಡುಗಡೆಯಾಗಿದೆ.
ರಾಜ್ಯ ಹಾಗೂ ರಾಜಧಾನಿಯಲ್ಲಿ ಬಾಲ್ಯ ವಿವಾಹಗಳ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. 2021-22 ರ ಸಾಲಿನಲ್ಲಿ ಬರೋಬ್ಬರಿ 2819 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಕ್ಕಳ ಆಯೋಗದಿಂದ 2401 ಪ್ರಕರಣಗಳನ್ನ ತಡೆಹಿಡಿದಿದ್ದು, 418 ವಿವಾಹಗಳು ನಡೆದಿವೆ. ಈ ಪೈಕಿ 389 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 150 ಕೇಸ್ಗಳು ಕಡಿಮೆಯಾಗಿದೆ. ಆದ್ರೆ ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಬಾಲ್ಯ ವಿವಾಹ ತಡೆಯಲು ವಿನೂತನ ಕ್ರಮ ಜಾರಿಗೆ ಮುಂದಾಗಿದೆ. ವಿವಾಹ ನೋಂದಣಿ ಕ್ರಮವನ್ನ ಈ ವರ್ಷದಿಂದ ಅಧಿಕಾರಿಗಳು ಜಾರಿ ಮಾಡುತ್ತಿದ್ದಾರೆ. ಇದರಿಂದ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆಯನ್ನ ಕಡಿಮೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಮಹಾಮಾರಿ ಕೊರೊನಾ ಸಮಯದಲ್ಲಿ ಬಾಲ್ಯ ವಿವಾಹಗಳ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಅರಿವಿನ ಕೊರತೆ, ಅನಕ್ಷರತೆ, ಮೂಢ ನಂಬಿಕೆ, ಬಡತನದಿಂದಾಗಿ ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಕೊಡುತ್ತಿದ್ದರು. ಅದರಲ್ಲೂ ಕೊರೊನಾ ಸಮಯದಲ್ಲಿ ಕಿತ್ತು ತಿನ್ನುವ ಬಡತನದಿಂದ ಬೇಸತ್ತ ಪೋಷಕರು ತಮ್ಮ ಆಟ ಆಡುವ ವಯಸ್ಸಿನ ಮಗಳನ್ನು ಮದುವೆ ಮಾಡಿಕೊಟ್ಟ ಆಕೆಯ ಜವಾಬ್ದಾರಿಯಿಂದ ಕೈ ತೊಳೆದುಕೊಳ್ಳುತ್ತಿದ್ದರು. ಕೊರೊನಾ ಆರಂಬವಾದ ಬಳಿಕ ಎರಡು ವರ್ಷದಲ್ಲಿ ಸುಮಾರು 437 ಪ್ರಕರಣಗಳು ಬಯಲಾಗಿದ್ದವು.
ಶಿಕ್ಷಣ, ಕಂದಾಯ, ಪಂಚಾಯತ್‌ರಾಜ್, ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘದ ಸದಸ್ಯರನ್ನೊಳಗೊಂಡ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯನ್ನು ಸರ್ಕಾರ ರಚಿಸಿದೆ. ಈ ಸಮಿತಿಯು ಬಾಲ್ಯ ವಿವಾಹ ತಡೆಯಲು ಅವುಗಳನ್ನು ಗುರುತಿಸುವುದು, ಕಂಡುಬಂದರೆ ತಕ್ಷಣ ನಿಲ್ಲುಸುವುದು, ಮಕ್ಕಳ ರಕ್ಷಣೆ,
ತಪ್ಪಿತಸ್ಥರ ಮೇಲೆ ಕಾನೂನು ಕ್ರಮ, ಮಕ್ಕಳ ಪುನರ್ವಸತಿ ಹಾಗೂ ಅನುಸರಣಾ ಕ್ರಮಗಳನ್ನು ಕೈಗೊಳ್ಳಲು ಕ್ರಮಬದ್ಧ ಕಾರ್ಯ ವಿಧಾನ (ಎಸ್‌ಓಪಿ) ಜಾರಿಗೆ ತರಲಾಗಿದೆ. ಪ್ರತಿ ಬಾಲ್ಯ ವಿವಾಹವು ಅನುರ್ಜಿತವಾಗುತ್ತದೆ.
ಪ್ರತಿ ಪೊಲೀಸ್ ಅಧಿಕಾರಿ ತನ್ನ ವ್ಯಾಪಿಯಲ್ಲಿ ಬಾಲ್ಯ ವಿವಾಹ ಕಂಡುಬಂದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲು ಅವಕಾಶ ಇದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ 2 ವರ್ಷವರೆಗೆ ಜೈಲು ಶಿಕ್ಷೆ ಮತ್ತು ದಂಡ ಹಾಕಲಾಗುತ್ತದೆ. ಕಾಯಿದೆ ತಿದ್ದುಪಡಿ ಬಳಿಕ ಪುರುಷರ ಜೊತೆಗೆ ಮಹಿಳೆಯರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:21 am, Wed, 4 January 23