ಬೆಂಗಳೂರು: ಕಳೆದ ಮೂರು ದಿನದಿಂದ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕರೆಯ ಮೇರೆಗೆ ಇಡೀ ಭಾರತದಲ್ಲಿ 40 ಕೋಟಿ, ಕರ್ನಾಟಕದಲ್ಲಿ (Karnataka) 1 ಕೋಟಿ 25 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬೆಂಗಳೂರಿನಲ್ಲಿ (Bengaluru) ಹೇಳಿದ್ದಾರೆ. ಭಾರತದಲ್ಲಿ ಸ್ವಾತಂತ್ರ್ಯದ ಅನೇಕ ಘಟ್ಟಗಳನ್ನು ನಾವು ನೋಡಿದ್ದೇವೆ. ಹಿಂದೆಂದೂ ಕಾಣದ ಉತ್ಸಾಹ, ದೇಶಭಕ್ತಿ ಇಂದು ನಾವು ಕಾಣುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ನಿನ್ನೆ ರಾತ್ರಿ ಎಲ್ಲಾ ಜನರು ಬೀದಿಗೆ ಬಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. 1947 ರಲ್ಲಿ ಸ್ವಾತಂತ್ರ್ಯ ಬಂದಾಗ ಇಡೀ ರಾತ್ರಿ ಜಾಗರಣೆ ಮಾಡಿದ ರೀತಿ ನಿನ್ನೆ ಮಾಡಿದ್ದಾರೆ. ಜನರಲ್ಲಿ ಅಪಾರ ದೇಶಭಕ್ತಿ ನಾವಿಂದು ಕಾಣುತ್ತಿದ್ದೇವೆ. ಮುಂದಿನ 25 ವರ್ಷ ಅಮೃತಕಾಲಕ್ಕೆ ದೇಶವನ್ನು ಕೊಂಡುಯ್ಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ನಮ್ಮೆಲ್ಲರಿಗೂ ಇದು ಸೌಭಾಗ್ಯದ ಸಮಯ. ಇಂತಹ ಸಮಯದಲ್ಲಿ ರಾಜ್ಯವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಅಂತ ಭಾವಿಸಿದ್ದೇನೆ. ಇಂದು ಇಡೀ ಕರ್ನಾಟಕ ಒಗ್ಗೂಡಿದೆ. ರಾಜ್ಯದ ಪ್ರತಿಯೊಬ್ಬರು ಕೈಬೀಸಿ ನಾವು ನಿಮ್ಮ ಜೊತೆ ಇದ್ದೇವೆ ಅಂತ ಹೇಳುತ್ತಿದ್ದಾರೆ. ಇದರಿಂದ ನಮ್ಮ ದೇಶ ಸುರಕ್ಷಿತವಾಗಿದೆ ಎಂಬ ಸಂದೇಶ ಸಿಗುತ್ತಿದೆ. ಕರ್ನಾಟಕದ ಜನತೆಗೆ ಹೃದಯಪೂರ್ವಕ ವಂದನೆ ಹೇಳುತ್ತೇನೆ ಎಂದು ವಂದಿಸಿದರು.
ಯಾವ ಜನ್ಮದ ಪುಣ್ಯವೋ ಭಾರತ ಮಾತೆಯ ಸೇವೆ ಮಾಡುತ್ತಿದ್ದೇವೆ. ಇಂದು ಜಾತಿ ಮತ ಪಂಥ ಮೀರಿ ಇಡೀ ದೇಶ ಸಂಭ್ರಮಿಸಿದೆ. ಸಾರೆ ಜಹಾಸೆ ಅಚ್ಚಾ ಹಿಂದೂಸ್ತಾನ ಹಮರಾ ಇದು ಅಕ್ಷರಶಃ ನಿಜವಾಗಿದೆ. ಭಾರತದ ಭಾಗ್ಯವಿಧಾತ ಭವ್ಯವಾಗಿದೆ ಅಂತ ಹೇಳುತ್ತೇನೆ. ನಮ್ಮ ಧರ್ಮಗ್ರಂಥ ಸಂವಿಧಾನ ಅಂತ ಪ್ರಧಾನಿ ಮೋದಿಯವರು ಹೇಳಿದ್ದಾರೆ. ದೇಶದ ಋಣವನ್ನು ತೀರಿಸುವ ಕೆಲಸ ಮಾಡೋಣ. ಎಲ್ಲರಿಗೂ ಎಲ್ಲಾ ವರ್ಗದ ಜನರಿಗೂ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.
Published On - 8:28 pm, Mon, 15 August 22