ಬೆಂಗಳೂರು: ಕರ್ನಾಟಕದಲ್ಲಿ ಶೀಘ್ರ ಪೌರ ಕಾರ್ಮಿಕರ ನೇಮಕಾತಿ ನಡೆಯಲಿದೆ. ಮೊದಲ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಾರ್ಮಿಕರೊಂದಿಗೆ ಉಪಾಹಾರ ಸೇವಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರ ಪರಿಶ್ರಮಕ್ಕೆ ಫಲ ಸಿಗಲಿದೆ. ಮುಖ್ಯಮಂತ್ರಿಯಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಹೇಳಿದರು. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಸೇವೆಗೆ ಸೇರಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಕುರಿತು ಟ್ವೀಟ್ ಮಾಡಿದ್ದ ಅವರು ಪೌರಕಾರ್ಮಿಕರಿಗೆ ಸಂಬಂಧಿಸಿದಂತೆ ಐಡಿಪಿ ಸಾಲಪ್ಪ ವರದಿ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಸಚಿವ ಸಭೆಯಲ್ಲಿ 11 ಸಾವಿರ ಪೌರಕಾರ್ಮಿಕರ ಸೇವೆ ಕಾಯಮಾತಿಗೆ ತೀರ್ಮಾನಿಸಲಾಗಿತ್ತು. ಇನ್ನೂ 43 ಸಾವಿರ ನೌಕರರ ಕಾಯಮಾತಿಯು ಬಾಕಿಯಿದೆ. ಈ ಬಗ್ಗೆ ಸರ್ಕಾರವು ಶೀಘ್ರ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಕರ್ನಾಟಕದ ಬಹುತೇಕ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ಮುಖ್ಯಮಂತ್ರಿಯ ಭರವಸೆಯಿಂದ ಖುಷಿಯಾಗಿದ್ದಾರೆ.
“ರಾಜ್ಯದಲ್ಲಿ ಇರುವ ಒಟ್ಟು 43 ಸಾವಿರ ಪೌರ ಕಾರ್ಮಿಕರ ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು. I.P.D ಸಾಲಪ್ಪ ವರದಿ ಅನುಷ್ಠಾನಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ” : ಮುಖ್ಯಮಂತ್ರಿ @BSBommai
— CM of Karnataka (@CMofKarnataka) September 21, 2022
ರಂಗೋಲಿ ಹಾಕುವ ಪೌರ ಕಾರ್ಮಿಕರು
ಕಲಬುರಗಿ: ನಗರದ ಹಲವೆಡೆ ಪೌರ ಕಾರ್ಮಿಕರು ಬೀದಿಗಳಲ್ಲಿ ರಂಗೋಲಿ ಹಾಕುವ ಮೂಲಕ ನಾಗರಿಕರಲ್ಲಿ ಸ್ವಚ್ಛತೆಯ ಪ್ರಜ್ಞೆ ಮೂಡಿಸಲು ಯತ್ನಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ಹಲವು ಬೀದಿಗಳಲಲ್ಲಿ ರಂಗೋಲಿ ಹಾಕುವ ಮೂಲಕ ಜನರು ಕಸ ಹಾಕಲು ಹಿಂಜರಿಯುವಂತೆ ಮಾಡುತ್ತಿದ್ದಾರೆ. ಜನರು ಕಸ ಹಾಕುವ ಜಾಗಗಳನ್ನೇ ಗುರುತಿಸಿ, ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ ಅಂಥ ಸ್ಥಳಗಳನ್ನು ಸ್ವಚ್ಛಗೊಳಿಸಿ, ಅದೇ ಸ್ಥಳದಲ್ಲಿ ರಂಗೋಲಿ ಹಾಕುತ್ತಾರೆ. ಪ್ರತಿದಿನ ನಗರದ ಮುನ್ನೂರಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಮಹಿಳೆಯರು ರಂಗೋಲಿ ಹಾಕುತ್ತಾರೆ.