ಈಶ್ವರಪ್ಪ ರಾಜೀನಾಮೆ ನಿರ್ಧಾರಕ್ಕೆ ಹೈಕಮಾಂಡ್ ಸೂಚನೆ ಕಾರಣ: ಬಿರುಸಾಗಲಿದೆ ಕರ್ನಾಟಕ ಚುನಾವಣಾ ಕಣ

ಈಶ್ವರಪ್ಪ ರಾಜೀನಾಮೆ ನಿರ್ಧಾರಕ್ಕೆ ಹೈಕಮಾಂಡ್ ಸೂಚನೆ ಕಾರಣ: ಬಿರುಸಾಗಲಿದೆ ಕರ್ನಾಟಕ ಚುನಾವಣಾ ಕಣ
ಕೆ.ಎಸ್.ಈಶ್ವರಪ್ಪ

ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್ ಸೂಚನೆಯೇ ಮುಖ್ಯ ಕಾರಣ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳುತ್ತಿವೆ.

Ghanashyam D M | ಡಿ.ಎಂ.ಘನಶ್ಯಾಮ

|

Apr 15, 2022 | 10:51 AM


ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ಈ ಮೊದಲು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದ ಅವರು ಏಕಾಏಕಿ ತಮ್ಮ ನಿರ್ಧಾರ ಬದಲಿಸಿದರು. ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್ ಸೂಚನೆಯೇ ಮುಖ್ಯ ಕಾರಣ ಎಂದು ಬಿಜೆಪಿಯ ಉನ್ನತ ಮೂಲಗಳು ಹೇಳುತ್ತಿವೆ. ಹೊಸಪೇಟೆಯಲ್ಲಿ ನಾಳೆ ಮತ್ತು ನಾಡಿದ್ದು (ಏಪ್ರಿಲ್ 16-17) ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಈ ವೇಳೆ ಪಕ್ಷಕ್ಕೆ ಮುಜುಗರ ಆಗದಿರಲೆಂದು ರಾಜೀನಾಮೆ ಪಡೆಯುವ ನಿರ್ಧಾರವನ್ನು ಪಕ್ಷದ ಉನ್ನತ ನಾಯಕತ್ವ ತೆಗೆದುಕೊಂಡಿತು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸಹ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಬಿಜೆಪಿಯ ಚುನಾವಣಾ ಸಿದ್ಧತೆ ಚುರುಕುಗೊಳ್ಳಲಿದೆ. ಮುಂದಿನ ಚುನಾವಣೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಮತ್ತು ಅಭಿವೃದ್ಧಿ ಪರ ಪ್ರಯತ್ನಗಳನ್ನೇ ಬಿಜೆಪಿ ಪ್ರಧಾನವಾಗಿ ಬಿಂಬಿಸಲು ನಿರ್ಧರಿಸಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವು ರೂಪಿಸಿರುವ ಕಾರ್ಯತಂತ್ರಕ್ಕೆ ಧಕ್ಕೆಯಾಗಬಾರದು ಎನ್ನುವ ಕಾರಣಕ್ಕೆ ಬಿಜೆಪಿ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶವೂ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಹಲವು ಗುತ್ತಿಗೆದಾರರಿಂದ ಕಮಿಷನ್ ಆರೋಪ ಕೇಳಿಬಂದಿರುವುದು ಪಕ್ಷದ ಉನ್ನತ ನಾಯಕತ್ವಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರಿಂದ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ತುರ್ತಾಗಿ ಮಾಹಿತಿ ಪಡೆದುಕೊಂಡ ಉನ್ನತ ನಾಯಕರು ತಮ್ಮ ನಿರ್ಧಾರವನ್ನು ನಿನ್ನೆ ಮಧ್ಯಾಹ್ನ (ಏಪ್ರಿಲ್ 14) ಕರ್ನಾಟಕದ ನಾಯಕರಿಗೆ ರವಾನಿಸಿದರು. ಕುರುಬ ಜನಾಂಗದ ಪ್ರಮುಖ ನಾಯಕರಾಗಿರುವ ಈಶ್ವರಪ್ಪ ಆರಂಭದಲ್ಲಿ ರಾಜೀನಾಮೆ ಕೊಡುವುದಿಲ್ಲ ಎಂದು ಖಂಡತುಂಡವಾಗಿ ಹೇಳುತ್ತಿದ್ದರು. ‘ನೀವು ಈ ಆರೋಪಗಳಿಂದ ದೋಷಮುಕ್ತರಾಗಿ ಹೊರಬಂದರೆ ತಕ್ಕ ಪ್ರತಿಫಲ ಸಿಗಲಿದೆ’ ಎಂಬ ಅಮಿಷವೊಡ್ಡಿ, ರಾಜೀನಾಮೆಗೆ ಮನವೊಲಿಸಿದರು ಎಂದು ಮೂಲಗಳು ಹೇಳಿವೆ.

ಹತ್ತಾರು ವರ್ಷಗಳಿಂದ ಬಿಜೆಪಿಯ ಸಂಘಟನೆಗಾಗಿ ಶ್ರಮಿಸಿದ್ದಾರೆ. ಹಿಂದುಳಿದ ಜನಾಂಗಗಳಲ್ಲಿ ಬಿಜೆಪಿಗೆ ಇಂದಿಗೂ ಮನ್ನಣೆ ಉಳಿಯುವಂತೆ ಮಾಡುವಲ್ಲಿ ಈಶ್ವರಪ್ಪ ಅವರ ಕೊಡುಗೆ ದೊಡ್ಡದು. ಅದಲ್ಲದೆ, ತಮ್ಮ ಸುದೀರ್ಘ ರಾಜಕಾರಣ ಪಯಣದಲ್ಲಿ ಎಂದಿಗೂ ಪಕ್ಷವನ್ನು ಬಿಟ್ಟು ಹೋಗಿರಲಿಲ್ಲ ಅಥವಾ ಪಕ್ಷಕ್ಕೆ ಗಂಭೀರವಾಗಿ ಇರಿಸುಮುರಿಸಾಗುವಂತೆ ಹೇಳಿಕೆ ನೀಡಿರಲಿಲ್ಲ. ಹೀಗಾಗಿಯೇ ಪಕ್ಷವು ಅವರನ್ನು ಉಚ್ಚಾಟನೆ ಮಾಡಲಿಲ್ಲ. ಬದಲಿಗೆ ತಾವಾಗಿಯೇ ರಾಜೀನಾಮೆ ನೀಡಿ ಹೋಗಲಿ ಎಂದು ಮನವೊಲಿಸುವ ತಂತ್ರ ಅನುಸರಿಸಿತು.

ಪ್ರಕರಣದ ಪ್ರಾಥಮಿಕ ತನಿಖೆ ಮುಕ್ತಾಯವಾಗುವವರೆಗೆ ಕಾಯೋಣ ಎಂದು ಬಿಜೆಪಿ ಉನ್ನತ ನಾಯಕರು ಒಂದು ಹಂತದಲ್ಲಿ ತೀರ್ಮಾನಕ್ಕೆ ಬಂದಿದ್ದರು. ಆದರೆ ವಿಧಾನಸೌಧದ ಎದುರು ಕಾಂಗ್ರೆಸ್ ಧರಣಿಗೆ ಮುಂದಾದ ನಂತರ ಅವರ ನಿಲುವು ಬದಲಾಯಿತು. ದೆಹಲಿಯಲ್ಲಿರುವ ಕೆಲ ಬಿಜೆಪಿ ನಾಯಕರು ಈ ಕ್ಷಣಕ್ಕೂ ಈಶ್ವರಪ್ಪ ರಾಜೀನಾಮೆ ವಿರೋಧಿಸುತ್ತಿದ್ದಾರೆ. ಕೇವಲ ಆರೋಪವನ್ನೇ ಆಧರಿಸಿ ಪ್ರಮುಖ ಸಚಿವರೊಬ್ಬರಿಂದ ರಾಜೀನಾಮೆ ಪಡೆದರೆ, ಅದು 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಪುಷ್ಟಿ ನೀಡಿದಂತೆ ಆಗುತ್ತದೆ. ಸಚಿವ ಸಂಪುಟ ಪುನರ್ ರಚನೆ ವೇಳೆ ಈಶ್ವರಪ್ಪ ಅವರನ್ನು ಕೈಬಿಡಬಹುದಿತ್ತು ಎಂಬ ಮಾತುಗಳು ಸಹ ಹೈಕಮಾಂಡ್​ ಮಟ್ಟದಲ್ಲಿ ಚರ್ಚೆಯಾಗಿತ್ತು.

ಮುಂದಿನ ವರ್ಷದ ಆರಂಭದಲ್ಲಿಯೇ ಕರ್ನಾಟಕದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಈಶ್ವರಪ್ಪ ಪ್ರಕರಣವನ್ನು ಸಾಧ್ಯವಾಗುವ ಎಲ್ಲ ರೀತಿಯಲ್ಲಿಯೂ ಬಳಸಿಕೊಂಡು ಬಿಜೆಪಿಯನ್ನು ಹೀಗಳೆಯಲು ಕಾಂಗ್ರೆಸ್ ಯತ್ನಿಸುತ್ತಿದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್​ಗೆ ಒಂದು ಪ್ರಬಲ ಸಿಗಲು ಬಿಡಬಾರದು ಎಂಬುದು ಬಿಜೆಪಿ ಹೈಕಮಾಂಡ್​ನ ಅಂತಿಮ ನಿರ್ಧಾರವಾಯಿತು. ಈಶ್ವರಪ್ಪ ರಾಜೀನಾಮೆಯಿಂದ, ‘ಭ್ರಷ್ಟಾಚಾರ ಸಹಿಸುವುದಿಲ್ಲ’ ಎನ್ನುವ ನಿಲುವನ್ನು ಬಿಜೆಪಿ ಪುನರುಚ್ಚರಿಸಿದಂತೆ ಆಗಿದೆ.

ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಪಾಟೀಲ್-ಈಶ್ವರಪ್ಪ ಭೇಟಿ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬೈಲಹೊಂಗಲ ಆರಾದಿಮಠದ ಮಹಾಂತೇಶ

ಇದನ್ನೂ ಓದಿ: KS Eshwarappa Resigns: ಶುಕ್ರವಾರ ಸಂಜೆ ರಾಜೀನಾಮೆ ನೀಡುವೆ -ಸಚಿವ ಕೆ ಎಸ್​ ಈಶ್ವರಪ್ಪ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada