Masala Dosa: ಫುಡ್ ಡೆಲಿವರಿ ಆ್ಯಪ್ಗಳಲ್ಲಿ ಮಸಾಲಾ ದೋಸೆಯೇ ಬೆಸ್ಟ್ ಸೆಲರ್, ಚಿಕನ್ ಬಿರಿಯಾನಿಗೆ ಸೆಕೆಂಡ್ ಪ್ಲೇಸ್
Chicken Biriyani: ಜೊಮೆಟೊ ಡೆಲಿವರಿ ಬಾಯ್ಗಳು ಬರೋಬ್ಬರಿ 12 ಲಕ್ಷ ಮಸಾಲೆ ದೋಸೆಗಳನ್ನು ಗ್ರಾಹಕರಿಗೆ ತಲುಪಿಸಿದ್ದಾರೆ. ಈ ಸಂಖ್ಯೆಗೆ ಹೋಲಿಸಿದರೆ ಡೆಲಿವರಿಗೆ ಆಗಿರುವ ಚಿಕನ್ ಬಿರಿಯಾನಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ.
ಫುಡ್ ಡೆಲಿವರಿ ಆ್ಯಪ್ಗಳಲ್ಲಿ ಭಾರತ ದೇಶದಲ್ಲಿ ಅತಿಹೆಚ್ಚು ಆರ್ಡರ್ ಆದ ಫುಡ್ ಬಿರಿಯಾನಿ (Biriyani). ಆದರೆ ಬೆಂಗಳೂರಿನಲ್ಲಿ ಮಾತ್ರ ಬಿರಿಯಾನಿಯನ್ನು ಹಿಂದಿಕ್ಕಿ ಮಸಾಲೆದೋಸೆ (Masala Doas) ಮೊದಲ ಸ್ಥಾನ ಪಡೆದಿದೆ. ನಾನೇನು ಕಡಿಮೆ ಎಂಬಂತೆ ಬೆಂಗಳೂರಿನಲ್ಲಿಯೂ ಚಿಕನ್ ಬಿರಿಯಾನಿ (Chicken Biriyani) ಎರಡನೇ ಸ್ಥಾನಕ್ಕೆ ಬಂದಿದೆ. ಜೊಮೆಟೊ ವಕ್ತಾರರ (Zomato) ಹೇಳಿಕೆ ಪ್ರಕಾರ 2021ರಲ್ಲಿ ಜೊಮೆಟೊ ಡೆಲಿವರಿ ಬಾಯ್ಗಳು ಬರೋಬ್ಬರಿ 12 ಲಕ್ಷ ಮಸಾಲೆ ದೋಸೆಗಳನ್ನು ಗ್ರಾಹಕರಿಗೆ ತಲುಪಿಸಿದ್ದಾರೆ. ಈ ಸಂಖ್ಯೆಗೆ ಹೋಲಿಸಿದರೆ ಡೆಲಿವರಿಗೆ ಆಗಿರುವ ಚಿಕನ್ ಬಿರಿಯಾನಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ. ಅಂದರೆ ಅಂದರೆ 8 ಲಕ್ಷ ಚಿಕನ್ ಬಿರಿಯಾನಿಗಳನ್ನು ಜೊಮೆಟೊ ಗ್ರಾಹಕರ ಮನೆಗಳಿಗೆ ತಲುಪಿಸಿದೆ ಎಂದು ಹಲವು ಫುಡ್ಡೆಲಿವರಿ ಆ್ಯಪ್ಗಳ ವಕ್ತಾರರ ಹೇಳಿಕೆಯನ್ನು ಆಧರಿಸಿ ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆ ವರದಿ ಮಾಡಿದೆ.
ಮಸಾಲೆ ದೋಸೆ ಮಾತ್ರವಲ್ಲ, ಸೆಟ್ದೋಸೆ, ರವಾ ದೋಸೆಗಳನ್ನೂ ಸಾಕಷ್ಟು ಗ್ರಾಹಕರು ತರಿಸಿಕೊಂಡಿದ್ದಾರೆ. ಹೊಟೆಲ್ನಲ್ಲಿ ದೋಸೆ ಹೊಯ್ದು, ಮನೆಗೆ ಬರುವ ಹೊತ್ತಿಗೆ ಆರಿ ಹೋಗಿರುತ್ತೆ ಎನ್ನುವ ಕಾರಣಕ್ಕೆ ಕೆಲ ಗ್ರಾಹಕರು ದೋಸೆ ಹಿಟ್ಟನ್ನು ತರಿಸಿಕೊಂಡಿದ್ದಾರೆ. ಹೈದರಾಬಾದ್ ಮತ್ತು ಮುಂಬೈ ಹೊರತುಪಡಿಸಿದರೆ ಬೆಂಗಳೂರು ಅತಿಹೆಚ್ಚು ಆರೋಗ್ಯ ಕಾಳಜಿಯಿರುವವರ ನಗರ ಎನ್ನುತ್ತೆ ಮತ್ತೊಂದು ಫುಡ್ ಡೆಲಿವರಿ ಆ್ಯಪ್ ಸ್ವಿಗಿ.
ವಾರದ ಇತರ ದಿನಗಳಿಗೆ ಹೋಲಿಸಿದರೆ ಸೋಮವಾರ ಮತ್ತು ಗುರುವಾರ ಜನರು ಬಾಯಿರುಚಿಗಿಂತಲೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದು ಕಂಡು ಬರುತ್ತೆ. ಕೆಟೊ, ವೆಗನ್ ಮತ್ತು ಶುದ್ಧ ಸಸ್ಯಾಹಾರಕ್ಕೆ ಈ ಎರಡೂ ದಿನಗಳಂದು ಜನರು ಹೆಚ್ಚು ಒತ್ತು ನೀಡಿದ್ದಾರೆ.
ಬದಲಾಗ್ತಿದೆ ಪಟ್ಟಿ 2020ರಲ್ಲಿ ಡೆಲಿವರಿ ಆ್ಯಪ್ಗಳ ಸೇವೆಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬಂದವು. ಅಲ್ಲಿಯವರೆಗೆ ಕೇವಲ ಆಹಾರ ಉತ್ಪನ್ನಗಳ ಡೆಲಿವರಿಗೆ ಸೀಮಿತವಾಗಿದ್ದ ಆ್ಯಪ್ಗಳು 2020ರ ನಂತರ ಕೊರೊನಾ ಪಿಡುಗು ವೇಳೆ ಆದ ಬದಲಾವಣೆಗೂ ಒಗ್ಗಿಕೊಂಡವು. ಆಹಾರದ ಜೊತೆಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನೂ ಜನರು ತರಿಸಿಕೊಳ್ಳುವ ಪ್ರವೃತ್ತಿ ಆರಂಭವಾಯಿತು. 2021ರಲ್ಲಿ ಮತ್ತೆ ಊಟದ ಜೊತೆಗೆ ಬಾಳೆಹಣ್ಣು ತರಿಸಿಕೊಳ್ಳುವ ಪ್ರವೃತ್ತಿ ಶುರುವಾಗಿದ್ದು, ಪರಿಸ್ಥಿತಿ ಸುಧಾರಿಸುತ್ತಿದೆ ಎಂಬ ಸೂಚನೆ ನೀಡಿತು ಎನ್ನುತ್ತಾರೆ ಅವರು.
ಪ್ರೀತಿಪಾತ್ರರಿಗೆ ಆಹಾರ ಕಳಿಸುವುದು, ಪ್ರಾಣಿಗಳಿಗೆ ಆಹಾರ ಕಳಿಸುವುದು, ಪುಸ್ತಕಗಳು, ಬೇಕರಿ ಉತ್ಪನ್ನಗಳು ಮತ್ತು ಎಕ್ಸ್-ರೇ ರಿಪೋರ್ಟ್ಗಳನ್ನು ಕೊಂಡೊಯ್ಯಲು ಕೆಲವರು ಸ್ವಿಗಿ ಜೀನಿ ಆ್ಯಪ್ ಬಳಿಸಿ, ವಿನಂತಿಸಿದ್ದರು. 2021ರಲ್ಲಿ ಡನ್ಜೊ ಆ್ಯಪ್ಲ್ಲಿ ಅತಿಹೆಚ್ಚು ಕುರುಕಲು ತಿಂಡಿ, ಬಿಸ್ಕೀಟ್, ಪಾನೀಯ ಮತ್ತು ಸಿದ್ಧ ಆಹಾರ ಉತ್ಪನ್ನಗಳಿಗೆ ಬೇಡಿಕೆ ಶೇ 60ರಷ್ಟು ಹೆಚ್ಚಾಯಿತು. ಜನಸಂಚಾರಕ್ಕೆ ನಿರ್ಬಂಧಗಳು ಹೆಚ್ಚಾದಂತೆ ಆ್ಯಪ್ ಬಳಸುವವರ ಸಂಖ್ಯೆಯೂ ಹೆಚ್ಚಿತು ಎಂದು ಡನ್ಜೊ ಆ್ಯಪ್ನ ವಕ್ತಾರರು ಹೇಳುತ್ತಾರೆ. ಹಣ್ಣುಗಳು, ತರಕಾರಿ, ಹಾಲು ಮತ್ತು ಮಾಂಸಕ್ಕೆ ಬೇಡಿಕೆ ಹೆಚ್ಚಾಯಿತು. ಶೀಘ್ರ ಹಾಳಾಗುವ ಉತ್ಪನ್ನಗಳನ್ನೇ ಹೆಚ್ಚಿನ ಸಂಖ್ಯೆಯ ಜನರು ಆರ್ಡರ್ ಮಾಡುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಅವರು.
ಬೆಂಗಳೂರಿಗರ ಇಷ್ಟದ ಐದು ತಿನಿಸುಗಳು ಆನ್ಲೈನ್ ಆ್ಯಪ್ಗಳಲ್ಲಿ ಅತಿಹೆಚ್ಚು ಆರ್ಡರ್ ಪಡೆದ ಟಾಪ್-5 ಉತ್ಪನ್ನಗಳಿವು. ಮಸಾಲೆ ದೋಸೆ, ಚಿಕನ್ ಬಿರಿಯಾನಿ, ಪನೀರ್ ಬಟರ್ ಮಸಾಲಾ, ಘೀರೈಸ್, ಗೋಬಿ ಮಂಚೂರಿ. ಇದರ ಜೊತೆಗೆ ಪೊಂಗಲ್, ರವೆ ಇಡ್ಲಿ, ಪೂರಿ-ಸಾಗು, ಇಡ್ಲಿ-ವಡೆ, ಚಪಾತಿ, ಪರೋಟಗಳನ್ನೂ ಸಾಕಷ್ಟು ಜನರು ತರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಸಾಲೆ ದೋಸೆ ತಿನ್ನೋಕೆ ಅಪ್ಪು ಆ ಚಿಕ್ಕ ಹೋಟೆಲ್ಗೆ ಬರ್ತಿದ್ರು ಇದನ್ನೂ ಓದಿ: Video: ಟ್ವಿಟರ್ನಲ್ಲಿ ಸ್ಪೆಷಲ್ ದೋಸೆ ವೈರಲ್; ಇದಕ್ಕಿಂತ ಬೆಂಗಳೂರು ಮಸಾಲೆ ದೋಸೆಯೇ ಮೇಲು ಎಂದ ನೆಟ್ಟಿಗರು!