ಕೆ.ಆರ್ ಪುರಂ ತಹಶೀಲ್ದಾರ್ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯಲಿದೆ ಬಿಬಿಎಂಪಿ
ಸೆ.16 ರಂದು ಮಾಡಿರುವ ಆದೇಶವನ್ನ ವಿಳಂಬವಾಗಿ ಬಿಬಿಎಂಪಿ ಗೆ ಮಾಹಿತಿ ನೀಡಿದ್ದಕ್ಕೆ ಕಾರಣ ಕೇಳಿ ಹಾಗೂ ಸರ್ಕಾರ ಗಮನಹರಿಸುವಂತೆ ಕಂದಾಯ ಇಲಾಖೆಗೆ ಬಿಬಿಎಂಪಿ ಪತ್ರ ಬರೆಯಲಿದೆ...
ಕೆ.ಆರ್ ಪುರಂ ತಹಶೀಲ್ದಾರ್ ವಿರುದ್ಧ ಸರ್ಕಾರಕ್ಕೆ ಬಿಬಿಎಂಪಿ (BBMP) ಪತ್ರ ಬರೆಯಲಿದೆ. ತಹಶೀಲ್ದಾರ್ ವಿಳಂಬ ಧೋರಣೆಯಿಂದ ಒತ್ತುವರಿದಾರರಿಗೆ ಅನುಕೂಲವಾಗಿದೆ. ಸೆ.16 ರಂದು ಮಾಡಿರುವ ಆದೇಶವನ್ನ ವಿಳಂಬವಾಗಿ ಬಿಬಿಎಂಪಿಗೆ ಮಾಹಿತಿ ನೀಡಿದ್ದಕ್ಕೆ ಕಾರಣ ಕೇಳಿ ಹಾಗೂ ಸರ್ಕಾರ ಗಮನಹರಿಸುವಂತೆ ಕಂದಾಯ ಇಲಾಖೆಗೆ ಬಿಬಿಎಂಪಿ ಪತ್ರ ಬರೆಯಲಿದೆ. ಪೂರ್ವ ಪಾರ್ಕ್ರಿಡ್ಜ್ ಒತ್ತುವರಿ ತೆರವುಗೆ ಸಂಬಂಧಿಸಿದಂತೆ ಸಪ್ಟೆಂಬರ್16 ರಂದು ತಹಶೀಲ್ದಾರ್ ಆದೇಶ ಮಾಡಿದ್ದು ಈ ಆದೇಶವನ್ನ ನಿನ್ನೆ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗಿತ್ತು. ಪೂರ್ವ ಪಾರ್ಕ್ ರಿಡ್ಜ್ ಒತ್ತುವರಿ ತೆರವು (Anti encroachment drive) ವಿಳಂಬ ವಿಚಾರದಲ್ಲಿ ಸೆ.16ರಂದೇ ಒತ್ತುವರಿ ತೆರವಿಗೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್ ರೈ ಆದೇಶ ನೀಡಿದ್ದರು. ನಿನ್ನೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಮಗೆ ನೋಟಿಸ್ ಸಿಕ್ಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಸೆಪ್ಟೆಂಬರ್ 16ರಂದು ನೀಡಿರುವ ಆದೇಶ ಪ್ರತಿ ನಿನ್ನೆ ಸಿಕ್ಕಿದೆ. ಈ ಸಂಬಂಧ ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ನಿನ್ನೆ 12 ಗಂಟೆಗೆ ಡಿಸಿ ಸಮ್ಮುಖದಲ್ಲಿ ಆದೇಶ ಪ್ರತಿ ಸಿಕ್ಕಿದೆ. ನಾವು ಹೋಗುವಷ್ಟರಲ್ಲಿ ಒತ್ತುವರಿ ತೆರವಿಗೆ ತಡೆಯಾಜ್ಞೆ ನೀಡಿತ್ತು. ಪೂರ್ವ ಪಾರ್ಕ್ರಿಡ್ಜ್ನವರು ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ ಎಂದು ಹೇಳಿದ್ದಾರೆ.
ಒತ್ತುವರಿ ತೆರವು ಮಾಡಲು ಮೀನಮೇಷ, ವಿಪ್ರೋ ಕಂಪನಿಯಿಂದ ಬಿಬಿಎಂಪಿಗೆ ಒತ್ತಡ ಇದೆಯಾ?
ವಿಪ್ರೋ ಬಳಿ ಒತ್ತುವರಿ ತೆರವು ಮಾಡಲು ಮೀನಮೇಷವೆಣಿಸುತ್ತಿದ್ದು ವಿಪ್ರೋ ಕಂಪನಿಯಿಂದ ಬಿಬಿಎಂಪಿಗೆ ಒತ್ತಡ ಇದೆಯಾ ಎಂಬ ಅನುಮಾನ ಮೂಡಿದೆ. ರಾಜಕಾಲುವೆ ಮೇಲೆ ವಿಪ್ರೋ ತಡೆಗೋಡೆ ನಿರ್ಮಿಸಿದ್ದು 2.4 ಮೀ. ಅಗಲ, 300 ಮೀ ಉದ್ದದಷ್ಟು ಜಾಗ ಒತ್ತುವರಿ ಮಾಡಿದೆ. ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಶೇ.25ರಷ್ಟು ಮಾತ್ರ ತೆರವು ಮಾಡಿದ್ದು ಸಂಪೂರ್ಣ ತೆರವು ಆಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ.