ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಬೇಕು; ಸಂಪುಟದಿಂದ ಕೈಬಿಡಬೇಕು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆಗ್ರಹ

| Updated By: ganapathi bhat

Updated on: Feb 16, 2022 | 5:38 PM

ಮನುಸ್ಮೃತಿ ಬಂದ್ರೆ ಈಶ್ವರಪ್ಪ ಮಂತ್ರಿಸ್ಥಾನ ಬಿಟ್ಟು ಕುರಿ ಕಾಯಬೇಕು. ಇದು ಸಚಿವ ಈಶ್ವರಪ್ಪನವರಿಗೆ ಗೊತ್ತಿಲ್ಲ ಎನಿಸುತ್ತೆ. ಈಶ್ವರಪ್ಪ ವಿರುದ್ಧ ಕ್ರಮ ಆಗುವವರೆಗೂ ಹೋರಾಟ ಮಾಡ್ತೇವೆ. ಸದನದ ಒಳಗೂ ಹೊರಗೂ ನಾವು ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಬೇಕು; ಸಂಪುಟದಿಂದ ಕೈಬಿಡಬೇಕು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆಗ್ರಹ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸ್ತೇನೆ ಎಂದು ಈಶ್ವರಪ್ಪ ಉಡಾಫೆಯಾಗಿ ಹೇಳುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ ಇರಲಿ ಬಿಜೆಪಿ ಇರಲಿ ಯಾರೂ ಕೂಡ ಇದನ್ನ ಖಂಡಿಸಿಲ್ಲ. ಸಚಿವರಾಗಿ ಧ್ವಜಕ್ಕೆ ಅಗೌರವ ತರುವುದು ಅಕ್ಷಮ್ಯ ಅಪರಾಧ. ಮಂತ್ರಿಗಳು ಸಂವಿಧಾನದ ಮೇಲೆ ಪ್ರಮಾಣವನ್ನು ಮಾಡಿರ್ತಾರೆ. ಸಚಿವ ಈಶ್ವರಪ್ಪನವರಿಗೆ ನಡವಳಿಕೆ, ರಾಜಕೀಯ ಭಾಷೆ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಅವರ ತಂದೆ ಬಗ್ಗೆ ಈಶ್ವರಪ್ಪ ಮಾತಾಡಿದ್ದಾರೆ. ಡಿಕೆಶಿ ಬಗ್ಗೆ ಮಾತಾಡಲಿ ಅವರ ತಂದೆ ಬಗ್ಗೆ ಮಾತಾಡಿದ್ದು ಖಂಡನೀಯ. ಯಾರ ವೈಯಕ್ತಿಕವಾಗಿಯೂ ಯಾರೂ ಕೂಡ ಮಾತಾಡಬಾರದು​ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರಧ್ವಜಕ್ಕೆ ತುಂಬಾ ಹಳೆಯ ಇತಿಹಾಸವಿದೆ. ಧ್ವಜ, ರಾಷ್ಟ್ರಗೀತೆಗೆ ಅಪಮಾನ ಮಾಡಿದ್ರೆ ಕ್ರಮಜರುಗಿಸಬೇಕು. ರೈತರು ಕೆಂಪುಕೋಟೆ ಕೆಳಗೆ ಬಾವುಟ ಹಾರಿಸಿದ್ದಕ್ಕೆ ಕ್ರಮಕೈಗೊಂಡ್ರಿ. ಆದರೆ ಸಚಿವ ಈಶ್ವರಪ್ಪ ಮೇಲೆ ಯಾಕೆ ಕ್ರಮತೆಗದುಕೊಂಡಿಲ್ಲ? ಆರ್​ಎಸ್​ಎಸ್​ನವರ ಜೀತದಾಳಾಗಿದ್ದಾರೆ, ಗುಲಾಮರಾಗಿದ್ದಾರೆ. ಬಿಜೆಪಿಯವರು ದೇಶಭಕ್ತಿ ಕುರಿತು ಬಹಳ ಮಾತನಾಡುತ್ತಾರೆ. ಇವರು ಸಂವಿಧಾನ, ರಾಷ್ಟ್ರಧ್ವಜ ಹೋಗಿ ಮನುಸ್ಮೃತಿ ಬರಬೇಕು. ಬಹುಶಃ ಈಶ್ವರಪ್ಪನವರ ಬಾಯಲ್ಲಿ ಅವರೇ ಹೇಳಿಸಿರಬೇಕು. ಮನುಸ್ಮೃತಿ ಬಂದ್ರೆ ಈಶ್ವರಪ್ಪ ಮಂತ್ರಿಸ್ಥಾನ ಬಿಟ್ಟು ಕುರಿ ಕಾಯಬೇಕು. ಇದು ಸಚಿವ ಈಶ್ವರಪ್ಪನವರಿಗೆ ಗೊತ್ತಿಲ್ಲ ಎನಿಸುತ್ತೆ. ಈಶ್ವರಪ್ಪ ವಿರುದ್ಧ ಕ್ರಮ ಆಗುವವರೆಗೂ ಹೋರಾಟ ಮಾಡ್ತೇವೆ. ಸದನದ ಒಳಗೂ ಹೊರಗೂ ನಾವು ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಬೇಕು. ಈಶ್ವರಪ್ಪ ವಿರುದ್ಧ ರಾಜ್ಯಪಾಲರು, ಸಿಎಂ ಕ್ರಮಕೈಗೊಳ್ಳಬೇಕು. ಸದನದ ಒಳಗೆ, ಹೊರಗೆ ನಾವು ಹೋರಾಟ ಮುಂದುವರಿಸ್ತೇವೆ. ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಕೊಲೆ ಮಾಡಿ ತಪ್ಪಾಯಿತು ಅಂದರೆ ಬಿಟ್ಟು ಬಿಡೋಕಾಗುತ್ತಾ? ಕೆ.ಎಸ್. ಈಶ್ವರಪ್ಪರನ್ನು ಸಂಪುಟದಿಂದ ಕೂಡಲೇ ಕೈಬಿಡಬೇಕು. ಈಶ್ವರಪ್ಪ ವಿರುದ್ಧ ಕ್ರಮ ಆಗುವವರೆಗೂ ಹೋರಾಟ ಮಾಡ್ತೇವೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ರಾಷ್ಟ್ರಧ್ವಜ ನಮ್ಮ ಸ್ವಾಭಿಮಾನದ ಸಂಕೇತ ಎಂದ ಸಿದ್ದರಾಮಯ್ಯ

ರಾಷ್ಟ್ರಧ್ವಜ ಪ್ರದರ್ಶನ ಮಾಡಿದ್ದರಿಂದ ಅಪಮಾನ ಮಾಡಿದಂತಲ್ಲ. ರಾಷ್ಟ್ರಧ್ವಜ ನಮ್ಮ ಸ್ವಾಭಿಮಾನದ ಸಂಕೇತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ತಿರಂಗ ಯಾತ್ರೆ ಮಾಡಿದ್ದು ನೆನಪಿದೆಯಾ ಎಂದು ಡಿ.ಕೆ. ಶಿವಕುಮಾರ್ ಕೇಳಿದ್ದಾರೆ. ಪ್ರತಿಭಟನೆ, ಱಲಿಗಳಲ್ಲಿ ಧ್ವಜ ಹಿಡಿದು ಹೋಗ್ತೀರ ತಪ್ಪಲ್ವಾ? ಅವರು ಭಂಡತನ ತೋರಿದ್ರೆ ಜನತಾ ನ್ಯಾಯಾಲಯಕ್ಕೆ ಹೋಗ್ತೇವೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ನಾಳೆ ಬೆಳಗ್ಗೆಯೊಳಗೆ ಕೇಸ್​ ದಾಖಲಿಸಿ, ಸಂಪುಟದಿಂದ ಕೈಬಿಡಲಿ; ಸಚಿವ ಈಶ್ವರಪ್ಪ ವಿರುದ್ಧ ಡಿಕೆ ಶಿವಕುಮಾರ್ ಕಿಡಿ

ದೇಶದ ಗೌರವ, ಸ್ವಾಭಿಮಾನ ಉಳಿಸುವ ಕೆಲಸ ಮಾಡುತ್ತಿದ್ದೇವೆ. ನಮಗೆ ನಮ್ಮದೇ ಆದಂಥ ಜವಾಬ್ದಾರಿಯನ್ನ ಸಂವಿಧಾನ ಕೊಟ್ಟಿದೆ. ಜನಪ್ರತಿನಿಧಿಗಳಾಗಿ ನಾವು ಸಂವಿಧಾನದ ಮೇಲೆ ಪ್ರಮಾಣ ಮಾಡ್ತೇವೆ. ಜನಪ್ರತಿನಿಧಿಗಳೇ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳುತ್ತಾರೆ. ಕೂಡಲೇ ರಾಜ್ಯಪಾಲರು ಈಶ್ವರಪ್ಪನ್ನ ಅಮಾನತು ಮಾಡಬೇಕಿತ್ತು. ಸಿಎಂ ಗಮನಕ್ಕೆ ಬಂದ ಕೂಡಲೇ ಸಂಪುಟದಿಂದ ಕೈಬಿಡಬೇಕಿತ್ತು. ಆದರೆ, ಇದ್ಯಾವುದನ್ನೂ ಸಿಎಂ ಹಾಗೂ ರಾಜ್ಯಪಾಲರು ಮಾಡಿಲ್ಲ. ಅಧಿಕಾರಿಗಳು ಕೂಡ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇಷ್ಟಾದರೂ ಕೂಡ ಕ್ರಮಕ್ಕೆ ಮುಂದಾಗದ ಹಿನ್ನೆಲೆ ಹೋರಾಟ ಮಾಡುತ್ತೇವೆ.

ನಾವು ಸರ್ಕಾರ, ರಾಜ್ಯಪಾಲರಿಗೆ ಒತ್ತಾಯವನ್ನು ಮಾಡುತ್ತೇವೆ. ನಾವು ಮಂಡಿಸಿದ್ದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದಾರೆ. ಸ್ಪೀಕರ್​ ಪಕ್ಷಾತೀತರಾಗಿರಬೇಕು, ಕಾಗೇರಿ ಪಕ್ಷಪಾತಿಯಾಗಿದ್ದಾರೆ. ಆರ್​ಎಸ್​ಎಸ್​ ಅಥವಾ ಬಿಜೆಪಿ ಅಜೆಂಡಾ ಆಗಿದೆಯೋ ಗೊತ್ತಿಲ್ಲ. ನಾಳೆ ಬೆಳಗ್ಗೆಯೊಳಗೆ ಕೇಸ್​ ದಾಖಲಿಸಿ, ಸಂಪುಟದಿಂದ ಕೈಬಿಡಲಿ ಎಂದು ಸಚಿವ ಈಶ್ವರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಸಚಿವ ಈಶ್ವರಪ್ಪ ವಿರುದ್ಧ ಏಕೆ ದೇಶದ್ರೋಹ ಕೇಸ್​ ಹಾಕಿಲ್ಲ?

ಸಣ್ಣ ಸಣ್ಣ ವಿಚಾರಕ್ಕೆ ಬೇರೆಯವರ ವಿರುದ್ಧ ಕೇಸ್​ ಹಾಕುತ್ತೀರಾ. ಸಚಿವ ಈಶ್ವರಪ್ಪ ವಿರುದ್ಧ ಏಕೆ ದೇಶದ್ರೋಹ ಕೇಸ್​ ಹಾಕಿಲ್ಲ? ಕೂಡಲೇ ಈಶ್ವರಪ್ಪರನ್ನ ಸಚಿವ ಸಂಪುಟದಿಂದ ಕೈಬಿಡಬೇಕು. ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಯಾರೂ ಮಾತಾಡ್ತಿಲ್ಲ. ಪ್ರಧಾನಿ ಮೋದಿ ಕೂಡ ಈ ವಿಚಾರದಲ್ಲಿ ಮೌನವಹಿಸಿದ್ದಾರೆ. ಈಶ್ವರಪ್ಪ ವಿರುದ್ಧ ಕ್ರಮ ಆಗುವವರೆಗೂ ಹೋರಾಟ ಮಾಡ್ತೇವೆ. ಸದನದ ಒಳಗೂ ಹೊರಗೂ ನಾವು ಹೋರಾಟ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಪರಿಷತ್​ ವಿಪಕ್ಷ ನಾಯಕ ಹರಿಪ್ರಸಾದ್​ ಹೇಳಿದ್ದಾರೆ.

ಸದನದೊಳಗೆ ರಾಷ್ಟ್ರಧ್ವಜ ತಂದಿರುವ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಅಪಸ್ವರ?

ಈ ನಡುವೆ ಸದನದೊಳಗೆ ರಾಷ್ಟ್ರಧ್ವಜ ತಂದಿರುವ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಅಪಸ್ವರ ಕೇಳಿಬಂದಿದೆ. ಸಿಎಲ್​ಪಿ ಸಭೆಯಲ್ಲೇ ರಾಷ್ಟ್ರ ಧ್ವಜ ತರಲು ಹಿರಿಯ ನಾಯಕರು ವಿರೋಧಿಸಿದ್ದರು ಎಂದು ತಿಳಿದುಬಂದಿದೆ. ಅದು ನಿಯಮಾವಳಿಗಳ ಉಲ್ಲಂಘನೆ ಎಂದು ಹಿರಿಯ ನಾಯಕರು ಹೇಳಿರುವ ಬಗ್ಗೆ ಮಾಹಿತಿ ಲಭಿಸಿದೆ. ಇಂದು ಸದನದೊಳಗೆ ರಾಷ್ಟ್ರ ಧ್ವಜ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಸದನದ ಘನತೆಯೂ ಕಾಪಾಡೋಲ್ಲ, ಅವರು ಕೇಶವಕೃಪಾ ಹೇಳಿದಂತೆ ಕೇಳ್ತಾರೆ. ನಮ್ಮವರು ಉಡಾಳರು. ಅರ್ಥನೇ ಆಗೊಲ್ಲ ಎಂದು ಬೇಸರ ಹೊರಹಾಕಿರುವ ಬಗ್ಗೆ ಮಾಹಿತಿ ಲಭಿಸಿದೆ.

ಕಾಂಗ್ರೆಸ್ ನಾಯಕರ ವರ್ತನೆಯನ್ನ ನೋಡ್ತಾ ಇದ್ದರೆ ಗೂಳಿ ನುಗ್ಗಿದ ಹಾಗೇ ನುಗ್ತಾ ಇದ್ದರು. ರಾಷ್ಟ್ರಿಯ ಪಕ್ಷದ ಅಧ್ಯಕ್ಷರು ಪರಸ್ಪರ ಪದಬಳಕೆ ಮಾಡಿದ್ದು ನೋಡಿದರೆ ಗೂಳಿ ನುಗ್ಗಿದ ಹಾಗೇ ನುಗ್ಗಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಹೇಳ್ತೇನೆ. ಕಾಂಗ್ರೆಸ್ ನಾಯಕರು ಇಂದು ಟ್ರೈಲರ್ ತೋರಿಸಿದ್ದಾರೆ ಅಷ್ಟೇ. ಮುಂದೆ 2023 ರಲ್ಲಿ ಏನಾಗುತ್ತೆ ಎಂಬುದನ್ನ ತೋರಿಸಿದ್ದಾರೆ. ಜನ ಇದರಿಂದ ಎಚ್ಚೆತ್ತುಕೊಳ್ಳಬೇಕು ಎಂದು ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಈಶ್ವರಪ್ಪ ನೀಡಿದ ಕೇಸರಿ ಧ್ವಜದ ಹೇಳಿಕೆ: ಬಿಜೆಪಿ ಕಾಂಗ್ರೆಸ್ ಶಾಸಕರ ವಾಗ್ವಾದ

ಇದನ್ನೂ ಓದಿ: ಕೆಂಪುಕೋಟೆ ಸೇರಿದಂತೆ ಎಲ್ಲಿ ಬೇಕಾದರೂ ಕೇಸರಿ ಧ್ವಜ ಹಾರಿಸುತ್ತೇವೆ: ಸಚಿವ ಈಶ್ವರಪ್ಪ

Published On - 5:34 pm, Wed, 16 February 22