ಬೆಂಗಳೂರು: ರಾಜ್ಯದ ಹಿರಿಯ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಯೋಗಕ್ಷೇಮ ವಿಚಾರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಪುಟದ ಸಹೋದ್ಯೋಗಿಗಳು ಪದ್ಮನಾಭನಗರದಲ್ಲಿರುವ ಅವರ ನಿವಾಸಕ್ಕೆ ಇದೀಗತಾನೆ ಭೇಟಿ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಜೊತೆಗೆ ಸಚಿವರಾದ ಆರ್. ಅಶೋಕ್, ಸೋಮಣ್ಣ, ಕೆ. ಗೋಪಾಲಯ್ಯ, ಭೈರತಿ ಬಸವರಾಜ, ಮುನಿರತ್ನ, ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಸೇರಿ ಹಲವು ಸಚಿವರು ಆಗಮಿಸಿದ್ದಾರೆ. ಪ್ರಸ್ತುತ ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದ ಮಧ್ಯೆ ಹಿರಿಯರಾದ ದೇವೇಗೌಡರ ಯೋಗಕ್ಷೇಮ ವಿಚಾರಿಸಲು ಸಚಿವರೆಲ್ಲ ಬಂದಿದ್ದಾರೆ.
ದೇವೇಗೌಡರ ಆರೋಗ್ಯ ವಿಚಾರಿಸುತ್ತಿರುವ ಸಿಎಂ ಬೊಮ್ಮಾಯಿ:
ಆದರೆ ಸದನ ನಡೆಯುತ್ತಿರುವ ಕಾರಣ ಎಲ್ಲರೂ ತೆರಳುವುದು ಬೇಡ ಎಂಬ ಸಿಎಂ ಸೂಚನೆ ಹಿನ್ನೆಲೆಯಲ್ಲಿ ಕೆಲ ಸಚಿವರು ಸದನಕ್ಕೆ ವಾಪಾಸಾದರು. ಇದೆ ವೇಳೆ, ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದ ಎರಡನೇ ಮಹಡಿಯಲ್ಲಿ ಸಿಎಂ ಬೊಮ್ಮಾಯಿ ಆರೋಗ್ಯ ವಿಚಾರಿಸುತ್ತಿದ್ದಾರೆ. ದೇವೇಗೌಡರ ಪಕ್ಕದಲ್ಲಿಯೇ ಕುಳಿತು, ಗೌಡರ ಕೈ ಹಿಡಿದು ಅವರ ಆರೋಗ್ಯದ ಬಗ್ಗೆ ಸಿಎಂ ಬೊಮ್ಮಾಯಿ ಮಾಹಿತಿ ಪಡೆದರು.
ಕಾಲು ನೋವು ಇದೆ… ಮಂಡಿ ನೋವು ಕೂಡ ಇದೆ:
ದೇವೆಗೌಡರನ್ನು ಸಿಎಂ ಭೇಟಿ ಮಾಡಿದ ವೇಳೆ ಹಿರಿಯ ಗೌಡರು ಊಟ ಮಾಡ್ಕೊಂಡು ಹೋಗಿ ಎಂದು ಸಿಎಂ ಬೊಮ್ಮಾಯಿ ಅವರಿಗೆ ಸೂಚಿಸಿದರು. ನಮ್ಮದೆಲ್ಲಾ ಊಟ ಆಗಿದೆ ಎಂದನ್ನು ಸಿಎಂ ಬೊಮ್ಮಾಯಿ ತಮ್ಮದು ಊಟ ಎಲ್ಲಾ ಏನ್ ಮಾಡ್ತೀರಾ..? ನಾರ್ಮಲ್ ಮುದ್ದೆ ಎಲ್ಲಾ ಮಾಡ್ತೀರಾ? ಎಂದು ಗೌಡರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರವಾಗಿ ಗೌಡರು ತಲೆ ಅಲ್ಲಾಡಿಸಿದರು.
ಇನ್ನು ಕಾಲು ನೋವು ಇದೆಯಲ್ಲ? ಎಂಬ ಸಿಎಂ ಬೊಮ್ಮಾಯಿ ಪ್ರಶ್ನೆಗೆ ದೇವೆಗೌಡರು ಹಾ.. ಕಾಲು ನೋವು ಇದೆ. ಹಾಗೆಯೇ ಮಂಡಿ ನೋವು ಕೂಡ ಇದೆ ಎಂದರು.
ದೇವೇಗೌಡರ ನಿವಾಸದಿಂದ ಹೊರಬಂದ ಸಿಎಂ, ಸಚಿವರು
ದೇವೇಗೌಡರ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಸಿಎಂ ಬೊಮ್ಮಾಯಿ ಮತ್ತು ಸಚಿವರ ದಂಡು ಹೆಚ್.ಡಿ.ದೇವೇಗೌಡರ ಆರೋಗ್ಯ ವಿಚಾರಿಸಿದ ಬಳಿಕ, ಅವರ ಮನೆಯಿಂದ ವಾಪಸಾಗಿದ್ದಾರೆ. ಅದಕ್ಕೂ ಮುನ್ನ ಸಿಎಂ ಮತ್ತು ಸಚಿವರು ದೇವೇಗೌಡರ ನಿವಾಸದಲ್ಲಿ ಊಟ ಮಾಡಿದರು. ಸಿಎಂ ಹಾಗೂ ಜೊತೆಗಿದ್ದ ಸಚಿವರ ಪೈಕಿ ಕೆಲವರು ಮುದ್ದೆ ಕೆಲವರು ಪೂರಿ ಭೋಜನ ಸವಿದರು.
ನಿನ್ನೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಮೊನ್ನೆ ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳು ದೇವೇಗೌಡರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ.
Published On - 2:12 pm, Wed, 21 September 22