ಕಠಿಣ ಕಾನೂನು ಪಾಲನೆಗೆ ಮುಂದಾದ ಮುಜರಾಯಿ ಇಲಾಖೆ: ದೇಗುಲ ಮಳಿಗೆಗಳಲ್ಲಿ ಮುಸ್ಲಿಮರಿಗಿಲ್ಲ ಅವಕಾಶ
ಮುಜರಾಯಿ ದೇಗುಲದ ಅಂಗಡಿಗಳಲ್ಲಿ ಇನ್ನು ಮುಂದೆ ಮುಸ್ಲಿಮರಿಗೆ ಅವಕಾಶ ಇರುವುದಿಲ್ಲ. ವ್ಯಾಪಾರ ಮಳಿಗೆ ಹರಾಜಿನಲ್ಲಿಯೂ ಅನ್ಯಧರ್ಮೀಯರು ಪಾಲ್ಗೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮುಜರಾಯಿ ಇಲಾಖೆಯು ಕಠಿಣ ಕಾನೂನು ಪಾಲನೆ ಮಾಡಲು ಮುಂದಾಗಿದೆ. ಮುಜರಾಯಿ ದೇಗುಲದ ಅಂಗಡಿಗಳಲ್ಲಿ ಇನ್ನು ಮುಂದೆ ಮುಸ್ಲಿಮರಿಗೆ ಅವಕಾಶ ಇರುವುದಿಲ್ಲ. ವ್ಯಾಪಾರ ಮಳಿಗೆ ಹರಾಜಿನಲ್ಲಿಯೂ ಅನ್ಯಧರ್ಮೀಯರು ಪಾಲ್ಗೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೊದಲೇ ನಮೂದಾಗಿರುವ ಕಾನೂನಿನಲ್ಲಿರುವ ಅಂಶಗಳನ್ನಿಟ್ಟುಕೊಂಡು ಈ ಬಾರಿ ಹರಾಜು ನಿರ್ವಹಿಸಲು ಮುಂದಾಗಿರುವ ಇಲಾಖೆಯು, ಹರಾಜಿನಲ್ಲಿ ಅಂಗಡಿ ತೆಗೆದುಕೊಂಡವರೇ ವ್ಯಾಪಾರ ಮಾಡಬೇಕು. ಇತರ ಅನ್ಯಧರ್ಮೀಯರಿಗೆ ಉಪ-ಗುತ್ತಿಗೆ ಕೊಡುವಂತಿಲ್ಲ. ಒಂದು ವೇಳೆ ಹರಾಜಿನಲ್ಲಿ ಪಡೆದ ಅಂಗಡಿಯನ್ನು ಉಪ-ಗುತ್ತಿಗೆ ನೀಡಿದರೆ ಮಂಜೂರು ಆದೇಶವನ್ನೇ ಅಮಾನತು ಮಾಡಲಾಗುವುದು. ಮಳಿಗೆಯನ್ನು ಅನ್ಯಧರ್ಮೀಯರಿಗೆ ನೀಡುವ ದೇಗುಲಗಳ ಕಾರ್ಯನಿರ್ವಹಣಾಧಿಕಾರಿಯನ್ನು ಅಮಾನತುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಬೆಂಗಳೂರಲ್ಲಿ ಹರಾಜಿಗೆ ಸಿದ್ಧವಿರುವ 48 ಅಂಗಡಿಗಳಿಗೆ ಈಗಾಗಲೇ ನೊಟೀಸ್ ನೀಡಲಾಗಿದೆ ಎಂದು ಮುಜರಾಯಿ ಇಲಾಖೆಯು ತಿಳಿಸಿದೆ. ಬಳೆಪೇಟೆಯ ಬಂಡಿ ಶೇಷಮ್ಮ, ಶ್ರೀನಿವಾಸ ದೇವಸ್ಥಾನ, ಸುಗ್ರೀವ ವೆಂಕಟರಮಣ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ದೇವಾಲಯದ ಅಂಗಡಿಗಳಿಗೆ ನೊಟೀಸ್ ನೀಡಲಾಗಿದೆ.
ನಿಯಮ ಏನು ಹೇಳುತ್ತದೆ?
ಮುಜರಾಯಿ ಸ್ವತ್ತು ನಿರ್ವಹಣೆಗೆ ಬಳಕೆಯಾಗುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು (2002)’ ನಿಬಂಧನೆಯ ಪ್ರಕಾರ ಮುಜರಾಯಿ ಇಲಾಖೆಯು ಹಿಂದೂ ಧರ್ಮಕ್ಕೆ ಸೇರದವರಿಗೆ ಮುಜರಾಯಿ ಮಳಿಗೆಗಳನ್ನು ನೀಡುವುದಿಲ್ಲ ಎಂಬ ನಿಲುವು ತಳೆದಿದೆ. 2002ರಲ್ಲಿ ಜಾರಿಯಾದ ಈ ನಿಯಮಗಳ 12ನೇ ಅಂಶವು, ‘ಸಂಸ್ಥೆಯ ಸಮೀಪದ ಜಮೀನು, ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ಕೊಡುವಂತಿಲ್ಲ’ ಎಂದು ಹೇಳುತ್ತದೆ.
ಇದೇ ನಿಯಮಗಳಲ್ಲಿ ಇರುವ ಇತರ ಕೆಲ ಅಂಶಗಳು ಸಹ ಮುಜರಾಯಿ ಇಲಾಖೆ ತೀರ್ಮಾನಕ್ಕೆ ಪೂರಕವಾಗಿವೆ.
ಗುತ್ತಿಗೆ ಹಿಡಿದ ಸ್ವತ್ತನ್ನು ಗುತ್ತಿಗೆಗೆ ನೀಡಲಾಗಿರುವ ಉದ್ದೇಶಕ್ಕಾಗಿ ಮಾತ್ರವೇ ಬಳಸತಕ್ಕದ್ದು. ಗುತ್ತಿಗೆಯ ಅವಧಿಯಲ್ಲಿ ಒಳಗೇಣಿಗೆ ಅವಕಾಶ ಇರುವುದಿಲ್ಲ. ಗುತ್ತಿಗೆದಾರನು ದೇವಸ್ಥಾನದ ಭಕ್ತರ ಭಾವನೆಗಳಿಗೆ ನೋವುಂಟಾಗಬಹುದಾದ ಅಥವಾ ಆವರಣದ ಪಾವಿತ್ರ್ಯತೆಗೆ ಧಕ್ಕೆಯುಂಟು ಮಾಡುವ ಯಾವುದೇ ವ್ಯವಹಾರ ನಡೆಸುವಂತಿಲ್ಲ. ಗುತ್ತಿಗೆಗೆ ನೀಡಿರುವ ಸ್ವತ್ತಿನಲ್ಲಿ ಬಾರ್, ಮಾಂಸಾಹಾರ, ಮದ್ಯದ ಅಂಗಡಿ, ಲೈವ್ಬ್ಯಾಂಡ್ ನಡೆಸುವಂತಿಲ್ಲ ಎಂಬ ನಿಯಮಗಳನ್ನು ವಿಧಿಸಲಾಗಿದೆ.
2002ರಿಂದಲೂ ಈ ನಿಯಮಗಳು ಅಸ್ತಿತ್ವದಲ್ಲಿದ್ದರೂ ಕಟ್ಟುನಿಟ್ಟಿನ ಜಾರಿಗೆ ಸರ್ಕಾರ ಒತ್ತು ನೀಡಿರಲಿಲ್ಲ. ಆದರೆ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಮುಸ್ಲಿಮರು ವ್ಯಾಪಾರ ಬಂದ್ ಮಾಡಿದ ನಂತರ ಪರಿಸ್ಥಿತಿ ಬದಲಾಯಿತು. ಗಂಗೊಳ್ಳಿಯಲ್ಲಿ ಗೋಹತ್ಯೆ ವಿರೋಧಿ ಪ್ರತಿಭಟನೆ ನಡೆದ ಮುಸ್ಲಿಮರು ಹಿಂದೂ ಮಹಿಳೆಯರಿಂದ ಮೀನು ಖರೀದಿಗೆ ಬಹಿಷ್ಕಾರ ಹಾಕಿದರು ಎನ್ನುವ ಸುದ್ದಿ ವ್ಯಾಪಕವಾಗಿ ಪ್ರಚಾರವಾದ ನಂತರ ಧಾರ್ಮಿಕ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎನ್ನುವ ಕೂಗು ಜೋರಾಯಿತು. ಧಾರವಾಡದ ನುಗ್ಗಿಕೇರಿ ಹನುಮಂತನ ದೇವಸ್ಥಾನ ಸಮೀಪ ಮುಸ್ಲಿಂ ವ್ಯಾಪಾರಿಗೆ ಸೇರಿದ್ದ ಕಲ್ಲಂಗಡಿ ಹಣ್ಣನ್ನು ಶ್ರೀರಾಮಸೇನೆ ಕಾರ್ಯಕರ್ತರು ಹಾಳುಗೆಡವಿದ್ದು ವ್ಯಾಪಕ ಖಂಡನೆಗೆ ಗುರಿಯಾಗಿತ್ತು.
ಇದೀಗ ಮುಜರಾಯಿ ಇಲಾಖೆಯ ಹಳೆಯ ನಿಯಮವನ್ನು ಜಾರಿಗಳಿಸಲು ಮುಂದಾಗುವುದರೊಂದಿಗೆ ವಿವಾದ ಮತ್ತೊಂದು ಮಜಲಿಗೆ ತಲುಪಿದೆ.
ಇದನ್ನೂ ಓದಿ: TV9 Kannada Survey: ಹಿಂದು ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಬೇಡ ? ಇಲ್ಲಿದೆ ಜನಾಭಿಪ್ರಾಯ
ಇದನ್ನೂ ಓದಿ: ಮುಸ್ಲಿಮರ ಬಹಿಷ್ಕಾರದಿಂದ ಸಮಸ್ಯೆ ಗಂಭೀರ: ಪಿಯುಸಿಎಲ್ ಅಧ್ಯಕ್ಷ ಅರವಿಂದ್