ಬೆಂಗಳೂರು, (ನವೆಂಬರ್ 30): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನೂತನ 262 ಹೊಸ ಅಂಬ್ಯುಲೆನ್ಸ್ ಗಳನ್ನು (ambulance) ಲೋಕಾರ್ಪಣೆ ಮಾಡಿದರು. ಇಂದು (ನವೆಂಬರ್ 30) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 262 ಆಧುನಿಕ ಜೀವ ರಕ್ಷಕ ಅಂಬ್ಯುಲೆನ್ಸ್ ಗಳನ್ನು ಜನಸೇವೆಗೆ ಅರ್ಪಿಸಿದರು. 82.02 ಕೋಟಿ ರೂ. ವೆಚ್ಚದಲ್ಲಿ 262 ಆಂಬ್ಯುಲೆನ್ಸ್ ಗಳು ಖರೀದಿಸಲಾಗಿದೆ. 262 ಪೈಕಿ 157 ಅಂಬ್ಯುಲೆನ್ಸ್ಗಳಲ್ಲಿ BLS (ಬೇಸಿಕ್ ಲೈಫ್ ಸಪೋರ್ಟ್) ಹಾಗೂ 105 ಅಂಬ್ಯುಲೆನ್ಸ್ ಅಡ್ವಾನ್ಸ್ ಲೈಫ್ ಸಪೋರ್ಟ್(ALS ) ಸೌಲಭ್ಯವಿದ್ದು, ಹೃದಯ ಮತ್ತು ಉಸಿರಾಟದ ತುರ್ತು ಪರಿಸ್ಥಿಗಳಲ್ಲಿ ಇವು ಸಹಕರಿಯಾಗಿವೆ.
262 ಆಂಬ್ಯುಲೆನ್ಸ್ ಗಳಲ್ಲಿ 157 ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಹಾಗೂ 105 ಎಎಲ್‌ಎಸ್ (ಸುಧಾರಿತ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ) ಇರಲಿವೆ. ಎಎಲ್‌ಎಸ್ ಆಂಬ್ಯುಲೆನ್ಸ್ ಗಳು ವೆಂಟಿಲೇಟರ್ ಹಾಗೂ ಡಿಫ್ರಿಬಿಲೇಟರ್‌ಗಳನ್ನು ಒಳಗೊಂಡಿವೆ. ಹೀಗಾಗಿ ಹೃದಯ ಹಾಗೂ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳಿಗೂ ಯಾವುದೇ ಪ್ರಾಣಾಪಾಯ ಇಲ್ಲದೆ ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುತ್ತದೆ. ಇನ್ನು ಪ್ರತಿ ಆ್ಯಂಬುಲೆನ್ಸ್ ನಲ್ಲಿ ತುರ್ತು ಸೇವೆಗಳನ್ನು ನಿರ್ವಹಿಸಲು ತರಬೇತಿ ಪಡೆದ ಒಬ್ಬ ತುರ್ತು ವೈದ್ಯಕೀಯ ತಂತ್ರಜ್ಞ (ಇಎಂಟಿ-ಶುಶ್ರೂಷಾ ಸಿಬ್ಬಂದಿ) ಮತ್ತು ಒಬ್ಬ ಪೈಲಟ್ (ಚಾಲಕ) ದಿನಕ್ಕೆ ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಇನ್ನು ಆಂಬ್ಯುಲೆನ್ಸ್‌ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಜಯದೇವ ಆಸ್ಪತ್ರೆಯಲ್ಲಿರುವ ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಹಳೆ ಬಟ್ಟೆ-ಕೊಳಕು ಬಟ್ಟೆ ಹಾಕಿಕೊಂಡು ಬರುವ ಬಡವರನ್ನೂ ಮಾನವೀಯವಾಗಿ ನಡೆಸಿಕೊಂಡು ತಾರತಮ್ಯ ಇಲ್ಲದ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದರು.
ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂಥಾಗಬಾರದು ಎನ್ನುವ ಕಾರಣಕ್ಕೇ ತುರ್ತು 108 ಅಂಬ್ಯುಲೆನ್ಸ್ ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ. ರಾಜ್ಯದಲ್ಲಿ 840ಕ್ಕೂ ಹೆಚ್ಚು ಅಂಬ್ಯುಲೆನ್ಸ್ ಗಳ ಅಗತ್ಯವಿದೆ. ಪ್ರತೀ ತಾಲ್ಲೂಕಿನಲ್ಲಿ 4 ಅಂಬ್ಯುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಾ ಪ್ರತೀ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆ ಒದಗಿಸುತ್ತಿವೆ. ಪ್ರಾಥಮಿಕ ತುರ್ತು ಚಿಕಿತ್ಸೆ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
ಪ್ರತೀ ಜಿಲ್ಲೆಯಲ್ಲಿ MRI ಸ್ಕ್ಯಾನಿಂಗ್ ಸೌಲಭ್ಯ ಇರಬೇಕು. ಖಾಸಗಿ ಡಯಾಗ್ನೊಸ್ಟಿಕ್ ಸೆಂಟರ್ ಗಳಲ್ಲಿ ಸೇವಾವೆಚ್ಚ ದುಬಾರಿ ಆಗಿರುವುದರಿಂದ ಬಡವರಿಗೆ ಬಹಳ ಕಷ್ಟ ಆಗುತ್ತಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಾವಿರಾರು ಮಂದಿ ಬೇಡಿಕೆ ಅರ್ಜಿ ಕೊಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವ ವಾತಾವರಣ ರಾಜ್ಯದಲ್ಲಿ ಸೃಷ್ಟಿ ಆಗುತ್ತಿದೆ. ಜಯದೇವ ಆಸ್ಪತ್ರೆಯಿಂದ ಉತ್ತಮಸೇವೆ ಸಾಧ್ಯ ಆಗಿರುವಾಗ ಉಳಿದ ಕಡೆಗಳಲ್ಲೂ ಅದೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ರಾಜ್ಯ ಸರ್ಕಾರ ಆ ದಿಕ್ಕಿನಲ್ಲಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ದೇಶದಲ್ಲಿ ಆರೋಗ್ಯ ಸೇವೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕಾಲೇಜುಗಳನ್ನ ಸ್ಥಾಪಿಸಿ ಹೆಚ್ಚು ವೈದ್ಯರುಗಳನ್ನು ತಯಾರು ಮಾಡುತ್ತಿದ್ದು, ರಾಜ್ಯದಲ್ಲಿ 70 ಮೆಡಿಕಲ್ ಕಾಲೇಜುಗಳಿವೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು ಇದೆ ಎಂದು ಮಾಹಿತಿ ನೀಡಿದರು.
ನಮ್ಮ ದೇಶದ ಇತರೆ ರಾಜ್ಯಗಳು ನಮ್ಮನ್ನು ಫಾಲೋ ಮಾಡುತ್ತಿವೆ. 108 ಆ್ಯಂಬುಲೆನ್ಸ್ಗೆ ಡಿಜಿಟಲೀಕರಣ ಅಳವಡಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ಜೊತೆ ಆ್ಯಂಬುಲೆನ್ಸ್ ಚಾಲಕರು ಹೊಂದಾಣಿಕೆ ಮಾಡಿಕೊಂಡು ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಸೇರಿಸುತ್ತಿದ್ದಾರೆ. ಆರೋಗ್ಯ ಇಲಾಖೆ, ಸಚಿವರು ಇದಕ್ಕೆ ಬ್ರೇಕ್ ಹಾಕಬೇಕು ಎಂದು ಖಡಕ್ ಆಗಿ ಹೇಳಿದರು.
ಖಾಸಗಿ ಆಸ್ಪತ್ರೆಗಿಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಚೆನ್ನಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ ಲಕ್ಷ ಬಿಲ್ ಮಾಡಿದ ಬಳಿ ನಮ್ಮ ಬಳಿ ಬರುತ್ತಾರೆ, ನಾನು ತಿಂಗಳಿಗೆ 20 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಬೇಕು. ಯಾವ ಖಾಸಗಿ ಆಸ್ಪತ್ರೆಗಿಂತ ನಮ್ಮ ಸರ್ಕಾರಿ ಆಸ್ಪತ್ರೆ ಕಡಿಮೆ ಇಲ್ಲ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ