ಸೂಕ್ತ ತನಿಖೆ ಆದರೆ ಇನ್ನೂ ನಾಲ್ವರು ಸಚಿವರು ರಾಜೀನಾಮೆ ಕೊಡಬೇಕಾಗುತ್ತೆ: ಪ್ರಿಯಾಂಕ್ ಖರ್ಗೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 15, 2022 | 12:26 PM

ಸಚಿವ ಈಶ್ವರಪ್ಪ ರಾಜೀನಾಮೆಗಾಗಿ ಧರಣಿ ಮಾಡುತ್ತಿಲ್ಲ. ಈ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಹೇಳಿದರು.

ಸೂಕ್ತ ತನಿಖೆ ಆದರೆ ಇನ್ನೂ ನಾಲ್ವರು ಸಚಿವರು ರಾಜೀನಾಮೆ ಕೊಡಬೇಕಾಗುತ್ತೆ: ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ
Follow us on

ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗಾಗಿ ಧರಣಿ ಮಾಡುತ್ತಿಲ್ಲ. ಈ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕು ಎನ್ನುವುದು ನಮ್ಮ. ಸೂಕ್ತ ತನಿಖೆಯಾದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಇನ್ನೂ ಎರಡು ವಿಕೆಟ್ ಬೀಳುತ್ತವೆ. ಇದರಲ್ಲಿ ಒಬ್ಬರು ಹಾಲಿ ಮತ್ತೊಬ್ಬರು ಮಾಜಿ ಸಚಿವರು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದರು. ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 545 ಪಿಎಸ್​ಐ ಹುದ್ದೆಗೆ 70 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಗೃಹ ಸಚಿವರು ಹೇಳಿದ್ದರು. ಬರೆದ ಅಭ್ಯರ್ಥಿಗಳು ಹಲವು ಬಾರಿ ಮನವಿ ಸಲ್ಲಿಸಿದರೂ ಗೃಹ ಇಲಾಖೆ ಕ್ರಮ ಜರುಗಿಸಿಲ್ಲ. ಗೃಹ ಸಚಿವ ಆರಗ 2 ತಿಂಗಳು ಸುಮ್ಮನೆ ಕಾಲ ಕಲೆದಿದ್ದರು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದರು ಎಂದು ನೆನಪಿಸಿಕೊಂಡರು.

ಪಿಎಸ್​ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಹಲವು ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದೆ. ಅಕ್ರಮದ ಬಗ್ಗೆ ತನಿಖೆ ಮಾಡಲು ಅಭ್ಯರ್ಥಿಗಳು ನಿರಂತರ ಒತ್ತಾಯಿಸುತ್ತಿದ್ದರು. ಈ ಅಕ್ರಮದ ಬಗ್ಗೆ ತನಿಖೆ ಮಾಡಿದರೆ ಇನ್ನೆರಡು ವಿಕೆಟ್ ಪತನವಾಗಲಿದೆ. ಗೃಹ ಮತ್ತು ಪಂಚಾಯತ್ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಮರ್ಪಕ ತನಿಖೆ ನಡೆಸಿದರೆ ನಾಲ್ಕು ವಿಕೆಟ್​ಗಳು ಪತನಗೊಳ್ಳಲಿವೆ ಎಂದು ವ್ಯಂಗ್ಯವಾಡಿದರು.

ಪಿಎಸ್​ಐ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಬಿಜೆಪಿ ಕಾರ್ಯದರ್ಶಿ ನಡೆಸುವ ಶಾಲೆಯಲ್ಲಿಯೇ ಸೋರಿಕೆಯಾಯಿತು. ಅದೇ ವ್ಯಕ್ತಿಯ ಮನೆಗೆ ನಂತರದ ದಿನಗಳಲ್ಲಿ ಗೃಹ ಸಚಿವರು ಹೋಗಿದ್ದಾರೆ ಎಂದು ನೇರ ಆರೋಪ ಮಾಡಿದರು. ಛಾಯಾಚಿತ್ರ ಸೇರಿದಂತೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ನುಡಿದರು. 2019-20 ಹಾಗೂ 20-21ನೇ ಸಾಲಿನ ಕೊಳವೆಬಾವಿ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರಗಳು ನಡೆದಿವೆ. ಸಚಿವರೊಬ್ಬರು ಕಿಕ್​ಬ್ಯಾಕ್ ಪಡೆದಿದ್ದಾರೆ. ಐಟಿ ರಿಟರ್ನ್ ಸಹ ತಿರುಚಲಾಗಿದೆ. ನಾವು ಆರೋಪ ಮಾಡಿದ ನಂತರ ಸರ್ಕಾರ ತನಿಖೆಗೆ ಆದೇಶಿಸಿತ್ತು. ತನಿಖೆ ಪ್ರಗತಿಯಲ್ಲಿದ್ದರೂ ಕಾಮಗಾರಿಗಳು ನಿಂತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಕೇವಲ ಈಶ್ವರಪ್ಪ ರಾಜೀನಾಮೆ ಪಡೆಯುವ ಉದ್ದೇಶದಿಂದ ನಮ್ಮ ಹೋರಾಟ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಈ 40 ಪರ್ಸೆಂಟ್ ಸರ್ಕಾರ ಹೋಗಬೇಕು. ಪ್ರತಿ ಇಲಾಖೆಯಲ್ಲಿ ಮನೆಮಾಡಿರುವ ಭ್ರಷ್ಟಾಚಾರ ಬೇರು ಸಹಿತ ಕಿತ್ತು ಹಾಕಬೇಕು ಎಂದು ಹೇಳಿದರು.

ಇದನ್ನೂ ಓದಿ: ಈಶ್ವರಪ್ಪ ಸುಳ್ಳಿನ ಫ್ಯಾಕ್ಟರಿ ಇದ್ದಂತೆ, ಅವರನ್ನ ಬಂಧಿಸಬೇಕು; ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಆಕ್ರೋಶ

ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ನಿರ್ಧಾರಕ್ಕೆ ಹೈಕಮಾಂಡ್ ಸೂಚನೆ ಕಾರಣ: ಬಿರುಸಾಗಲಿದೆ ಕರ್ನಾಟಕ ಚುನಾವಣಾ ಕಣ

Published On - 12:26 pm, Fri, 15 April 22