ಬೆಂಗಳೂರು: ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂತೋಷ್ ಆತ್ಮಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಏನೂ ಮಾಡುವುದಿಲ್ಲ ಎಂಬುದು ಗೊತ್ತಿದೆ. ಆದರೆ ರಾಜ್ಯದಲ್ಲಿ ಡಿಜಿಪಿ ಇನ್ನೂ ಬದುಕಿದ್ದರೆ, ಕಾನೂನು ಎಂಬುದು ಇದ್ದರೆ ಮೊದಲು ಈ ಪ್ರಕರಣದ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸಂತೋಷ್ ಹೇಳಿದ ಎಲ್ಲ ವಿಷಯಗಳನ್ನೂ ಸತ್ಯ ಎಂದು ಒಪ್ಪಲು ಆಗುವುದಿಲ್ಲ. ಆದರೆ ಈ ಬಗ್ಗೆ ತನಿಖೆ ಆಗಬೇಕು. ಸತ್ಯಾಸತ್ಯತೆ ಹೊರಬರಬೇಕು. ಇದರ ಬಗ್ಗೆ ಎಫ್ಐಆರ್ ದಾಖಲಿಸಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ಬೇರೊಂದು ಪ್ರಕರಣದಲ್ಲಿ ಇತ್ತೀಚೆಗೆ ಪೊಲೀಸ್ ಆಯುಕ್ತರು ಒಂದು ರೀತಿಯ ಹೇಳಿಕೆ ಕೊಟ್ಟರೆ, ಸರ್ಕಾರ ಮತ್ತೊಂದು ರೀತಿಯ ಹೇಳಿಕೆ ಕೊಟ್ಟಿತ್ತು. ತನಿಖೆ ಮಾಡುವ ಹಕ್ಕನ್ನು ಅಧಿಕಾರಿಯಿಂದ ಕಸಿದುಕೊಳ್ಳಬಾರದು. ಸರ್ಕಾರ ತನಿಖೆ ಮಾಡುವ ಅಧಿಕಾರಿಗೆ ರಕ್ಷಣೆ ಕೊಡದೆ ಮಂತ್ರಿಗಳ ಮೇಲೆ ಕ್ರಮ ಆಗದ ಹಾಗೆ ರಕ್ಷಣೆ ಕೊಟ್ಟಿದೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಪ್ರಕರಣವನ್ನು ಡಿ.ಕೆ.ಶಿವಕುಮಾರ್ ಕೆಣಕಿದರು.
ಸಂತೋಷ್ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ‘ಗುತ್ತಿಗೆದಾರ ಸಂತೋಷ್ ಬಿಜೆಪಿ ಕಾರ್ಯಕರ್ತರಾಗಿದ್ದರು. ನಿರ್ವಹಿಸಿದ್ದ ಕಾಮಗಾರಿಗೆ ಬಿಲ್ ಮಂಜೂರು ಮಾಡಲು ಈಶ್ವರಪ್ಪ ಕಮಿಷನ್ ಕೇಳಿದ್ದರು ಎಂಬ ಅರೋಪ ಕೇಳಿ ಬಂದಿತ್ತು. ಇದೀಗ ಅವರು ನನ್ನ ಸಾವಿಗೆ ಸಚಿವ ಈಶ್ವರಪ್ಪ ನೇರ ಕಾರಣವೆಂದು ಆರೋಪ ಮಾಡಿ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ. ಕೂಲಂಕಶ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಇಂದು ಸಂಜೆಯ ಒಳಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ನಾವು ನಿರ್ಧರಿಸುತ್ತೇವೆ. ಈಶ್ವರಪ್ಪ ವಿರುದ್ಧ ಬೊಮ್ಮಾಯಿ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಸುಮ್ಮನೆ ಇರುವುದಿಲ್ಲ. ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಆತ್ಮಹತ್ಯೆ ಮಾಹಿತಿಯಿಲ್ಲ: ಈಶ್ವರಪ್ಪ
ಮೈಸೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ನನಗೆ ಮಾಹಿತಿಯಿಲ್ಲ. ಅವರು ನನ್ನ ವಿರುದ್ಧ ಕಮಿಷನ್ ಆರೋಪ ಮಾಡಿದ್ದರು. ಯಾಕೆ ಇಂಥ ಆರೋಪ ಮಾಡಿದ್ದರು ಎಂದು ವಿಚಾರಿಸಲು ಇಂದು ಅವರೇ ಇಲ್ಲ. ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ನ್ಯಾಯಾಲಯ ಕೂಡ ಪ್ರಕರಣ ವಿಚಾರಣೆ ಅಂಗೀಕರಿಸಿತ್ತು ಎಂದು ಹೇಳಿದರು.
ಪೊಲೀಸ್ ತನಿಖೆ: ಗೃಹ ಸಚಿವ ಭರವಸೆ
ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಆತ ಯಾಕೆ ಆತ್ಮಹತ್ಯೆಗೆ ಶರಣಾದ ಎಂಬ ಬಗ್ಗೆ ಮಾಹಿತಿ ಪಡೆಯುತ್ತೇನೆ. ಆತ್ಮಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಾರೆ. ಸಂತೋಷ್ ಮಾಧ್ಯಮಗಳಿಗೆ ಸಂದೇಶ ಕಳುಹಿಸಿದ್ದಾನೆ ಅಷ್ಟೇ. ಸಂತೋಷ್ ಯಾವುದೇ ಡೆತ್ನೋಟ್ ಬರೆದಿಲ್ಲ ಅನಿಸುತ್ತೆ. ಉಡುಪಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಲಾಡ್ಜ್ಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.
ಇನ್ನು ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಕಾಮಗಾರಿ ಬಿಲ್ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. 2021ರ ಫೆಬ್ರವರಿಯಲ್ಲಿ ಸಚಿವರ ಅನುಮತಿ ಪಡೆದು 108 ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದ್ರೆ ಹಣ ಬಿಡುಗಡೆಯಾಗಿಲ್ಲ. ಕಾಮಗಾರಿ ಪೂರ್ಣವಾಗಿ 1 ವರ್ಷ ಕಳೆದರೂ ಹಣ ನೀಡಿಲ್ಲ. ಸಚಿವರು, ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ನನ್ನ ಪತ್ರವನ್ನು ವೈಯಕ್ತಿಕವಾಗಿ ಪರಿಗಣಿಸಿ ಹಣ ಕೊಡಿಸಿ. ಬಿಲ್ ಮಂಜೂರಾತಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಮೃತ ಸಂತೋಷ್, ಸಚಿವ ಈಶ್ವರಪ್ಪ ವಿರುದ್ಧ ಆರೋಪಮಾಡಿದ್ದರು. ಈ ಬಗ್ಗೆ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು. ಹಣ ಕೊಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಆದ್ರೆ ಇದೀಗ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಮಾಧ್ಯಮಗಳಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಸಂತೋಷ್
Published On - 1:16 pm, Tue, 12 April 22