Independence Day: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬೊಮ್ಮಾಯಿ ಧ್ವಜಾರೋಹಣ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಸೇನೆಯ ಎಂಇಜಿ ರೆಜಿಮೆಂಟ್ ತಂಡದವರು ಟೆಂಟ್ ಪೆಗ್ಗಿಂಗ್, ಕಾಂಬ್ಯಾಟ್ ಫ್ರೀ ಫಾಲ್ ಮತ್ತು ದೇಹದಾರ್ಢ್ಯ ಸಾಹಸ ಪ್ರದರ್ಶಿಸಲಿದ್ದಾರೆ.
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ (Independence Day) ಪ್ರಯುಕ್ತ ನಾಳೆ (ಆಗಸ್ಟ್ 15) ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನಗರದ ಮಾಣೆಕ್ ಶಾ (Manekshaw Parede Ground) ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಿಗ್ಗೆ 8.45ಕ್ಕೆ ಮುಖ್ಯಮಂತ್ರಿ ಮೈದಾನಕ್ಕೆ ಆಗಮಿಸಲಿದ್ದು, 9.00 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಹಣದ ನಂತರ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮಾಡಲಿರುವ ಅವರು ಗೌರವ ರಕ್ಷೆ ಸ್ವೀಕರಿಸಿದ ನಂತರ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ.
ಕೆಎಸ್ಆರ್ಪಿ, ಸಿಆರ್ಪಿಎಫ್, ಬಿಎಸ್ಎಫ್, ಸಿಎಆರ್, ಕೆಎಸ್ಐಎಸ್ಎಫ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಟ್ರಾಪಿಕ್ ವಾರ್ಡನ್, ಆಗ್ನಿಶಾಮಕ ದಳ ಸಿಬ್ಬಂದಿ, ಡಾಗ್ ಸ್ಕ್ವಾಡ್ ಮತ್ತು ಬ್ಯಾಂಡ್ನ ಒಟ್ಟು 36 ತುಕಡಿಗಳಲ್ಲಿ ಸುಮಾರು 1,200 ಮಂದಿ ಪಂಥಸಂಚಲನ ನಡೆಸಲಿದ್ದಾರೆ. ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದ ಸದಸ್ಯರು ನಾಡಗೀತೆ ಮತ್ತು ರೈತಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಬೆಂಗಳೂರು ಉತ್ತರ ಜಿಲ್ಲೆಯ ಚಿಕ್ಕಬಿದರಕಲ್ಲು ಸರ್ಕಾರಿ ಫ್ರೌಡಶಾಲೆಯ 800 ಮಕ್ಕಳು ‘ಅಮೃತ ಮಹೋತ್ಸವದ ಭಾರತದ ಸಂಭ್ರಮದ’ ನೃತ್ಯ ಪ್ರದರ್ಶಿಸಲಿದ್ದಾರೆ. ಬೆಂಗಳೂರು ಉತ್ತರ ವಲಯದ ಹೇರೋಹಳ್ಳಿ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 800 ಮಕ್ಕಳು ‘ಈಸೂರು ಹೋರಾಟ’ ಹಾಗೂ ಗುರಪ್ಪನಪಾಳ್ಯದ ಲಿಲ್ಲಿ ರೋಜ್ ಪ್ರೌಢಶಾಲೆಯ 850 ಮಕ್ಕಳು ‘ಜೈ ಜವಾನ್ ಜೈ ಕಿಸಾನ್’ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೇನೆಯ ಎಂಇಜಿ ರೆಜಿಮೆಂಟ್ ತಂಡದವರು ಟೆಂಟ್ ಪೆಗ್ಗಿಂಗ್, ಕಾಂಬ್ಯಾಟ್ ಫ್ರೀ ಫಾಲ್ ಮತ್ತು ದೇಹದಾರ್ಢ್ಯ ಸಾಹಸ ಪ್ರದರ್ಶಿಸಲಿದ್ದಾರೆ.
ಸಾರ್ವಜನಿಕರಿಗೂ ಪ್ರವೇಶಕ್ಕೆ ಅವಕಾಶ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಳ್ಳುವ ಮಾಣೆಕ್ ಶಾ ಪರೇಡ್ ಗ್ರೌಂಡ್ನ ಕಾರ್ಯಕ್ರಮಕ್ಕೆ ಈ ಬಾರಿ ಸಾರ್ವಜನಿಕರಿಗೂ ಪ್ರವೇಶ ನೀಡಲಾಗಿದೆ. ಎಂಟು ಸಾವಿರ ಆಮಂತ್ರಣ ಪತ್ರಿಕೆ ನೀಡಲಾಗಿದ್ದು, ಮೈದಾನದ ಒಂದು ಭಾಗವನ್ನು ಸಾರ್ವಜನಿಕರ ಪ್ರವೇಶಕ್ಕೆ ಮೀಸಲಿಡಲಾಗಿದೆ. ಎರಡು ವರ್ಷಗಳ ನಂತರ ಸಾರ್ವಜನಿರಿಗೆ ಕಾರ್ಯಕ್ರಮದ ಆಮಂತ್ರಣ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 1,700 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತಿದೆ. ಭದ್ರತಾ ಕಾರ್ಯದಲ್ಲಿ ಒಂಬತ್ತು ಡಿಸಿಪಿ, 15 ಎಸಿಪಿ, 44 ಮಂದಿ ಇನ್ಸ್ಪೆಕ್ಟರ್ಗಳು, 96 ಪಿಎಸ್ಐ, 14 ಮಹಿಳಾ ಪಿಎಸ್ಐ, 77 ಮಂದಿ ಎಎಸ್ಐ ಮತ್ತು 800 ಸಿಬ್ಬಂದಿಗಳು, 10 ಕೆಎಸ್ಆರ್ಪಿ ತುಕಡಿಗಳು ತೊಡಗಿಕೊಳ್ಳಲಿವೆ. ಇದರ ಜೊತೆಗೆ ಸನೂರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
‘ನಗರದ ವಿವಿಧೆಡೆ ಸ್ವಾತಂತ್ರ್ಯ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುವ ಹಿನ್ನೆಲೆ ಕೊಂಚಮಟ್ಟಿಗೆ ಟ್ರಾಫಿಕ್ ಸಮಸ್ಯೆ ಆಗಬಹುದು. ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಪೊಲೀಸ್ ಆಯುಕ್ತ ಪ್ರತಾಪ್ರೆಡ್ಡಿ ಮನವಿ ಮಾಡಿದ್ದಾರೆ.