Jan Urja Manch: ಉದ್ಘೋಷ ಹೆಸರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನ ಆಚರಣೆ; ಪಿ.ವಿ.ಸಿಂಧು, ಡಾಲಿ ಶಿವಾನಿ ಸೇರಿ ಅನೇಕರಿಗೆ ಪ್ರಶಸ್ತಿ, ಪುರಸ್ಕಾರ
Netaji Subhash Chandra Bose Jayanti: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 13 ಸಾವಿರ ಸೈನಿಕರ ಸೇನೆ ರೂಪಿಸಿ ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಹೋರಾಡಿದರು ಎಂದು ತ್ರಿದಂಡಿ ಚಿನ್ನ ಜೀಯರ್ ಸ್ವಾಮೀಜಿ ಹೆಮ್ಮೆಯಿಂದ ಹೇಳಿದರು.
ಹೈದರಾಬಾದ್: ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನದ (Netaji Subhash Chandra Bose Jayanti) ಹಿನ್ನೆಲೆಯಲ್ಲಿ ಜನ್ ಉರ್ಜಾ ಮಂಚ್ ಎನ್ಜಿಒ ಆಯೋಜಿಸಿದ್ದ ಉದ್ಘೋಷ್ ಕಾರ್ಯಕ್ರಮದಲ್ಲಿ ಖ್ಯಾತ ಬ್ಯಾಡ್ಮಿಂಟ್ನ್ ಆಟಗಾರ್ತಿ ಪಿ.ವಿ.ಸಿಂಧು, ಬಿಲ್ಲುವಿದ್ಯೆ ಪರಿಣತ ಬಾಲಕಿ ಡಾಲಿ ಶಿವಾನಿ, NIMS ಆಸ್ಪತ್ರೆಯ ಖ್ಯಾತ ನರರೋಗ ತಜ್ಞ ಡಾ. ಅನಿರುದ್ ಪುರೋಹಿತ್ ಅವರಿಗೆ ನೇತಾಜಿ ಹೆಸರಲ್ಲಿ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮ ಹೈದರಾಬಾದ್‌ನ ಬಿರ್ಲಾ ಖಗೋಳವೀಕ್ಷಣಾ ಕೇಂದ್ರದಲ್ಲಿ ನಡೆದಿತ್ತು. ಹರ್ಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಮತ್ತು ತ್ರಿದಂಡಿ ಚಿನ್ನ ಜೀಯರ್ ಸ್ವಾಮಿಯವರು ಜಂಟಿಯಾಗಿ ನೀಡಿದ ನೇತಾಜಿ ಪ್ರಶಸ್ತಿಯನ್ನು ಪ್ರಾಚೀನ ಭಾರತೀಯ ತತ್ವಶಾಸ್ತ್ರ ಸಂಸ್ಥೆಯ ಸಂಸ್ಥಾಪಕ ಹಾಗೂ ಖ್ಯಾತ ಗಣಿತತಜ್ಞ ಶ್ರೀನಿವಾಸ ರಾಮಾನುಜಂ ಮೊಮ್ಮಗನೂ ಆಗಿರುವ ಪ್ರೊ.ರಾಜಮ್ ಅವರು ಸ್ವೀಕರಿಸಿದರು. ಹಾಗೇ, ಪಿವಿ ಸಿಂಧು ಅವರಿಗೆ ನೀಡಲಾದ ಯುವರತ್ನ ಪ್ರಶಸ್ತಿಯನ್ನು ಅವರ ತಂದೆ ರಮಣ ಅವರು ಸ್ವೀಕರಿಸಿದರು. ಹಾಗೇ, ಆಯುರ್ವೇದ ತಜ್ಞ ಡಾ. ಸುರೇಶ್ ಜಕೋಟಿಯಾರಿಗೆ ಆಯುಷ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಹೋರಾಟ ನೆನಪಿಸಿಕೊಳ್ಳಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಪುರಸ್ಕರಿಸಲಾಯಿತು.
ಭದ್ರಕಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ದಿವಂಗತ ಹರಿಪ್ರಸಾದ್ ಭದ್ರಕಾ ಅವರಿಗೆ ನೀಡಲಾದ ಮರೋಣತ್ತರ ಪ್ರಶಸ್ತಿಯನ್ನು ಅವರ ಪುತ್ರ ಶ್ರೀಕೃಷ್ಣ ಭದ್ರಕಾ ಸ್ವೀಕಾರ ಮಾಡಿದರು. ಹಾಗೇ, ಬಿಲ್ಲು ವಿದ್ಯೆ ಪಾರಂಗತೆ ಡಾಲಿ ಶಿವಾನಿ (9ವರ್ಷ) ಅವರಿಗೆ ಬಾಲರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಈಕೆ 3ವರ್ಷ ಇದ್ದಾಗಿನಿಂದಲೂ ತನ್ನ ತಂದೆಯಿಂದಲೇ ವಿದ್ಯೆ ಕಲಿಯುತ್ತಿದ್ದಾಳೆ. ಹಾಗೇ, ಡಾ.ಅನಿರುದ್ ಪುರೋಹಿತ್ ಅವರು ಸೆರೆಬ್ರಲ್ ಪಾಲ್ಸಿ ಬಗ್ಗೆ ನಡೆಸಿದ ವಿಶೇಷ ಅಧ್ಯಯನವನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಇನ್ನುಳಿದಂತೆ 116 ಮಂದಿಯ ಆತ್ಮಹತ್ಯೆಯನ್ನು ತಡೆದ ವಡ್ಡೆ ಹನುಮಂತು ಅವರಿಗೆ ಸಮಾಜ ಸೇವಾ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಹಾಗೇ, ತಮ್ಮ 250 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಔಷಧಿ ಸಸ್ಯಗಳನ್ನು ನೆಟ್ಟು ಬೆಳೆಸಿದ ತೆಲಂಗಾಣದ ಜಿವಿಕೆ ರಾವ್ ಅವರನ್ನೂ ಈ ಉದ್ಘೋಷ್ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಔಷಧೀಯ ಸತ್ವಗಳಿರುವ ಅಮೃತಬಳ್ಳಿ ಹಾಗೂ ತುಳಸಿ ಗಿಡಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದ ಶ್ಯಾಮ್ ಗೋಪಾಲ್ ದಾಸ್ ಅವರನ್ನು ಗೌರವಿಸಲಾಯಿತು. ಬಿಲ್ವಿದ್ಯೆ ನಿಪುಣರಾದ ಸತ್ಯನಾರಾಯಣ ಚೆರುಕುರಿ ಮತ್ತು ಕೃಷ್ಣಕುಮಾರಿ ಅವರಿಗೆ ಸಂಸ್ಕೃತಿ ಗೌರವ ಪುರಸ್ಕಾರ ನೀಡಲಾಯಿತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಹರ್ಯಾಣ ರಾಜ್ಯಪಾಲ ಭಂಡಾರು ದತ್ತಾತ್ರೇಯ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಅದ್ಭುತ ಕಾರ್ಯವನ್ನು ನೆನಪಿಸಿಕೊಳ್ಳುವ ಸಲುವಾಗಿ ಆಚರಿಸುತ್ತಿರುವ ಆಜಾದಿ ಕಾ ಅಮೃತ್ ಮಹೋತ್ಸವ್, ಕೇಂದ್ರಸರ್ಕಾರದ ಮಹತ್ವದ ಉಪಕ್ರಮ ಎಂದು ಹೇಳಿದರು. ಪ್ರತಿಯೊಬ್ಬರ ಭಾರತೀಯನಲ್ಲೂ ಹೆಮ್ಮೆಯ ಭಾವ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ಮಾತನಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ವಿರುದ್ಧ ಹೋರಾಡಲು 13 ಸಾವಿರ ಸೈನಿಕರುಳ್ಳ ಸೈನ್ಯವನ್ನು ರಚಿಸಿ, ದಿಟ್ಟವಾಗಿ ಹೋರಾಟ ನಡೆಸಿದರು. ಆದರೆ ನಂತರ ಅವರನ್ನು ಭಯೋತ್ಪಾದಕ ಎಂದು ಕರೆಯಲಾಯಿತು ಎಂದು ವಿಷಾದ ವ್ಯಕ್ತಪಡಿಸಿದರು. ನೀವು ಗುಲಾಬಿಯ ಪರಿಮಳ ಆನಂದಿಸಲು ಬಯಸಿದರೆ, ಅದರ ಮುಳ್ಳುಗಳಿಂದ ಆಗುವ ನೋವನ್ನು ಅನುಭವಿಸಲು ಸಿದ್ಧರಾಗಿ ಎಂಬ ನೇತಾಜಿಯವರ ಮಾತುಗಳನ್ನು ನೆನಪಿಸಿಕೊಂಡರು.
ಇಂದಿನ ಸಮಾಜದಲ್ಲಿ ಯುವಜನರಿಗೆ ಸ್ವ-ನಿಯಂತ್ರಣ, ದೇಶಭಕ್ತಿ ಅತ್ಯಗತ್ಯ ಎಂದು ಶ್ರೀಶ್ರೀ ತ್ರಿದಂಡಿ ರಾಮಾನುಜ ಚಿನ ಜೀಯರ್ ಸ್ವಾಮಿ ಹೇಳಿದರು. ಪ್ರತಿಕಷ್ಟದ ನಂತರವೂ ಸುಖ ಇರುತ್ತದೆ ಎಂಬ ಹಿರಿಯರ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎಲ್ಲರೂ ಅನುಸರಿಸಬೇಕು ಎಂದು ಅವರು ಸಲಹೆ ಮಾಡಿದರು
ಹಾಗೇ, ಫೆ.2ರಿಂದ 14ರವರೆಗೆ ಹೈದರಾಬಾದ್‌ನ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಮುಂಚಿಂತಾಲ್ ಗ್ರಾಮದಲ್ಲಿ ನಡೆಯಲಿರುವ ಶ್ರೀ ರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮದ ಬಗ್ಗೆಯೂ ಮಾತನಾಡಿದರು. ಅಂದಹಾಗೆ, ಫೆ.4ರಂದು ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆಯನ್ನು ಅಲ್ಲಿ ಪ್ರಧಾನಿ ಮೋದಿ ಅನಾವರಣ ಗೊಳಿಸಲಿದ್ದಾರೆ. ಹಾಗೇ, ಇದೇ ಸಮಾರಂಭದಲ್ಲಿ ಮಾತನಾಡಿದ ತೆಲಂಗಾಣ ಸಂಸ್ಕೃತಿ ಮತ್ತು ಯುವಜನ ವ್ಯವಹಾರಗಳ ಸಚಿವ ವಿ.ಶ್ರಿನಿವಾಸ್ ಗೌಡ್, ನೇತಾಜಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿಯೊಬ್ಬ ಆರೋಗ್ಯವಂತರೂ ರಕ್ತದಾನ ಮಾಡಲು ಕರೆ ನೀಡಿದರು.
ಇದನ್ನೂ ಓದಿ: ಮುಂಬೈ ಏರ್ಪೋರ್ಟ್ನಲ್ಲಿ ಹಸಿರು ಪೈಜಾಮಾ ಧರಿಸಿ ಮಿಂಚಿದ ಕತ್ರಿನಾ; ಅದರ ಬೆಲೆ ಕೇಳಿ ದಂಗಾದ ಫ್ಯಾಶನ್ ಪ್ರಿಯರು
Published On - 4:00 pm, Sun, 23 January 22