AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹೆಚ್ಚಾಯ್ತು ಚಳಿ: ಮುಂದಿನ ಐದು ದಿನ ಸಿಲಿಕಾನ್ ಸಿಟಿ ಗಡಗಡ

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಚಳಿಯ ಅಬ್ಬರ ಹೆಚ್ಚಾಗುತ್ತಿದೆ. ಮೈ ನಡುಗಿಸುವ ಚಳಿ ಮಧ್ಯೆ ಬೆಳಗ್ಗೆ, ಸಂಜೆ ವೇಳೆ ಇಬ್ಬನಿ ಕವಿದ ವಾತಾವರಣ ಇರುತ್ತಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ಉಷ್ಣಾಂಶ ಇನ್ನೂ ಕುಸಿತವಾಗಲಿದ್ದು, ಮುಂದಿನ ಐದು ದಿನಗಳ ಕಾಲ ಮತ್ತಷ್ಟು ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವಾರದ ಮುನ್ಸೂಚನೆ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಹೆಚ್ಚಾಯ್ತು ಚಳಿ: ಮುಂದಿನ ಐದು ದಿನ ಸಿಲಿಕಾನ್ ಸಿಟಿ ಗಡಗಡ
ಸಾಂದರ್ಭಿಕ ಚಿತ್ರ
ಶಾಂತಮೂರ್ತಿ
| Edited By: |

Updated on: Jan 06, 2025 | 11:07 AM

Share

ಬೆಂಗಳೂರು, ಜನವರಿ 6: ಹೊಸ ವರ್ಷದ ಆರಭದಲ್ಲೇ ಬೆಂಗಳೂರು ಜನರಿಗೆ ಚುಮು ಚಳಿಯ ಅನುಭವ ಹೆಚ್ಚಾಗುತ್ತಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಮೈನಡುಗಿಸುವ ಚಳಿ ಅನುಭವಕ್ಕೆ ಬರುತ್ತಿದೆ. ದಪ್ಪನೆಯ ಬೆಡ್ ಶೀಟ್ ಹೊದ್ದು ಮನೆಯಲ್ಲೇ ಮಲಗಿದರೆ ಸಾಕು ಎಂದು ಮನಸಿಗೆ ಅನಿಸವಂತೆ ಮಾಡುವಷ್ಟರ ಮಟ್ಟಿಗೆ ಚಳಿಯ ವಾತಾವರಣ ರಾಜಧಾನಿಯಲ್ಲಿ ಕಂಡು ಬರುತ್ತಿದೆ. ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಚಳಿ, ಇಬ್ಬನಿ ಪ್ರಮಾಣ ಏರಿಕೆ ಕಂಡಿದೆ.

ಉತ್ತರ ಭಾರತದಿಂದ ಬೀಸುತ್ತಿರುವ ಶೀತಗಾಳಿ ಪ್ರಭಾವದಿಂದ ನಗರದಲ್ಲಿ ತಾಪಮಾನ ಮತ್ತಷ್ಟು ತಗ್ಗುವ ಮುನ್ಸೂಚನೆ ಇದದ್ದು, ಜನವರಿ ತಿಂಗಳ ಸರಾಸರಿ ಕನಿಷ್ಠ ತಾಪಮಾನವ 15.8 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನಷ್ಟು ಕುಸಿಯಲಿದೆ ಕನಿಷ್ಠ ತಾಪಮಾನ

ಮುಂದಿನ ವಾರ ಕನಿಷ್ಠ ತಾಪಮಾನ 10 ರಿಂದ 12 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗುವ ಮುನ್ಸೂಚನೆ ಕೂಡ ಇರುವುದರಿಂದ ಬೆಂಗಳೂರಿನಲ್ಲಿ ಚಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿಗಾಲ ತುಸು ಹೆಚ್ಚಿರಲಿದ್ದು, ಮಳೆ ಜಾಸ್ತಿ ಬಿದ್ದ ಕಾರಣ ಕೆರೆ, ನದಿ, ಅಣೆಕಟ್ಟುಗಳು ತುಂಬಿರುವುದು ಕೂಡ ವಾತಾವರಣದ ಚಳಿ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತಿದೆ.

ಚಳಿಯ ಜೊತೆಗೆ ಇಬ್ಬನಿ ಕೂಡ ಹೆಚ್ಚಾಗುವ ನಿರೀಕ್ಷೆ ಇದ್ದು, ಬೆಂಗಳೂರು ನಗರವಾಸಿಗಳು ಆರೋಗ್ಯದ ಬಗ್ಗೆ ಕೂಡ ಕಾಳಜಿವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಚಳಿ ಹೆಚ್ಚಿರುವಾಗ ದಪ್ಪನೆಯ ಹೊದಿಕೆ, ಸ್ವೆಟರ್ ಧರಿಸುವುದು ಉತ್ತಮ. ಈಗಿನ ವಾತಾವರಣದಲ್ಲಿ ನೆಗಡಿ, ಕೆಮ್ಮಿನಂತಹ ಲಕ್ಷಣ ಹೆಚ್ಚಾಗುವುದರಿಂದ ತಂಪಿನ ಆಹಾರ ಪದಾರ್ಥಗಳ ಬದಲು ಬಿಸಿ ಬಿಸಿ ಆಹಾರ ಸೇವಿಸಬೇಕು. ಜೊತೆಗೆ ಮಕ್ಕಳು, ವಯೋವೃದ್ಧರು ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ವೈದ್ಯ ಡಾ.ಸುನೀಲ್ ಕುಮಾರ್ ಸಲಹೆ ನೀಡಿದ್ದಾರೆ.

ಬೆಂಗಳೂರು ತಾಪಮಾನ: ವಾರದ ಮುನ್ಸೂಚನೆ ಇಲ್ಲಿದೆ

ಜನವರಿ 6ರ ಸೋಮವಾರ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ಇರಲಿದೆ. ಜನವರಿ 7ರ ಮಂಗಳವಾರ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಜನವರಿ 8ರ ಬುಧವಾರ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗುರುವಾರ ಹಾಗೂ ಶುಕ್ರವಾರಗಳಂದು ಸಹ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳು ಕ್ರಮವಾಗಿ 29 ಹಾಗೂ 18 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಐಎಂಡಿ ಮುನ್ಸೂಚನೆ ತಿಳಿಸಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲು, ಕರ್ನಾಟಕದಾದ್ಯಂತ ಚಳಿ ಚಳಿ

ಒಟ್ಟಿನಲ್ಲಿ ಜನವರಿ ಆರಂಭದಲ್ಲೇ ಚಳಿಯ ಅಬ್ಬರ ಜೋರಾಗುತ್ತಿದ್ದು, ಮುಂದಿನ ಮೂರ್ನಾಲ್ಕು ದಿನ ನಗರದಲ್ಲಿ ಕನಿಷ್ಠ ತಾಪಮಾನವ 10 ರಿಂದ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ