ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಮಳೆ(Karnataka Rain) ಹಾಗೂ ಪ್ರಕೃತಿ ವಿಕೋಪ ಹಿನ್ನೆಲೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಇತರೆ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಮಳೆಯಿಂದ ಹಾನಿಗೆ ಒಳಗಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಸಿಇಒಗಳ ಜೊತೆ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮತ್ತು ಅದರಿಂದ ಉಂಟಾಗಿರುವ ಹಾನಿ ಕುರಿತು ಮಾಹಿತಿ ಪಡೆಯಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆಯಾಗಿದೆ? ಎಷ್ಟು ಹಾನಿಯಾಗಿದೆ? ಎಂಬುದರ ಕುರಿತು ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡಲಿದ್ದಾರೆ. ಸಂಬಂಧಪಟ್ಟ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: Karnataka Rain Live Updates: ಕರಾವಳಿ ಭಾಗದಲ್ಲಿ ಇನ್ನೂ 5 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ
ಬಿಜೆಪಿ ಮಿಷನ್ ದಕ್ಷಿಣ್ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?
ಇದು ಬಿಜೆಪಿಯ ಮಿಷನ್ ದಕ್ಷಿಣ್ ಎಂಬ ಟೀಕೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ನೋಡಿ ಇಳಯರಾಜ, ಪಿಟಿ ಉಷಾ, ವಿಜಯೇಂದ್ರಪ್ರಸಾದ್, ಡಾ.ವೀರೇಂದ್ರ ಹೆಗಡೆ ಇವರೆಲ್ಲ ಸುದೀರ್ಘಗಿ 40 ವರ್ಷ ಕಾಲ ತಮ್ಮ ತಮ್ಮ ಕ್ಷೇತ್ರದಲ್ಲಿ ಸೇವೆ ಮಾಡಿದವರು. ಹೀಗಾಗಿ ಸಾಧಕರನ್ನ ಗುರುತಿಸುವ ಕೆಲಸ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಗಿದೆ. ಪದ್ಮ ಅವಾರ್ಡ್ ಕೂಡ ಎಲೆಮರಿಯಾಗಿ ಪ್ರಾಮಾಣಿಕವಾಗಿ ಪ್ರಶಸ್ತಿ ಅಪೇಕ್ಷೆ ಇಲ್ಲದೇ ಕೆಲಸ ಮಾಡಿದವರನ್ನ ಗುರುತಿಸಿ ಪ್ರಶಸ್ತಿ ಕೊಡಲಾಗ್ತಿದೆ. ರಾಷ್ಟ್ರಪತಿ ಆಯ್ಕೆಯ ವಿಚಾರದಲ್ಲೂ ಒಬ್ಬ ಟ್ರೈಬಲ್ ಮಹಿಳೆ, ಆಡಳಿತದ ಅನುಭವವಿರುವವರನ್ನ ಆಯ್ಕೆ ಮಾಡಲಾಗಿದೆ. ಇಂಥಹ ಎಲ್ಲಾ ಸ್ಥಾನಗಳಿಗೆ ಧನಾತ್ಮಕವಾದ ಒಂದು ಗುರುತು ಸಿಗುವಂತಹದ್ದು ಆಗಿದೆ. ಹಿಂದೆ ಲಾಬಿ ಮಾಡುವವರನ್ನ ಆಸೆ ಆಕಾಂಕ್ಷೆ ಇರುವವರನ್ನ ಮಾಡಲಾಗುತ್ತಿತ್ತು. ಆದ್ರೆ ಇವತ್ತು ಯಾರು ಅಪೇಕ್ಷೆ ಮಾಡಿರಲಿಲ್ಲ ಅಂತಹವರನ್ನ ಆಯ್ಕೆ ಮಾಡುವುದರ ಮೂಲಕ ಒಂದು ಶ್ರೇಷ್ಠವಾದ ಪದ್ದತಿಯನ್ನ ನರೇಂದ್ರ ಮೋದಿಯವರು ಆಯ್ಕೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ಗೆ ಸಿಎಂ ತಿರುಗೇಟು
ಪಿಎಸ್ಐ ಪ್ರಕರಣದ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ ವಿಚಾರಕ್ಕೆ ಸಂಬಂಧಿಸಿ ಸಿಎಂ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಆವತ್ತು ಅವರ ಕಾಲದಲ್ಲಿ ನಡೆದ ಪ್ರಕರಣಗಳನ್ನು ಯಾಕೆ ನ್ಯಾಯಾಂಗ ತನಿಖೆಗೆ ಕೊಡಲಿಲ್ಲ? ಈಗ ಅವರು ನಮಗೆ ಕೇಳ್ತಿರೋದು ಸರೀನಾ? ಅವರು ಯಾಕೆ ನ್ಯಾಯಾಂಗ ತನಿಖೆ ಮಾಡಿಸ್ಲಿಲ್ಲ ಅಂತ ಹೇಳಲಿ. ಈಗಿನ ಪ್ರಕರಣ ನ್ಯಾಯಾಂಗ ತನಿಖೆಗೆ ಕೊಡೋದು ದೊಡ್ಡ ವಿಷಯ ಅಲ್ಲ. ಆದ್ರೆ ಅವರು ನ್ಯಾಯಾಂಗ ತನಿಖೆಗೆ ನೇಮಕಾತಿ ಪ್ರಕರಣಗಳನ್ನು ಕೊಡ್ಲಿಲ್ಲ. ಒಬ್ಬರನ್ನೂ ಬಂಧಿಸಲೂ ಇಲ್ಲ ಅವರು ಮಾಡದಿರೋದನ್ನು ನಮಗೆ ಕೇಳ್ತಿದಾರೆ. ಅವರ ಕಾಲದಲ್ಲಿ ನ್ಯಾಯಾಂಗ ತನಿಖೆಗೆ ಕೊಟ್ಟ ಪ್ರಕರಣಗಳ ವಿವರ ಯಾವುದೂ ಹೊರಗೆ ಬಂದಿಲ್ಲ. ಈಗಿನ ಪಿಎಸ್ಐ ಕೇಸ್ ನ ತನಿಖೆಯ ದಾರಿ ತಪ್ಪಿಸಲು ಅವರು ನ್ಯಾಯಾಂಗ ತನಿಖೆಗೆ ಆಗ್ರಹ ಮಾಡ್ತಿದ್ದಾರೆ ಎಂದರು.
ಪಿಎಸ್ಐ ಕೇಸ್ನ ತನಿಖೆ ಬಹುತೇಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ನಡೀತಿದೆ. ಕೇಸ್ನಲ್ಲಿ ಏನೇನು ಪ್ರಗತಿ ಆಗ್ತಿದೆ ಅದರ ಬಗ್ಗೆ ನ್ಯಾಯಾಲಯಕ್ಕೆ ನಾವು ವರದಿ ಕೊಡ್ತಿದ್ದೀವಿ. ಹೀಗಾಗಿ ಇದೇ ನ್ಯಾಯಾಂಗದ ತನಿಖೆ ಅನ್ಕೊಂಡು ನಾವು ತನಿಖೆ ಮಾಡ್ತಿದ್ದೇವೆ. ನಮ್ಮ ಸರ್ಕಾರ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ಮಾಡ್ತಿದೆ ಎಂದರು.
Published On - 7:33 pm, Thu, 7 July 22