Omicron Variant: ಡಿಸೆಂಬರ್ ತಿಂಗಳೊಳಗೆ 2ನೇ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಳಿಸುವಂತೆ ಸಿಎಂ ಬೊಮ್ಮಾಯಿ ತಾಕೀತು

| Updated By: ganapathi bhat

Updated on: Nov 27, 2021 | 7:45 PM

Basavaraj Bommai: ಆಫ್ರಿಕಾ, ಸಿಂಗಾಪುರ, ಬೋಟ್ಸ್ ವಾನಾ ದೇಶಗಳಲ್ಲಿ ಹೊಸ ತಳಿ ಪತ್ತೆಯಾಗಿದೆ. ಹೊಸ ತಳಿಯ ಬಗ್ಗೆ ಜಾಗತಿಕ ಅಧ್ಯಯನ ನಡೆಯುತ್ತಿದೆ. ಹೊಸ ತಳಿಯ ಗುಣಗಳ ಬಗ್ಗೆ ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ.

Omicron Variant: ಡಿಸೆಂಬರ್ ತಿಂಗಳೊಳಗೆ 2ನೇ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಳಿಸುವಂತೆ ಸಿಎಂ ಬೊಮ್ಮಾಯಿ ತಾಕೀತು
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಡಿಸೆಂಬರ್​​ ತಿಂಗಳ ಒಳಗೆ 2 ಡೋಸ್​​ ಲಸಿಕೆ ಹಾಕುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ನವೆಂಬರ್ 27) ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಲಸಿಕೆ ಪಡೆಯದವರನ್ನ ಪತ್ತೆ ಹಚ್ಚುವಂತೆ ಸಿಎಂ ತಾಕೀತು ಮಾಡಿದ್ದಾರೆ. ವಿದೇಶಗಳಲ್ಲಿ ಹೊಸ ತಳಿಯ ಒಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, WHO ಅಧಿಕಾರಿಗಳು, ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಸುದರ್ಶನ, ಬೆಂಗಳೂರು ನಗರ ಡಿಸಿ ಮಂಜುನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳು, ಸಿಇಒಗಳ ಜತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಭೆಯಲ್ಲಿ ಹೊಸ ತಳಿಯ ಕೊರೊನಾ ಕುರಿತು ಮಾತುಕತೆ ನಡೆಸಲಾಗಿದೆ. ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಮಂಗಳೂರು, ಮೈಸೂರು, ಕೊಡಗು, ಚಾಮರಾಜನಗರ, ಈ ನಾಲ್ಕು ಜಿಲ್ಲೆಗಳಲ್ಲಿ ಕಟ್ಟೆಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಚೆಕ್​ಪೋಸ್ಟ್​ಗಳಲ್ಲಿ ಕಡ್ಡಾಯವಾಗಿ ತಪಾಸಣೆಗೆ ಸೂಚನೆ ಕೊಟ್ಟಿದ್ದೇವೆ. ಕೇರಳದಿಂದ ಬಂದವರಿಗೆ ಆರ್​ಟಿಪಿಸಿಆರ್ ಟೆಸ್ಟ್​ ಕಡ್ಡಾಯ ಇರಲಿದೆ. ಹಾಸ್ಟೆಲ್​​ನಲ್ಲಿದ್ದವರಿಗೆ ಎರಡನೇ ಬಾರಿಗೆ ಟೆಸ್ಟ್​ ಮಾಡಿಸಬೇಕು ಎಂದು ಸಿಎಂ ಜೊತೆ ಸಭೆ ಬಳಿಕ ಸಚಿವ ಆರ್. ಅಶೋಕ್​ ಹೇಳಿದ್ದಾರೆ.

ಕಚೇರಿ, ಹೋಟೆಲ್​, ಮಾಲ್​ಗಳಲ್ಲಿ ಸಿಬ್ಬಂದಿಗೆ ಲಸಿಕೆ ಕಡ್ಡಾಯ ಆಗಿರಲಿದೆ. ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆ​ ಪಡೆದಿರಲೇಬೇಕು. ಶಾಲಾ-ಕಾಲೇಜುಗಳಲ್ಲಿ ಕೊರೊನಾ ಕೇಸ್​ ಹೆಚ್ಚಾಗಿವೆ. ಕೇಸ್​ ಹೆಚ್ಚಾದ ಕಡೆ ನಿಗಾವಹಿಸಲು ಡಿಸಿಗಳಿಗೆ ಸೂಚನೆ ಕೊಡಲಾಗಿದೆ. ಜಿಲ್ಲಾಧಿಕಾರಿಗಳಿ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದೆ. ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗುತ್ತೆ. ಮದುವೆಗಳಲ್ಲಿ ಜನರು ಮಾಸ್ಕ್​​ ಧರಿಸುವುದು ಕಡ್ಡಾಯವಿರಲಿ. ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮುಂದೂಡಿ. ಮುಂದಿನ ದಿನಗಳಲ್ಲಿ ಕೊರೊನಾ ಸ್ಥಿತಿಗತಿ ನೋಡಿ ಕಠಿಣ ಕ್ರಮ ಜಾರಿಗೊಳಿಸಲಾಗುವುದು. ಕೇಸ್​ಗಳನ್ನ ನೋಡಿಕೊಂಡು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಏರ್​ಪೋರ್ಟ್​ಗಳಲ್ಲಿ ತಪಾಸಣೆ ತೀವ್ರಗೊಳಿಸಲು ಸೂಚನೆ ಕೊಡಲಾಗಿದೆ. ಕ್ರಿಸ್​ಮಸ್​, ನ್ಯೂಇಯರ್​ ಸೆಲೆಬ್ರೇಷನ್​​ ಬಗ್ಗೆ ಮತ್ತೊಂದು ಸಭೆ ಮಾಡುತ್ತೇವೆ. ಬೂಸ್ಟರ್​ ಡೋಸ್​ ಕೊಡುವ ಬಗ್ಗೆ ಮನವಿ ಮಾಡಿದ್ದೇವೆ. ನಾವು ಕೇಂದ್ರ ಸರ್ಕಾರಕ್ಕೆ ನಾವು ಮನವಿ ಮಾಡಿದ್ದೇವೆ. ಬೆಳವಣಿಗೆ ನೋಡಿಕೊಂಡು ಮತ್ತೊಂದು ಸಭೆ ಮಾಡ್ತೇವೆ. ಮದುವೆ, ಚುನಾವಣಾ ಪ್ರಚಾರಗಳಲ್ಲಿ ಮಾಸ್ಕ್​ ಕಡ್ಡಾಯ ಎಂದು ಅಶೋಕ್ ಮಾಹಿತಿ ನೀಡಿದ್ದಾರೆ.

ರಾಜ್ಯದ ವಿವಿಧೆಡೆ ಪಾಸಿಟಿವಿಟಿ ರೇಟ್ ಬಗ್ಗೆ ಮಾಹಿತಿ
ವಿದೇಶಗಳಲ್ಲಿ ಹೊಸತಳಿಯ ಒಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆ ಕಳೆದ ಒಂದು ವಾರದ ಪಾಸಿಟಿವಿಟಿ ರೇಟ್ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಸದ್ಯ 0.42 ಪಾಸಿಟಿವಿಟಿ ರೇಟ್ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಧಾರವಾಡ ಜಿಲ್ಲೆ 1.82, ಮೈಸೂರು 1.08, ಉಡುಪಿ 0.42, ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 0.54, ಬೆಂಗಳೂರು ನಗರ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 0.42 ಇದೆ.

ಗಡಿಭಾಗದಲ್ಲಿ ಕಟ್ಟೆಚ್ಚರ: ಸಿಎಂ ಬೊಮ್ಮಾಯಿ ಸೂಚನೆ
ವಿದೇಶಗಳಲ್ಲಿ ಹೊಸತಳಿಯ ಒಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆ ಗಡಿ ಭಾಗದಲ್ಲಿ ಬಿಗಿ ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮಹಾರಾಷ್ಟ್ರ, ಕೇರಳದಲ್ಲಿ ಕೊವಿಡ್ ಪ್ರಕರಣ ಹೆಚ್ಚಾದ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಸಿಎಂ ಸೂಚನೆ ನೀಡಿದ್ದಾರೆ. ರಾಜ್ಯದ ಗಡಿಯಲ್ಲಿ ದಿನದ 24 ಗಂಟೆ ಬಿಗಿ ಕ್ರಮಕ್ಕೆ ಸೂಚನೆ ಕೊಡಲಾಗಿದೆ. ಗಡಿಯಲ್ಲಿ ಸಿಬ್ಬಂದಿ ಶಿಫ್ಟ್ ವೈಸ್​ ಪರೀಕ್ಷೆ ಮಾಡಲು ಸೂಚನೆ ನೀಡಲಾಗಿದೆ. ಲಸಿಕೆ ಪಡೆದಿದ್ದರೋ ಇಲ್ಲವೋ ಎಂದು ಪರಿಶೀಲಿಸಲು ಸೂಚನೆ ಕೊಡಲಾಗಿದೆ.

ಕೇರಳದಿಂದ ಬರುವ ಪ್ರಯಾಣಿಕರಿಗೆ ಕೊವಿಡ್​ ಟೆಸ್ಟ್​ ಕಡ್ಡಾಯ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಸೋಂಕು ಹೆಚ್ಚಳ ಹಿನ್ನೆಲೆ ಟೆಸ್ಟ್​ ಕಡ್ಡಾಯ ಎಂದು ತಿಳಿಸಲಾಗಿದೆ. ಕೇರಳದಿಂದ ಬಂದ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ ಆಗಿದೆ. ಈ ಹಿನ್ನೆಲೆ, ರೈಲು, ಬಸ್​ ನಿಲ್ದಾಣದಲ್ಲಿ ಕೇರಳ ಪ್ರಯಾಣಿಕರಿಗೆ ಟೆಸ್ಟ್​ ಕಡ್ಡಾಯ ಮಾಡಲಾಗಿದೆ. ಕಡ್ಡಾಯವಾಗಿ ಕೊವಿಡ್​ ಟೆಸ್ಟ್​ ನಡೆಸುವಂತೆ ಬಿಬಿಎಂಪಿ ಸೂಚನೆ ನೀಡಿದೆ.

ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ
ವಿದೇಶಗಳಲ್ಲಿ ಹೊಸತಳಿಯ ಒಮಿಕ್ರಾನ್ ವೈರಸ್ ಪತ್ತೆ ಆಗಿರುವ ಕಾರಣ 2ನೇ ಡೋಸ್​ ಲಸಿಕೆ ನೀಡುವುದನ್ನು ಚುರುಕುಗೊಳಿಸಿ. 2ನೇ ಡೋಸ್​ ಲಸಿಕೆ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ತಿಳಿಸಿದ್ದಾರೆ. ಇದ್ದಕ್ಕಿದ್ದಂತೆ ಕೆಲ ಜಿಲ್ಲೆಗಳಲ್ಲಿ ಕೇಸ್​ ಹೆಚ್ಚಾಗಲು ಕಾರಣವೇನು ಎಂದು ಅಧಿಕಾರಿಗಳನ್ನ ಪ್ರಶ್ನಿಸಿದ ಬೊಮ್ಮಾಯಿ ಮಾಹಿತಿ ಪಡೆದುಕೊಂಡಿದ್ದಾರೆ. ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾವಹಿಸಿ. ವಿದೇಶಿ ಪ್ರಜೆಗಳಿಗೆ ಕಡ್ಡಾಯವಾಗಿ RTPCR ಟೆಸ್ಟ್ ಮಾಡಿಸಿ. ಏರ್​ಪೋರ್ಟ್​ನಲ್ಲೇ RTPCR ಟೆಸ್ಟ್ ಮಾಡಿಸಿ ಎಂದು ಸೂಚನೆ ನೀಡಲಾಗಿದೆ.

ಸೋಂಕು ಹೆಚ್ಚಾಗುತ್ತಿರುವ ಪ್ರದೇಶಗಳ ಬಗ್ಗೆಯೂ ಸಿಎಂ ಬೊಮ್ಮಾಯಿಗೆ ಮಾಹಿತಿ ನೀಡಲಾಗಿದೆ. ನೆರೆಯ ಕೇರಳ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಗಡಿ ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಅಧಿಕಾರಿಗಳಿಂದ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದುಕೊಂಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಸಭೆ
ಬಿಬಿಎಂಪಿ ಸೇರಿ ಬೆಂಗಳೂರು ನಗರ ಜಿಲ್ಲೆ, ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಮೈಸೂರು ಸೇರಿ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ವೀಡಿಯೊ ಸಂವಾದ ನಡೆಸಿದ್ದಾರೆ. ಕೊವಿಡ್ ಪರಿಸ್ಥಿತಿ, ನಿಯಂತ್ರಣ ಕ್ರಮಗಳ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಸಿಎಂಗೆ ಮಾಹಿತಿ ನೀಡಿದ್ದಾರೆ. ಆಫ್ರಿಕಾ ತಳಿ ಒಮಿಕ್ರಾನ್ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಆಫ್ರಿಕಾ, ಸಿಂಗಾಪುರ, ಬೋಟ್ಸ್ ವಾನಾ ದೇಶಗಳಲ್ಲಿ ಹೊಸ ತಳಿ ಪತ್ತೆಯಾಗಿದೆ. ಹೊಸ ತಳಿಯ ಬಗ್ಗೆ ಜಾಗತಿಕ ಅಧ್ಯಯನ ನಡೆಯುತ್ತಿದೆ. ಹೊಸ ತಳಿಯ ಗುಣಗಳ ಬಗ್ಗೆ ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Coronavirus: ಹೊಸತಳಿಯ ಕೊರೊನಾ ವೈರಾಣು ಪತ್ತೆ ಹಿನ್ನೆಲೆ; ಕರ್ನಾಟಕದ ಗಡಿಭಾಗಗಳಲ್ಲಿ ಬಿಗಿ ಕ್ರಮ- ವಿವರ ಓದಿರಿ

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಇಬ್ಬರ ಶವ ಪಡೆಯಲು ವರ್ಷ ಕಳೆದರೂ ಬಾರದ ಸಂಬಂಧಿಕರು; ಅಂತ್ಯಸಂಸ್ಕಾರಕ್ಕೆ ಆಸ್ಪತ್ರೆ ಸಿಬ್ಬಂದಿ ಚಿಂತನೆ

Published On - 6:48 pm, Sat, 27 November 21