Karnataka Hijab Row: ದುಪಟ್ಟಾವನ್ನೇ ಧರಿಸಲು ಅನುಮತಿಗೆ ಮನವಿ; ಹಿಜಾಬ್ ವಿವಾದ ವಿಚಾರಣೆ ನಾಳೆಗೆ ಮುಂದೂಡಿಕೆ
ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿತ್ತು. ಆದರೆ, ಇಂದು ಮತ್ತೆ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ನಾಳೆ ಹಿಜಾಬ್ ಸಂಬಂಧ ಪಿಐಎಲ್ ಹಾಗೂ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ ಎಂದು ತ್ರಿಸದಸ್ಯರ ಪೀಠ ತಿಳಿಸಿದೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ (Hijab) ವಿವಾದ ಭುಗಿಲೆದ್ದು ಕೆಲ ದಿನಗಳು ಕಳೆದಿವೆ. ಉಡುಪಿಯಲ್ಲಿ ಆರಂಭವಾದ ಸಮವಸ್ತ್ರ (Uniform) ಸಮರ ಚರ್ಚೆ ಇಡೀ ದೇಶದಾದ್ಯಂತ ವ್ಯಾಪಿಸಿದೆ. ಹಿಜಾಬ್ ನಮ್ಮ ಹಕ್ಕು ಅಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಹಿಜಾಬ್ ಧರಿಸುವವರೆಗೂ ಕೇಸರಿ ಶಾಲು ಧರಿಸುತ್ತೇವೆ ಅಂತ ವಿದ್ಯಾರ್ಥಿಗಳು ಪಟ್ಟು ಬಿದ್ದಿದ್ದಾರೆ. ಈ ಮಧ್ಯೆ ವಿವಾದದ ಬಗ್ಗೆ ಇಂದು ಕೂಡ (ಫೆಬ್ರವರಿ 16) ಹೈಕೋರ್ಟ್ನಲ್ಲಿ ವಿಚಾರಣೆ ನಡೆಸಲಾಗಿದೆ. ನಿನ್ನೆ ವಾದ ಪ್ರತಿವಾದದ ಬಳಿಕ ಕೋರ್ಟ್ ಇಂದಿಗೆ ವಿಚಾರಣೆ ಮುಂದೂಡಿತ್ತು. ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿತ್ತು. ಆದರೆ, ಇಂದು ಮತ್ತೆ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ನಾಳೆ ಹಿಜಾಬ್ ಸಂಬಂಧ ಪಿಐಎಲ್ ಹಾಗೂ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ ಎಂದು ತ್ರಿಸದಸ್ಯರ ಪೀಠ ತಿಳಿಸಿದೆ.
ಹಿಜಾಬ್ ವಿವಾದ ಹಿನ್ನೆಲೆ ಬಂದ್ ಆಗಿದ್ದ ಕಾಲೇಜುಗಳು ಇಂದಿನಿಂದ ಆರಂಭವಾಗಿದೆ. ಈ ನಡುವೆ ಹಿಜಾಬ್ ಧರಿಸಿ ಕಾಲೇಜು ಪ್ರವೇಶಕ್ಕೆ ಅನುಮತಿ ನೀಡವಂತೆ ಒತ್ತಾಯಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆಗಳು ನಡೆದಿವೆ. ಕೋರ್ಟ್ನಲ್ಲಿ ಹೈಕೋರ್ಟ್ ಆದೇಶದ ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಲು ಹಿರಿಯ ವಕೀಲ ರವಿವರ್ಮಕುಮಾರ್ ನಿರ್ಧರಿಸಿದ್ದು, ದುಪಟ್ಟಾವನ್ನೇ ಧರಿಸಲು ಅನುಮತಿಗೆ ಮನವಿ ಮಾಡಿದ್ದಾರೆ. ಇನ್ನು ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ಎಜಿ ಹೇಳಿಕೆ ನೀಡಿದ್ದಾರೆ.
ಸಂವಿಧಾನದಲ್ಲಿ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ನೀಡಿದೆ. ಸಮವಸ್ತ್ರದ ಹೆಸರಲ್ಲಿ ಬೇರೆಯವರ ಹಕ್ಕನ್ನು ಕಿತ್ತುಕೊಳ್ಳುವಂತಿಲ್ಲ. ನನ್ನ ಶಿಕ್ಷಣದ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳುವಂತಿಲ್ಲ. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು ಹಕ್ಕೆಂದು ತಿಳಿದಿದ್ದಾರೆ. ಈ ಹಕ್ಕನ್ನು ಸರ್ಕಾರ ಗೌರವಿಸಬೇಕು ಎಂದು ವಾದಮಂಡಿಸಲಾಗಿದೆ. ಹುಡುಗಿ ಕನ್ನಡಕ ಹಾಕಿದರೂ ನಿರ್ಬಂಧಿಸುತ್ತೀರಾ? ಎಂದ ವಕೀಲರು, ಸರ್ಕಾರದ ಕ್ರಮ ನ್ಯಾಯಬದ್ದವಾಗಿಲ್ಲ, ಆದೇಶಕ್ಕೂ ಮುನ್ನ ಪೋಷಕರ ನಿಲುವು ಕೇಳಬೇಕಿತ್ತು. ಆದೇಶಕ್ಕೂ ಮುನ್ನ ಪೋಷಕರು, ಶಿಕ್ಷಕರ ಸಮಿತಿಯನ್ನೂ ಕೇಳಿಲ್ಲ. ಇತರೆ ಮಕ್ಕಳ ಆಕ್ಷೇಪದ ಕಾರಣಕ್ಕೂ ಇಂತಹ ನಿರ್ಬಂಧ ಸರಿಯಲ್ಲ ಎಂದು ಯೂಸುಫ್ ಮುಕ್ಕಲಾ ವಾದ ಮಂಡನೆಮಾಡಿದ್ದಾರೆ.
ಇದಕ್ಕೂ ಮೊದಲು, ನವತೇಜ್ ಸಿಂಗ್ ಪ್ರಕರಣ ಉಲ್ಲೇಖಿಸುತ್ತಿರುವ ರವಿವರ್ಮಕುಮಾರ್ ವೈವಿದ್ಯತೆಯಲ್ಲಿ ಏಕತೆ ಇರುವುದನ್ನು ಪರಿಗಣಿಸಬೇಕು. ಶಿಕ್ಷಣದ ಹಕ್ಕಿನ ಕಾಯ್ದೆಯನ್ನೂ ಪ್ರಶ್ನಿಸಲಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರ ಸಂಖ್ಯೆಯೇ ಕಡಿಮೆಯಿದೆ. ಸರ್ಕಾರದ ಇಂತಹ ಆದೇಶಗಳಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹಿನ್ನಡೆಯಾಗಿದೆ. ಸರ್ಕಾರದ ಆದೇಶ ರದ್ದುಪಡಿಸಲು ಮನವಿ ಮಾಡಿ ರವಿವರ್ಮಕುಮಾರ್ ವಾದಮಂಡನೆ ಮುಕ್ತಾಯಗೊಳಿಸಿದ್ದಾರೆ.
ಬಳೆ ಧರಿಸುವುದು ಧಾರ್ಮಿಕ ಗುರುತು ಅಲ್ಲವೇ? , ಹೀಗಿದ್ದಾಗ ಹಿಜಾಬ್ ಗೆ ಮಾತ್ರ ನಿರ್ಬಂಧ ವಿಧಿಸಿರುವುದೇಕೆ? ಮುಸ್ಲಿಂ ವಿದ್ಯಾರ್ಥಿನಿಯಾದ ಕಾರಣಕ್ಕೇ ನಿರ್ಬಂಧ ವಿಧಿಸಲಾಗಿದೆ. ಹಿಂದೂ ಯುವತಿಯರು ಬಿಂದಿ, ಬಳೆ ತೊಡುತ್ತಾರೆ, ಕ್ರಿಶ್ಚಿಯನ್ ವಿದ್ಯಾರ್ಥಿನಿಯರು ಕ್ರಾಸ್ ತೊಡುತ್ತಾರೆ. ಸಿಖ್ ವಿದ್ಯಾರ್ಥಿಗಳು ಟರ್ಬನ್ ತೊಡುತ್ತಾರೆ. ಸರ್ಕಾರ ಅದ್ಯಾವುದಕ್ಕೂ ನಿರ್ಬಂಧ ವಿಧಿಸಿಲ್ಲ. ಅದು ಯಾಕೆ ಎನ್ನುವಂತಹ ಪ್ರಶ್ನೆಗಳು ಸಂವಿಧಾನ ರಚನೆಯಾದ ಕ್ಷಣದಿಂದಲೂ ಇವೆ. ಧಾರ್ಮಿಕ ಕಾರಣಕ್ಕೆ ತಾರತಮ್ಯ ಮಾಡುವಂತಿಲ್ಲ. ಉತ್ತರ ಪ್ರದೇಶ, ರಾಜಸ್ತಾನ ಹೈಕೋರ್ಟ್ ನ ತೀರ್ಪುಗಳಿವೆ ಎಂದು ವಾದ ಮಂಡಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಧಾರ್ಮಿಕ ಗುರುತು ಧರಿಸುವುದು ಸಾಮಾನ್ಯ ಶಿಕ್ಷಕರು ಸೇರಿದಂತೆ ಹಲವರು ಹಣೆಯ ಮೇಲೆ ತಿಲಕ ಧರಿಸುತ್ತಾರೆ. ದೇವಾಲಯದ ಆನೆಯ ಮೇಲೆ ನಾಮ ಹಾಕುವ ವಿವಾದದ ಕುರಿತು ಹೇಳಿದ ಅವರು, ತೆಂಗಳೈ ಹಾಕಬೇಕೋ, ವಡಗಲೈ ನಾಮ ಹಾಕಬೇಕೋ ಎನ್ನುವ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ತೀರ್ಪು ಬರುವ ವೇಳೆಗೆ ಆನೆಯೇ ಸತ್ತುಹೋಗಿತ್ತು. ಕೋರ್ಟ್ ಆರು ತಿಂಗಳು ತೆಂಗಳೈ, ಆರು ತಿಂಗಳು ವಡಗಲೈ ನಾಮ ಇಡಲು ತೀರ್ಪು ನೀಡಿತ್ತು. ಸರ್ವೆ ವರದಿಯೊಂದರ ಪ್ರಕಾರ 56 ರಷ್ಟು ಹಿಂದೂಗಳು ಧಾರ್ಮಿಕ ಪೆಂಡೆಂಟ್ ಧರಿಸುತ್ತಾರೆ, ಶೇ. 84 ಮುಸ್ಲಿಮರು ಗಡ್ಡ, ಟೋಪಿ ಧರಿಸುತ್ತಾರೆ. ಸಿಖ್ಖರಲ್ಲೂ ಶೇ. 86 ರಷ್ಟು ಜನ ಗಡ್ಡ ಬಿಡುತ್ತಾರೆ ಎಂದಿದ್ದಾರೆ. ಇದಕ್ಕೆ ಹೈಕೋರ್ಟ್ ದಾಖಲೆ ಕೇಳಿದೆ.
ಇಂದಿನ ಕೋರ್ಟ್ ಕಲಾಪದ ಸಂಪೂರ್ಣ ಮಾಹಿತಿ ಇಲ್ಲಿದೆ: Karnataka Hijab Hearing Live: ನಾಳೆ ಹಿಜಾಬ್ ಸಂಬಂಧ ಪಿಐಎಲ್ ಹಾಗೂ ರಿಟ್ ಅರ್ಜಿ ವಿಚಾರಣೆ
ಇದನ್ನೂ ಓದಿ: Karnataka Hijab Row: ಹಿಜಾಬ್ ಗಲಾಟೆ ನಡೆದ ಶಾಲೆಯಲ್ಲಿ ಮಕ್ಕಳಿಗೆ ಡಿಸಿ, ಎಸ್ಪಿಯಿಂದ ಪಾಠ