75 ನೇತಾಜಿ ಅಮೃತ ಎನ್​ಸಿಸಿ ಶಾಲೆಗಳ ಲೋಕಾರ್ಪಣೆ: ಜಕ್ಕೂರು ವೈಮಾನಿಕ ಶಾಲೆ ಮತ್ತೆ ಆರಂಭ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 23, 2022 | 7:19 PM

ಬೆಂಗಳೂರಿನ ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆಯಲ್ಲಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ಪೈಲಟ್​ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಘೋಷಿಸಿದರು.

75 ನೇತಾಜಿ ಅಮೃತ ಎನ್​ಸಿಸಿ ಶಾಲೆಗಳ ಲೋಕಾರ್ಪಣೆ: ಜಕ್ಕೂರು ವೈಮಾನಿಕ ಶಾಲೆ ಮತ್ತೆ ಆರಂಭ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ನಗರದ ಜಕ್ಕೂರಿನಲ್ಲಿ ನವೀಕರಣಗೊಂಡ ಸರ್ಕಾರಿ ವಿಮಾನ ಹಾರಾಟ ತರಬೇತಿ ಶಾಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆಗೊಳಿಸಿದರು. ನೇತಾಜಿ ಸುಭಾಷ್ ಚಂದ್ರಬೋಸ್ 125ನೇ ಜನ್ಮದಿನ ಹಿನ್ನೆಲೆಯಲ್ಲಿ 75 ನೇತಾಜಿ ಅಮೃತ ಎನ್​​ಸಿಸಿ ಶಾಲೆಗಳನ್ನೂ ಲೋಕಾರ್ಪಣೆಗೊಳಿಸಲಾಯಿತು. ಜಕ್ಕೂರಿನ ವೈಮಾನಿಕ ತರಬೇತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಅಶ್ವತ್ಥ್ ನಾರಾಯಣ​, ನಾರಾಯಣಗೌಡ​, ಬಿ.ಸಿ.ನಾಗೇಶ್, ಶಾಸಕ ಕೃಷ್ಣ ಭೈರೇಗೌಡ ಭಾಗವಹಿಸಿದ್ದರು. ವೈಮಾನಿಕ ತರಬೇತಿ ಶಾಲೆಗೆ ಚಾಲನೆ ನೀಡಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಬೆಂಗಳೂರಿನ ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆಯಲ್ಲಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ಪೈಲಟ್​ಗಳಿಗೆ ತರಬೇತಿ ನೀಡಲಾಗುತ್ತಿದೆ. ಹೊಸ ಟೆಕ್ನಾಮ್-P2006T ವಿಮಾನ, GFTS ಲೊಗೊ ಅನಾವರಣಗೊಳಿಸಲಾಯಿತು. ಹೆಲಿ ಟೂರಿಸಂಗೆ ಚಾಲನೆ ನೀಡಲಾಯಿತು. ಸಿದ್ಧಿ ಜನಾಂಗದ ಕ್ರೀಡಾಪಟುಗಳ ತರಬೇತಿ ಹಾಗೂ ಮಹಿಳಾ ಸ್ವ-ರಕ್ಷಣಾ ತರಬೇತಿಗೂ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಇದೇ ಸಂದರ್ಭ ಹೆಲಿಪ್ಯಾಡ್, ಲೌಂಜ್ ಸೇರಿದಂತೆ 50 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಸಿ.ನಾರಾಯಣಗೌಡ, ಬಡ ಮಕ್ಕಳಿಗೆ ವಿಮಾನ ಚಾಲನೆ ಕಲಿಸುವ ಯೋಜನೆ ತಯಾರಾಗುತ್ತಿದೆ. ಜಕ್ಕೂರು ವಿಮಾನ ನಿಲ್ದಾಣದ 10 ಎಕರೆ ಜಮೀನು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ. ಇಲ್ಲೇ ಫೋರ್ ಸೀಟರ್ ಹೆಲಿಕಾಪ್ಟರ್ ಒದಗಿಸುತ್ತೇವೆ. ಹಲವು ಕಂಪನಿಗಳು ಇಲ್ಲಿ ಗ್ಯಾರೇಜ್ ಮಾಡಿಕೊಂಡಿದ್ದು, ಅದರಿಂದ ಸರ್ಕಾರಕ್ಕೆ ₹ 17 ಕೋಟಿ ಆದಾಯ ಬರುತ್ತಿದೆ ಎಂದು ತಿಳಿಸಿದರು. ನಾನು ಕರ್ನಾಟಕದವರು ಅದೃಷ್ಟವಂತರು. ವಿಮಾನ ಚಾಲನೆ ಕಲಿಯಲು ಬೇರೆ ರಾಜ್ಯ ಅಥವಾ ದೇಶಕ್ಕೆ ಹೋಗಬೇಕಾದ ಅಗತ್ಯವಿಲ್ಲ. ಎಲ್ಲವೂ ಇಲ್ಲಿಯೇ ಸಿಗುತ್ತದೆ. ಒಂದು ಎಂಜಿನ್, ಎರಡು ಎಂಜಿನ್​ನ ವಿಮಾನಗಳೂ ಇಲ್ಲಿವೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ, ಕೃಷ್ಣಭೈರೇಗೌಡ, ಜಕ್ಕೂರು ವಿಮಾನ ನಿಲ್ದಾಣದ ಜಾಗ ಮೈಸೂರು ಮೈಸೂರು ರಾಜ ಮನೆತನದ ಕೊಡುಗೆ ಎಂದು ನೆನಪಿಸಿಕೊಂಡರು. ನಮ್ಮ ದೇಶದ ಇತರ ರಾಜ್ಯಗಳಲ್ಲಿ ರಾಜರು ಸರ್ಕಾರದ ಜಾಗ ತೆಗೆದುಕೊಂಡರು. ಆದರೆ ಮೈಸೂರು ಮನೆತನದವರು ಈ ಜಾಗ ಕೊಟ್ಟು, ಶಿಕ್ಷಣಕ್ಕೆ, ರೈತರ ತರಬೇತಿಗೆ ಅನುಕೂಲ ಕಲ್ಪಿಸಿಕೊಟ್ಟರು. ಮೈಸೂರು ಅರಸರು ಇಂಥ ನೂರಾರು ಕೆಲಸಗಳನ್ನು ಮಾಡಿದ್ದಾರೆ. ಇದು ಅವರೇ ಕೊಟ್ಟ 200 ಎಕರೆ ಜಾಗ. ಹಲವು ಕಾರಣಗಳಿಂದ ಇಲ್ಲಿ ಚಟುವಟಿಕೆಗಳಿಗೆ ಅಡೆತಡೆಯುಂಟಾಗಿತ್ತು. ಇದೀಗ ಮತ್ತೆ ಈ ಸುಪ್ರಸಿದ್ಧ, ಐತಿಹಾಸಿಕ ಜಾಗಕ್ಕೆ ಚಾಲನೆ ಸಿಕ್ಕಿದೆ ಎಂದು ಹೇಳಿದರು.

ಜಕ್ಕೂರು ವಿಮಾನ ನಿಲ್ದಾಣವು ಮುಂದಿನ ಪೀಳಿಗೆಗೆ ಉಳಿಯಬೇಕು. ಎಲಿವೇಟೆಡ್ ರಸ್ತೆ ಈ ಪ್ರದೇಶದಲ್ಲಿ ಇರುವುದರಿಂದ ವಿಮಾನಗಳ ಟೇಕಾಫ್ ಸ್ವಲ್ಪ ಕಷ್ಟವಾಗುತ್ತಿದೆ. ರನ್ ವೇ ಜಾಗವನ್ನು ಸ್ವಲ್ಪ ಹೆಚ್ಚಿಸಿಕೊಂಡರೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ. ನಮ್ಮ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ನಷ್ಟ ಆಗಿದೆ. ಹೆಬ್ಬಾಳ ಜಂಕ್ಷನ್ ಸರಿಪಡಿಸಿಕೊಡಿ. ಏರ್​ಪೋರ್ಟ್ ಬಳಿ ಒಂದು ಕಿಲೋಮೀಟರ್ ಜಾಮ್ ಆಗುತ್ತದೆ. ಇದರ ಬಗ್ಗೆ ಸ್ವಲ್ಪ ಗಮನಕೊಡಿ ಎಂದು ವೇದಿಕೆಯಲ್ಲೇ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿದ ಅಪ್ರತಿಮ ನಾಯಕ; ಸಿಎಂ ಬೊಮ್ಮಾಯಿ ಮಾತು
ಇದನ್ನೂ ಓದಿ: Jan Urja Manch: ಉದ್ಘೋಷ ಹೆಸರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನ ಆಚರಣೆ; ಪಿ.ವಿ.ಸಿಂಧು, ಡಾಲಿ ಶಿವಾನಿ ಸೇರಿ ಅನೇಕರಿಗೆ ಪ್ರಶಸ್ತಿ, ಪುರಸ್ಕಾರ