ಅತ್ತಿಬೆಲೆ ಪಟಾಕಿ ಗೋದಾಮು ದುರಂತದಿಂದ ಎಚ್ಚೆತ್ತ ಸರ್ಕಾರ, ಇಂದು ಅಧಿಕಾರಿಗಳ ಜೊತೆ ಸಿಎಂ ಮಹತ್ವ ಸಭೆ!

| Updated By: ರಮೇಶ್ ಬಿ. ಜವಳಗೇರಾ

Updated on: Oct 10, 2023 | 7:23 AM

ಅತ್ತಿಬೆಲೆಯ ಪಟಾಕಿ ಗೋಡೌನಲ್ಲಿ ಕ್ಷಣಮಾತ್ರದಲ್ಲೇ ಹೊತ್ತಿದ್ದ ಬೆಂಕಿ ಇಲ್ಲಿ ಬರೋಬ್ಬರಿ 14 ಜೀವಗಳನ್ನ ಸುಟ್ಟು ಹಾಕಿತ್ತು. ಮಾಲೀಕರ ದನದಾಹ ಬಡಮಕ್ಕಳ ಉಸಿರು ನಿಲ್ಲಿಸಿತ್ತು. ಈ ಕೇಸ್​​​​ನಲ್ಲಿ ತನಿಖೆ ಆರಂಭವಾಗಿದೆ. ಸಿಐಡಿ ಟೀಂ ನಿನ್ನೆ ಫೀಲ್ಡ್‌ಗಿಳಿದು ಪರಿಶೀಲನೆ ನಡೆಸಿತ್ತು. ಮತ್ತೊಂದೆಡೆ ಇಂದು (ಅಕ್ಟೋಬರ್ 10) ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಮೀಟಿಂಗ್​ ಕರೆದಿದ್ದಾರೆ.

ಅತ್ತಿಬೆಲೆ ಪಟಾಕಿ ಗೋದಾಮು ದುರಂತದಿಂದ ಎಚ್ಚೆತ್ತ ಸರ್ಕಾರ, ಇಂದು ಅಧಿಕಾರಿಗಳ ಜೊತೆ ಸಿಎಂ ಮಹತ್ವ ಸಭೆ!
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, (ಅಕ್ಟೋಬರ್ 10): ಕಳೆದ ಶನಿವಾರ ಅತ್ತಿಬೆಲೆಯಲ್ಲಿ ಘೋರವೇ (Attibele firecracker incident) ನಡೆದಿತ್ತು. ಸಂಜೆ 3.30 ಸಮಯದಲ್ಲಿ ನೋಡ ನೋಡುತ್ತಿದ್ದಂತೆಯೇ ಪಟಾಕಿ ಗೋಡೌನ್‌ ಬೆಂಕಿ ಜ್ವಾಲೆಯಲ್ಲಿ ಧಗಧಗಿಸಿತ್ತು. ಬರೋಬ್ಬರಿ 14 ಕಾರ್ಮಿಕರು ಮೃತಪಟ್ಟಿರೋ ಇದೇ ಪ್ರಕರಣವನ್ನ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಇತ್ತ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಹತ್ವದ ಸಭೆ ಕರೆದಿದ್ದಾರೆ. ಇಂದು (ಅಕ್ಟೋಬರ್ 10) ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಿಗದಿಯಾಗಿದೆ. ಅಗತ್ಯ ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದ್ದು, ಪಟಾಕಿ ದುರಂತದ ಬಗ್ಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಇತ್ತ ತಡವಾಗಿಯಾದ್ರೂ ಎಚ್ಚೆತ್ತುಕೊಂಡಿರೋ ಅತ್ತಿಬೆಲೆ ಪುರಸಭೆ ಅಧಿಕಾರಿಗಳು ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ರು. ಶಾಪ್‌ನ ಲೈಸನ್ಸ್‌, ಪಟಾಕಿಗಳ ಗುಣಮಟ್ಟ ಪರಿಶೀಲನೆ ನಡೆಸಿದ್ರು. ಗ್ರೀನ್‌ ಪಟಾಕಿ ಇಟ್ಟಿದ್ದಾರಾ? ಮತ್ಯಾವ ಪಟಾಕಿ ಮಾರಾಟ ಮಾಡುತ್ತಿದ್ದಾರೆ ಎಂದು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ಅಗ್ನಿ ದುರಂತ ಪ್ರಕರಣ ಸಿಐಡಿಗೆ, ಮೃತ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಸಿಐಡಿ ತನಿಖೆ ಆರಂಭ

ಇನ್ನೂ ಸಿಐಡಿ ಐಜಿಪಿ ಮಧುಕರ್​ ಪವಾರ್ ನೇತೃತ್ವದ ತಂಡ ನಿನ್ನೆ(ಅ.09) ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ಮತ್ತೊಂದೆಡೆ ಐದಾರು ಜೆಸಿಬಿಗಳನ್ನ ಬಳಸಿಕೊಂಡು ಗೋದಾಮನ್ನ ನೆಲಸಮಗೊಳಿಸಲಾಗಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಅವಘಡ ಆಯ್ತಾ ಅನ್ನೋ ಬಗ್ಗೆಯೂ ತನಿಖೆಯಾಗುತ್ತಿದ್ದು, ಈ ಬಗ್ಗೆ ವಿದ್ಯುತ್ ಪರಿವೀಕ್ಷಣಾ ಅಧಿಕಾರಿಗಳ ತಂಡ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಅವಘಡ ಆಗುತ್ತಿದ್ದಂತೆಯೇ ಪಟಾಕಿ ಮಾಲೀಕರ ಕಳ್ಳಾಟ

ಇನ್ನು ಈ ಘೋರದ ಬಳಿಕ ಅನಧಿಕೃತ ಪಟಾಕಿ ಮಾರಾಟಗಾರರು ಕಳ್ಳಾಟ ಶುರುಮಾಡಿದ್ದಾರೆ. ಹೊಸೂರು ರಸ್ತೆಯಲ್ಲಿ ಹೆಜ್ಜೆಗೊಂದರಂತೆ ಪಟಾಕಿ ಅಂಗಡಿಗಳಿವೆ. ಆದ್ರೆ 14 ಮಂದಿ ಮೃತಪಡುತ್ತಿದ್ದಂತೆಯೇ ಅಂಗಡಿ ಮುಂದೆ ಹಾಕಿದ್ದ ಬೋರ್ಡ್‌ ತೆರವುಗೊಳಿಸಿದ್ದಾರೆ. ಅಂಗಡಿ ಕ್ಲೋಸ್‌ ಮಾಡಿ, ರಾತ್ರೋರಾತ್ರಿ ಪಟಾಕಿಯನ್ನ ಸ್ಥಳಾಂತರ ಮಾಡಿದ್ದಾರೆ.

ದೀಪಾವಳಿಗೂ ಮುನ್ನವೇ ಒಂದರ ಹಿಂದೆ ಒಂದರಂತೆ ಪಟಾಕಿ ದುರಂತಗಳು ಆಗುತ್ತಿದ್ದು, ಸರ್ಕಾರ ಈಗಿನಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇನ್ನು ಸಿಎಂ ಇಂದಿನ ಸಭೆಯಲ್ಲಿ ಏನೆಲ್ಲ ಸೂಚನೆಗಳನ್ನು ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ