ಮಿಸ್ಟರ್ ಮೋದಿ ಎಲ್ಲಿದ್ಯಪ್ಪಾ, ಕರ್ನಾಟಕದ ಬ್ರಹ್ಮಾಂಡ ಭ್ರಷ್ಟಾಚಾರ ಗಮನಕ್ಕೆ ಬಂದಿಲ್ಲವೇ: ಉಗ್ರಪ್ಪ ಪ್ರಶ್ನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 02, 2022 | 1:55 PM

ಕರ್ನಾಟಕದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ನಾನು ಭ್ರಷ್ಟಾಚಾರ ಮಾಡುವುದಿಲ್ಲ, ಬೇರೆಯವರು ಮಾಡುವುದಕ್ಕೂ ಬಿಡುವುದಿಲ್ಲ ಎನ್ನುವ ನರೇಂದ್ರ ಮೋದಿ ಈಗ ಎಲ್ಲಿದ್ದಾರೆ ಎಂದು ಉಗ್ರಪ್ಪ ಪ್ರಶ್ನಿಸಿದರು.

ಮಿಸ್ಟರ್ ಮೋದಿ ಎಲ್ಲಿದ್ಯಪ್ಪಾ, ಕರ್ನಾಟಕದ ಬ್ರಹ್ಮಾಂಡ ಭ್ರಷ್ಟಾಚಾರ ಗಮನಕ್ಕೆ ಬಂದಿಲ್ಲವೇ: ಉಗ್ರಪ್ಪ ಪ್ರಶ್ನೆ
ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ
Follow us on

ಬೆಂಗಳೂರು: ಕರ್ನಾಟಕದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ನಾನು ಭ್ರಷ್ಟಾಚಾರ ಮಾಡುವುದಿಲ್ಲ, ಬೇರೆಯವರು ಮಾಡುವುದಕ್ಕೂ ಬಿಡುವುದಿಲ್ಲ ಎನ್ನುವ ನರೇಂದ್ರ ಮೋದಿ ಈಗ ಎಲ್ಲಿದ್ದಾರೆ. ಮಿಸ್ಟರ್ ಮೋದಿ ಎಲ್ಲಿದ್ಯಪ್ಪ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಹರಿಹಾಯ್ದರು. ಪಿಎಸ್​ಐ ನೇಮಕಾತಿ ಮಾತ್ರವೇ ಅಲ್ಲ, ಕೆಪಿಎಸ್​ಸಿ ನೇಮಕಾತಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಇಲ್ಲಿರುವುದು ಮೋದಿ ಅವರ ಪಕ್ಷದ್ದೇ ಸರ್ಕಾರ. ಮೋದಿ ನಿದ್ರೆ ಮಾಡ್ತಿದ್ದಾರಾ? ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳುತ್ತಾರಾ ಎಂದು ವ್ಯಂಗ್ಯವಾಡಿದರು. ಗುತ್ತಿಗೆದಾರರ ಸಂಘಟನೆ ಪ್ರಧಾನಿಗೆ ಪತ್ರ ಬರೆದು ಮೂರು ತಿಂಗಳ ಮೇಲಾಗಿದೆ. ಸಂತೋಷ್ ಆತ್ಮಹತ್ಯೆ ಬಳಿಕವೂ ಮೋದಿಯವರು ಎಚ್ಚೆತ್ತುಕೊಂಡಿಲ್ಲ. ಪ್ರಧಾನಿ ಕಚೇರಿಯಿಂದಲೇ ಭ್ರಷ್ಟಾಚಾರದ ಪಾಲನೆ ಪೋಷಣೆಯಾಗುತ್ತಿದೆ. ಕೆಪಿಎಸ್​ಸಿಗೆ ₹ 10 ಕೋಟಿ ಕೊಡಬೇಕು ಎನ್ನುವ ಆರೋಪವನ್ನು ಸ್ವ ಪಕ್ಷದವರೇ ಮಾಡಿದ್ದಾರೆ. ಬರೀ ಪುಂಗಿ ಊದುವುದರಿಂದ ಏನೂ ಆಗುವುದಿಲ್ಲ. ರಾಜ್ಯದಲ್ಲಿ ಬಸನಗೌಡ ಪಾಟೀಲ ಯತ್ನಾಳ್, ಮತ್ತು ಸಿ.ಟಿ.ರವಿ ಇಬ್ಬರೂ ಪುಂಗಿ ಬಿಡೋರು ಎಂದು ವ್ಯಂಗ್ಯವಾಡಿದರು.

ಸಚಿವ ಅಶ್ವತ್ಥ ನಾರಾಯಣ ಸೋದರನ ವಿರುದ್ಧ ಆರೋಪ

ಹಗರಣದಲ್ಲಿ ಸಚಿವ ಅಶ್ವತ್ಥ ನಾರಾಯಣ ಸೋದರ ಭಾಗಿಯಾಗಿದ್ದಾರೆ ಎಂದು ವಿ.ಎಸ್.ಉಗ್ರಪ್ಪ ನೇರ ಅರೋಪ ಮಾಡಿದರು. ಕಾಂಗ್ರೆಸ್ ನಾಯಕ ಎಚ್​.ಎಂ.ರೇವಣ್ಣ ಸಹ ಅಶ್ವತ್ಥ ನಾರಾಯಣ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ’ಅರೆಸ್ಟ್‌ ಮಾಡಿದವರನ್ನು ಬಿಡಿಸಿದವರು ಯಾರು? ಗಂಡಸ್ತನ ಇರುವ ಸಚಿವರೊಬ್ಬರು.. ಆ ಸಚಿವರ ಹೆಸರು ಹೇಳಲು ನಮಗೆ ಯಾವುದೇ ಭಯವಿಲ್ಲ’ ಎಂದು ಹೇಳಿದರು. ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವಾಗ ಕ್ರಮ ತೆಗೆದುಕೊಳ್ಳುವಿರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಯಾವುದೇ ಡಿನೋಟಿಫಿಕೇನ್ ಆಗಿಲ್ಲ. ಅವರ ಮೇಲೆ ಕೆಸರು ಎರಚಲು ಸಿ.ಟಿ.ರವಿ ವಿನಾಕಾರಣ ಪ್ರಯತ್ನ ಮಾಡುತ್ತಿದ್ದಾರೆ. ನಿಮಗೆ ತಾಕತ್ತು ಇದ್ದರೆ ಸಿದ್ದರಾಮಯ್ಯ ಅವರನ್ನು ಬಂಧಿಸಿ ಎಂದು ಸವಾಲು ಹಾಕಿದರು. ಹಗರಣ ವಿಚಾರದಲ್ಲಿ ಉಸ್ತುವಾರಿಗಳ ವಿರುದ್ಧ ಯಾರೂ ಬಾಯಿ ಬಿಡುತ್ತಿಲ್ಲ. ಹಗರಣದಲ್ಲಿ ಭಾಗಿಯಾಗಿರುವ ದರ್ಶನ್ ಅವರನ್ನು ರಕ್ಷಣೆ ಮಾಡಿದ್ರೆ ಇವರಿಬ್ಬರು ಸೇಫ್ ಆಗ್ತಾರೆ. ಬಂಧನವಾದ್ರೆ ಎಲ್ಲಿ ಸಚಿವ ಸ್ಥಾನಕ್ಕೆ ಸಂಚಕಾರ ಬರಬಹುದು ಎನ್ನುವ ಕಾರಣಕ್ಕೆ ದರ್ಶನ್​ಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಮಾತನಾಡಿ, ಮರು ಪರೀಕ್ಷೆ ಮಾಡಿದರೂ ಅಕ್ರಮ ನಡೆಯುವುದಿಲ್ಲ ಎನ್ನಲು ಏನು ಖಾತ್ರಿಯಿದೆ. ಸರ್ಕಾರವು ಭ್ರಷ್ಟಾಚಾರ ಎಸಗಿದವರ, ಭಾಗಿಯಾದವರ ಕುರಿತು ತಕ್ಷಣ ಶಿಸ್ತುಕ್ರಮ ಜರುಗಿಸಬೇಕು. ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು. ತಪ್ಪಿತಸ್ಥರನ್ನು ಸುಮ್ಮನೆ ಬಿಡಬಾರದು ಎಂದು ಆಗ್ರಹಿಸಿದರು. ಎಸ್​ಐಟಿ ಮೂಲಕ ತನಿಖೆ ನಡೆಸಿ ಕೋರ್ಟ್​ಗೆ ಕೊಡಿ ಎಂದರು. ಜನರು ಈಗ ಎಚ್ಚೆತ್ತುಕೊಳ್ಳದಿದ್ದರೆ ಭ್ರಷ್ಟರೇ ಮತ್ತೆ ಅಧಿಕಾರಕ್ಕೆ ಬರ್ತಾರೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹತ್ವದ ದಾಖಲೆ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿದ್ದ ಉಗ್ರಪ್ಪ ಯಾವುದೇ ದಾಖಲೆಗಳನ್ನು ಒದಗಿಸಲಿಲ್ಲ. ಸಚಿವ ಅಶ್ವತ್ಥ ನಾರಾಯಣ ಅವರ ಸೋದರ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅದು ನನಗೆ ಅವಶ್ಯಕತೆ ಇಲ್ಲ. ಆಮೇಲೆ ಕೊಡ್ತೀನಿ ಎಂದು ಹೇಳಿದರು. ‘ರಾಮನಗರದಲ್ಲಿ ಅಶ್ವತ್ಥ ನಾರಾಯಣ ಅವರು ಗಂಡಸ್ತನದ ಬಗ್ಗೆ ಮಾತನಾಡಿದ್ದರಿಂದ ಈ ಸುದ್ದಿಗೋಷ್ಠಿ ಮಾಡುತ್ತಿದ್ದೀರಾ’ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ವೈಯಕ್ತಿಕ ಏನೂ ಇಲ್ಲ ಎಂದರು.

Published On - 1:37 pm, Mon, 2 May 22