ಹುಲಿ ಉಗುರು ಲಾಕೆಟ್: ಜಗ್ಗೇಶ್​ ವಿರುದ್ಧ ದೂರು ದಾಖಲು, ಅರಣ್ಯಾಧಿಕಾರಿ ಹೇಳಿದ್ದೇನು?

| Updated By: Digi Tech Desk

Updated on: Oct 26, 2023 | 12:37 PM

ಕಳೆದ ಒಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ ಅವರು ಹುಲಿ ಉಗುರು ಧರಿಸಿರುವ ವಿಡಿಯೋ ವೈರಲ್​ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್​ ವಿರುದ್ಧ ಮಾಜಿ ಎಂಎಲ್​ಸಿ ಪಿ.ಆರ್ ರಮೇಶ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ.

ಹುಲಿ ಉಗುರು ಲಾಕೆಟ್: ಜಗ್ಗೇಶ್​ ವಿರುದ್ಧ ದೂರು ದಾಖಲು, ಅರಣ್ಯಾಧಿಕಾರಿ ಹೇಳಿದ್ದೇನು?
ನಟ ಜಗ್ಗೇಶ್​
Image Credit source: Zee5
Follow us on

ಬೆಂಗಳೂರು ಅ.25: ಕಳೆದ ಒಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ (BJP) ರಾಜ್ಯಸಭಾ ಸದಸ್ಯ, ನಟ ಜಗ್ಗೇಶ (Jaggesh) ಅವರು ಹುಲಿ ಉಗುರು (Tiger Claw) ಲಾಕೆಟ್​​​​ ಧರಿಸಿರುವ ವಿಡಿಯೋ ವೈರಲ್​ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್​ ವಿರುದ್ಧ ಕಾಂಗ್ರೆಸ್​ನ ಮಾಜಿ ಎಂಎಲ್​ಸಿ ಪಿ.ಆರ್ ರಮೇಶ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ. ನಟ ಜಗ್ಗೇಶ್ ಹುಲಿ ಉಗುರು ಧರಿಸಿರುವ ಮತ್ತು ಇದು ಒರಿಜಿನಲ್​ ಅಂತ ಅವರೇ ಹೇಳಿಕೊಂಡಿರುವ ವೀಡಿಯೋವನ್ನು ಹಲವಾರು ಜನ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಕಳುಹಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದಿದ್ದಾರೆ. ಇದರಿಂದ ಸಂಸದ ಜಗ್ಗೇಶ್​ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಜಗ್ಗೇಶ್ ಪ್ರಕರಣವನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ

ಈ ಬಗ್ಗೆ ವನ್ಯಜೀವಿ ಅರಣ್ಯಾಧಿಕಾರಿ ರವೀಂದ್ರ ಕುಮಾರ್ ಮಾತನಾಡಿ ನಟ ಜಗ್ಗೇಶ್ ನಾನು ಧರಿಸಿದ್ದು ಒರಿಜಿನಲ್ ಹುಲಿ ಉಗುರು ಅಂತ ವಿಡಿಯೋದಲ್ಲಿ ಹೇಳಿದ್ದಾರೆ. ಜಗ್ಗೇಶ್ ಪ್ರಕರಣವನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಸಂತೋಷ್ ಬಳಿಕ ಬೇರೆಯವರ ವಿರುದ್ಧವೂ ಕ್ರಮಕ್ಕೆ ದೂರು ಬರುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ದೂರು ನೀಡಿದರೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಅರಣ್ಯಾಧಿಕಾರಿ ಖಡಕ್ ಮಾತು: ಹುಲಿ ಉಗುರು ಲಾಕೆಟ್​ ಧರಿಸಿದವರಿಗೆ ಶುರುವಾಯ್ತು ಸಂಕಷ್ಟ!

ಸಾಮಾಜಿಕ ಜಾಲತಾಣದಲ್ಲಿ ನಮಗೆ ಅನೇಕ ಸಂದೇಶಗಳು ಬರುತ್ತಿವೆ. ನಟ ದರ್ಶನ್ ವಿರುದ್ಧ ಕೂಡ ದೂರು ಬಂದಿದೆ. ಆದರೆ ಇದೆಲ್ಲಾ ನೈಜತೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಹುಲಿ ಉಗುರಿನ ನೈಜತೆ ಬಗ್ಗೆ ದೃಢೀಕರಿಸಿಕೊಳ್ಳಬೇಕಿದೆ. ಹಸುವಿನ ಕೊಂಬನ್ನು ಹುಲಿ ಉಗುರು ಅಂತ ಮಾರಾಟ ಮಾಡಲಾಗುತ್ತೆ. ಹೀಗಾಗಿ ಉಗುರಿನ ನೈಜತೆ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.

ವರ್ತೂರು ಸಂತೋಷ್​ ಅವರನ್ನು ಏಕಾಏಕಿ ದಸ್ತಗಿರಿ ಮಾಡಲಿಲ್ಲ. ಲಾಕೆಟ್​ ತಪಾಸಣೆ ಬಳಿಕ ನೈಜತೆ ಗೊತ್ತಾದಮೇಲೆ ಬಂಧಿಸಲಾಗಿದೆ. ನೈಜತೆ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಹುಲಿ ಉಗುರು ಧರಿಸಿದ್ದ ವಿಚಾರದಲ್ಲಿ ಕ್ರಮ ಕೈಗೊಳ್ಳುವ ಅವಕಾಶ ಇದೆ. ನಟ ದರ್ಶನ ಹಾಗೂ ಜಗ್ಗೇಶ್​ಗೆ ನೋಟಿಸ್ ನೀಡುವ ಅವಕಾಶ ಇದೆ ಎಂದು ತಿಳಿಸಿದರು.

ಪ್ರಧಾನಿ ಮೋದಿಗೂ ನಾವು ಮನವಿ ನೀಡುತ್ತೇವೆ

ಹುಲಿ ಉಗುರನ್ನ ಬಳಸುತ್ತಿರುವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜನತಾ ಪಕ್ಷದ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್ ಮುಖ್ಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಾಡು ಪ್ರಾಣಿಯ ಚರ್ಮ, ಉಗುರು ಯಾರೇ ಬಳಸುತ್ತಿದ್ದರು ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಬಿಜೆಪಿ ರಾಜ್ಯ‌ಸಬಾ ಸದಸ್ಯ ಜಗ್ಗೇಶ್ ಅವರೇ ಹುಲಿ ಉಗುರು ಬಳಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸರ್ಕಾರ ಕೇವಲ ಬಡವರ ಮೇಲೆ ಮಾತ್ರ ಕ್ರಮ ಕೈಗೊಳ್ಳುತ್ತಿದೆ. ಈ ಹಿಂದೆ ಮಂತ್ರಿಯ ಮನೆಯಲ್ಲಿ ಕಾಡು ಪ್ರಾಣಿ ಪತ್ತೆಯಾಗಿತ್ತು. ಏನು ಕ್ರಮ ಕೈಗೊಂಡಿದ್ದಾರೆ. ವನ್ಯ ಜೀವಿ ಸಂರಕ್ಷಣಾ ಮಂಡಳಿಯ ಅಧ್ಯಕ್ಷರಾಗಿರುವ ಪ್ರಧಾನಿ ಮೋದಿ ಅವರಿಗೂ ನಾವು ಮನವಿ ನೀಡುತ್ತೇವೆ. ಅರಣ್ಯ ಸಚಿವರಿಗೂ‌ ನಾವು ಮನವಿ ಕೊಡುತ್ತೇವೆ. ಹುಲಿ ಉಗುರು ಎಲ್ಲಾ ರಾಜಕಾರಣಿಗಳ ಬಳಿ ಇದೆ. ಹುಲಿ ಉಗುರು ಬಳಸಿದರೇ ರಾಜನಂತೆ ಮೆರೆಯಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದೇ ಕಾರಣಕ್ಕೆ ರಾಜಕಾರಣಿಗಳು ಹುಲಿ ಉಗುರು ಬಳಸುತ್ತಾರೆ. ಎಲ್ಲರ ಮೇಲೆ  ಕ್ರಮ ಜರುಗುಸಿಬೇಕು ಎಂದು ನಾಗೇಶ್ ಎನ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:26 am, Wed, 25 October 23