AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ದೇವೇಗೌಡರನ್ನ ಆಹ್ವಾನಿಸದ ವಿಚಾರ: 26 ಗಣ್ಯರಿಗೆ ಸಿಎಂ ಬೊಮ್ಮಾಯಿ ಬರೆದಿರುವ ಪತ್ರಗಳು ಬಿಡುಗಡೆ

26 ಗಣ್ಯರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬರೆದಿರುವ ಪತ್ರಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಪತ್ರದಲ್ಲಿ ದಿನಾಂಕ ನ.10 ಎಂದು ನಮೂದಿಸಲಾಗಿದೆ.

ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ದೇವೇಗೌಡರನ್ನ ಆಹ್ವಾನಿಸದ ವಿಚಾರ: 26 ಗಣ್ಯರಿಗೆ ಸಿಎಂ ಬೊಮ್ಮಾಯಿ ಬರೆದಿರುವ ಪತ್ರಗಳು ಬಿಡುಗಡೆ
ಸಿಎಂ ಬೊಮ್ಮಾಯಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 12, 2022 | 3:18 PM

Share

ಬೆಂಗಳೂರು: ದೇವನಹಳ್ಳಿ ಏರ್​ಪೋರ್ಟ್​ ಬಳಿ ಕೆಂಪೇಗೌಡರ ಪ್ರಗತಿ ಪ್ರತಿಮೆ (Kempegowda statue) ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ (HD Devegowda) ಅವರನ್ನು ಆಹ್ವಾನಿಸಿಲ್ಲ ಎಂದು ಜೆಡಿಎಸ್​ ಆರೋಪಿಸಿತ್ತು. ಸದ್ಯ ಈ ವಿಚಾರಚಾಗಿ 26 ಗಣ್ಯರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬರೆದಿರುವ ಪತ್ರಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಪತ್ರದಲ್ಲಿ ದಿನಾಂಕ ನ.10 ಎಂದು ನಮೂದಿಸಲಾಗಿದೆ. ಆದರೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್​.ಡಿ.ಕುಮಾರಸ್ವಾಮಿ, ಎಂ. ವೀರಪ್ಪ ಮೊಯ್ಲಿ ಸೇರಿದಂತೆ ಕೆಲವರಿಗೆ ಬರೆದ ಪತ್ರದಲ್ಲಿ ದಿನಾಂಕ ನಮೂದಾಗಿಲ್ಲ. ನಿನ್ನೆ ಇದೇ ವಿಚಾರವಾಗಿ ಎಚ್​ಡಿ ದೇವೇಗೌಡ ಅವರನ್ನು ಆಹ್ವಾನಿಸಿಲ್ಲ ಎನ್ನುವ ಜೆಡಿಎಸ್​ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿತ್ತು. ಅಲ್ಲದೇ ದೇವೇಗೌಡರಿಗೆ ಆಹ್ವಾನ ಕೊಟ್ಟಿರುವುದಕ್ಕೆ ಸಾಕ್ಷಿ ಬಿಡುಗಡೆ ಮಾಡಲಾಗಿತ್ತು.

ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಲೆಟರ್ ಹೆಡ್​​ ಮೂಲಕ ಕೆಂಪೇಗೌಡರ ಪ್ರಗತಿ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವಂತೆ ದೇವೇಗೌಡ್ರಿಗೆ ಆಹ್ವಾನ ಕೊಟ್ಟಿದ್ದ ಪತ್ರವನ್ನು ಬಿಡುಗಡೆಗೊಳಿಸಿದೆ. ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ದೇವೇಗೌಡರಿಗೇ ಮೊದಲ ಆಹ್ವಾನ ಪತ್ರ ಹೋಗಿದ್ದು ಮಾತ್ರವಲ್ಲ, ಖುದ್ದು ಬಸವರಾಜ ಬೊಮ್ಮಾಯಿ ಅವರೇ ದೂರವಾಣಿ‌ ಕರೆ ಮಾಡಿ ಆಹ್ವಾನಿಸಿದ್ದಾರೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್ ತನ್ನ ಸಮಯಸಾಧಕ ಬುದ್ಧಿ ಪ್ರದರ್ಶಿಸಿದೆ ಎಂದು ತಿರುಗೇಟು ಕೊಟ್ಟಿದೆ.

ಗಣ್ಯರಿಗೆ ಸಿಎಂ ಬರೆದಿರುವ ಪತ್ರಗಳು

ಇದಷ್ಟೇ ಅಲ್ಲ, ಕನ್ನಡದ ಅಸ್ಮಿತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಈ ಮಣ್ಣಿಗೆ ಸೇವೆ‌ ಸಲ್ಲಿಸಿದ ಸಾಧಕರಾದಿಯಾಗಿ ನಮ್ಮ ರಾಜ್ಯದ ಕಟ್ಟ ಕಡೆಯಲ್ಲಿರುವವರನ್ನೂ ಮರೆಯದೇ, ಹಿಂಬಾಲಿಸಿ ಗುರುತಿಸಿದ್ದು ಬಿಜೆಪಿ. ಕುಟುಂಬವನ್ನೇ ಪಕ್ಷವನ್ನಾಗಿಸಿಕೊಂಡ ಜೆಡಿಎಸ್‌ಗೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬುದು ಯಾವತ್ತಿಗೂ ಬಿಡಿಸಲಾಗದ ಒಗಟು ಎಂದು ಬಿಜೆಪಿ ಟ್ವೀಟ್ ಮೂಲಕ ತಿವಿದಿದೆ.

ಜೆಡಿಎಸ್ ಸರಣಿ ಟ್ವೀಟ್

ಕೆಂಪೇಗೌಡರ ಬಳಿಕ ಬೆಂಗಳೂರು ಅಭಿವೃದ್ಧಿಗೆ ಕೊಡುಗೆ ನೀಡಿದ್ದು ದೇವೇಗೌಡರು. ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗ H.D.ದೇವೇಗೌಡರು. ದೇವೇಗೌಡರನ್ನು ಆಹ್ವಾನಿಸದಿರುವುದು ಕನ್ನಡಿಗರಿಗೆ ಮಾಡಿದ ಅಪಮಾನ. ಪ್ರತಿಮೆ ಕಾಮಗಾರಿಗೆ ದೇವೇಗೌಡರನ್ನು ಆಹ್ವಾನಿಸಿದ್ದ ಬಿಜೆಪಿ ಸರ್ಕಾರವು ಪ್ರತಿಮೆ ಅನಾವರಣ ಸಮಾರಂಭಕ್ಕೆ ಯಾಕೆ ಆಹ್ವಾನ ಮಾಡಲಿಲ್ಲ?ಸ್ಥಳೀಯ ಕಾರ್ಯಕ್ರಮ ಆಗಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ನಾಡಪ್ರಭುಗಳ ಪ್ರತಿಮೆ ಅನಾವರಣಕ್ಕೆ ಪ್ರಧಾನಿಗಳೇ ಬರುತ್ತಾರೆ ಅಂದ್ರೆ ಹೆಮ್ಮೆಯ ಮಾಜಿ ಪ್ರಧಾನಿಯನ್ನೂ ಅಧಿಕೃತವಾಗಿ ಕರೆಯಲೇಬೇಕಿತ್ತು. ಬಿಜೆಪಿಯವರು ರಾಜಕೀಯಕ್ಕಾಗಿ ಮಾಜಿ ಪ್ರಧಾನಿ ಕಡೆಗಣಿಸಿದ್ದಾರೆ. ಇದು ಮಾಜಿ ಪ್ರಧಾನಿಗೆ ಮಾತ್ರವಲ್ಲ, ಕನ್ನಡಿಗರು ಹಾಗೂ ಸ್ವತಃ ನಾಡಪ್ರಭುಗಳಿಗೆ ಮಾಡಿದ ಅಪಮಾನ ಎಂದು ಸರಣಿ ಟ್ವೀಟ್​ ಮೂಲಕ ಜೆಡಿಎಸ್​ ಕಿಡಿಕಾರಿತ್ತು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:06 pm, Sat, 12 November 22