ಬೆಂಗಳೂರು: ಕೆಂಪುಕೋಟೆ ಮೇಲೆ ಕೇಸರಿಧ್ವಜ ಹಾರಿಸುತ್ತೇವೆ ಎಂದಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ‘ಶೇಮ್ ಶೇಮ್, ದೇಶದ್ರೋಹಿಗಳು’ ಎಂದು ಘೋಷಣೆಗಳನ್ನು ಕೂಗಿದರು. ಇಂಥ ಭಾಷಣ ಮಾಡಿದ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕಿತ್ತು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ಕೆಂಪುಕೋಟೆ ಮೇಲೆ ಧರಣಿ ನಿರತ ರೈತರು ಖಲಿಸ್ತಾನ ಧ್ವಜ ಹಾರಿಸಿದ ಬಗ್ಗೆಯೂ ಸಿದ್ದರಾಮಯ್ಯ ಪ್ರಸ್ತಾಪಿಸಿದಾಗ ಆಡಳಿತ ಪಕ್ಷದವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ರಾಷ್ಟ್ರಧ್ವಜಕ್ಕೆ ಗೌರವ ಕೊಡದವರು ಸಚಿವರಾಗಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ ಶಾಸಕ ಸಿ.ಟಿ.ರವಿ ಮಧ್ಯಪ್ರವೇಶಿಸಿ ಮಾತು ಆರಂಭಿಸಿದರು. ರಾಷ್ಟ್ರಧ್ವಜ ಹಿಡಿದು ಹೋದವರನ್ನು ಕಾಂಗ್ರೆಸ್ ಅವಧಿಯಲ್ಲಿ ಗುಂಡು ಹಾರಿಸಿ ಕೊಂದರು. ಬೆಂಕಿ ಹಚ್ಚಲು ಕಾಯ್ತಾ ಇರ್ತೀರಿ ಎಂದು ಶಾಸಕ ಸಿ.ಟಿ.ರವಿ ಹೇಳಿದಾಗ ಶಾಸಕ ಕೃಷ್ಣ ಭೈರೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಬೆಂಕಿ ಹಚ್ಚೋದು ನೀವಣ್ಣಾ, ಇಡೀ ರಾಜ್ಯಕ್ಕೆ ಬೆಂಕಿ ಹಚ್ಚಿದ್ದೀರಿ ಎಂದು ವ್ಯಂಗ್ಯವಾಡಿದರು.
ವಿಧಾನಸಭೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಆರಗ ಜ್ಞಾನೇಂದ್ರ, ‘ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂಬ ಹೇಳಿಕೆ ಸುಳ್ಳು’ ಎಂದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ನೀವು ಬೇಕಿದ್ರೆ ಡಿಕೆಶಿ ಮೇಲೆ ಪ್ರಕರಣ ದಾಖಲಿಸಿ ಎಂದು ಸವಾಲು ಹಾಕಿದರು. ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀಡಿರುವ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ಕುರಿತು ನಿಯಮ 60ರ ಅಡಿ ನಿಲುವಳಿ ಸೂಚನೆ ಮಂಡನೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ನಿಲುವಳಿ ಸೂಚನೆಯ ಪ್ರಾಥಮಿಕ ಪ್ರಸ್ತಾಪ ಮಂಡನೆಯ ಬಗ್ಗೆ ಅವರು ಪ್ರಸ್ತಾಪ ಮಂಡಿಸಿದರು.
ನಗರದ ವಿವಿಧ ದೇವಸ್ಥಾನಗಳ ಘಂಟಾನಾದದಿಂದ ಶಬ್ದ ಮಾಲಿನ್ಯವಾಗುತ್ತಿದೆ ಎಂದು ನೊಟೀಸ್ ಕೊಟ್ಟಿರುವ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮತ್ತು ಬಸವನಗುಡಿ ಶಾಸಕ ರವಿಸುಬ್ರಮಣ್ಯ ಯಾರಿಗೆ ಕೆಟ್ಟ ಹೆಸರು ತರಲು ನೋಟೀಸ್ ನೀಡಿದ್ದಾರೆ ಎಂದು ಹರಿಹಾಯ್ದರು. ಏನಾಗಿದೆ ಎನ್ನುವ ಬಗ್ಗೆ ಸ್ಪಷ್ಟೀಕರಣ ಕೊಡಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ದೇವಸ್ಥಾನಗಳಿಗೆ ಕೊಟ್ಟಿರುವ ನೊಟೀಸ್ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಂದಿತ್ತು. ವಿರೋಧ ವ್ಯಕ್ತವಾದ ಕಾರಣ ನೊಟೀಸ್ ಹಿಂಪಡೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಲಾಭ-ನಷ್ಟಗಳ ಕುರಿತು ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಪ್ರಶ್ನೆ ಮಾಡಿದರು. ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳು ಮೂರು ವರ್ಷಗಳಿಂದ ನಷ್ಟದಲ್ಲಿವೆ. ಈವರೆಗಿನ ನಷ್ಟದ ಮೌಲ್ಯ ₹ 2945.23 ಕೋಟಿ ಎಂದು ಸಾರಿಗೆ ಸಚಿವರ ಪರವಾಗಿ ಸಚಿವ ಕಾರಜೋಳ ಉತ್ತರ ನೀಡಿದರು. 2018-19ರಲ್ಲಿ ₹ 641.72 ಕೋಟಿ, 2019-20ರಲ್ಲಿ ₹ 982.63 ಕೋಟಿ ಹಾಗೂ 2020-21ರಲ್ಲಿ ₹ 1320.88 ಕೋಟಿ ನಷ್ಟ ಅನುಭವಿಸಿದೆ. ಬಿಎಂಟಿಸಿ 2018-19ರಲ್ಲಿ ₹ 349.49 ಕೋಟಿ, 2019-20ರಲ್ಲಿ ₹ 549.34, 2020-21ರಲ್ಲಿ ₹ 164.20 ಕೋಟಿ ನಷ್ಟವಾಗಿದೆ ಎಂದು ಹೇಳಿದರು. ಸಾರಿಗೆ ಇಲಾಖೆಯಲ್ಲಿ ಹಣವಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಸಹಾಯದಿಂದ ಮಾತ್ರ ವಿದ್ಯುತ್ ಬಸ್ ಖರೀದಿಸುತ್ತಿದ್ದೇವೆ. ಪ್ರಸ್ತುತ ನಿಗಮದ ಆರ್ಥಿಕ ಸ್ಥಿತಿಗತಿ ಸರಿ ಇಲ್ಲದ ಕಾರಣ ನಿಗಮದ ಆಂತರಿಕ ಸಂಪನ್ಮೂಲದಿಂದ ವಿದ್ಯುತ್ ವಾಹನಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು.
ಗಾಣಿಗ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸುವ ಕುರಿತು ವಿಧಾನಸಭೆಯಲ್ಲಿ ಶಾಸಕ ಆನಂದ ನ್ಯಾಮಗೌಡ ಪ್ರಶ್ನೆ ಕೇಳಿದರು. ಸಮುದಾಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆ ಇದೆ. ನಿಗಮ ಅಥವಾ ಮಂಡಳಿ ರಚಿಸಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದರು. ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ, ಹಿಂದುಳಿದ ಸಮುದಾಯಗಳಿಗೆಂದು 12 ನಿಗಮ ಮಂಡಳಿ ಇದೆ. ಜೊತೆಗೆ ದೇವರಾಜ ಅರಸು ನಿಗಮ ಇದೆ. ಇವುಗಳ ಮೂಲಕ ವಿವಿಧ ಜಾತಿಗಳ ಅಭಿವೃದ್ಧಿಗಾಗಿ ನಿಯಮಿತವಾಗಿ ಅನುದಾನಗಳು ಬಿಡುಗಡೆ ಆಗುತ್ತಿವೆ. ಹೀಗಾಗಿ ಹೊಸ ನಿಗಮ ಮಂಡಳಿ ರಚಿಸುವ ಉದ್ದೇಶ ಇಲ್ಲ ಎಂದರು.
ಸಮವಸ್ತ್ರ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಾ.ಅಶ್ವತ್ಥ ನಾರಾಯಣ ನೀಡಿದ್ದ ಹೇಳಿಕೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ಕೋರಿದರು. ಸಚಿವರು ಪದವಿ ಕಾಲೇಜುಗಳಿಗೆ ಸಮವಸ್ತ್ರ ಕಡ್ಡಾಯ ಅಲ್ಲ ಎಂದು ನಿನ್ನೆ ಚಾಮರಾಜನಗರದಲ್ಲಿ ಹೇಳಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟೀಕರಣ ನೀಡಬೇಕು ಎಂದು ಮನವಿ ಮಾಡಿದರು. ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲಿಸುತ್ತೇವೆ ಎಂದು ಮುಖ್ಯಮಂತ್ರಿ ಉತ್ತರಿಸಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೇಕೆದಾಟು: ಪರಸ್ಪರರ ಕಾಲೆಳೆದ ಬಿಜೆಪಿ ಕಾಂಗ್ರೆಸ್ ಶಾಸಕರು