ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ (Namma Metro) ಪಿಲ್ಲರ್ ಬಿದ್ದು ತಾಯಿ-ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು (FIR) ದಾಖಲಾಗಿದೆ. ಮೃತ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಅವರು ದೂರು ನೀಡಿದ್ದು, ಸೈಟ್ ಇಂಜಿನಿಯರ್ಸ್, ಕಂಟ್ರ್ಯಾಕ್ಟರ್ಸ್, BMRCL ಆಫೀಸರ್ಸ್, ಸೈಟ್ ಇನ್‌ಚಾರ್ಜ್ ಆಫೀಸರ್ಸ್ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಗುತ್ತಿಗೆದಾರ, ಅಧಿಕಾರಿಗೆ BMRCLನೋಟಿಸ್ ನೀಡಿದ್ದು, ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಐಐಎಸ್ಸಿಗೆ ಮನವಿ ಮಾಡಲಾಗಿದೆ. ಆಂತರಿಕ ತಾಂತ್ರಿಕ ತಂಡದಿಂದಲೂ ಘಟನೆ ಬಗ್ಗೆ ತನಿಖೆ ನಡೆಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಮೃತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. BMRCL ಸಹ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಬೆಂಗಳೂರಿನ ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕಂಬಿ ಬಿದ್ದು ಇಂದು(ಜನವರಿ 10) ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ. ಮೃತ ತೇಜಸ್ವಿನಿ ಅವರು ಹಾಗೂ ಅವರ ಪತಿ ತಮ್ಮಿಬ್ಬರು ಅವಳಿ ಮಕ್ಕಳ ಜೊತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಪಿಲ್ಲರ್ ಅವರ ಬೈಕ್ ಮೇಲೆ ಬಿದ್ದಿತ್ತು. ಅವರ ಕುಟುಂಬದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತಟ್ಟಿದ್ದಾರೆ. ಒಂದು ವರ್ಷದ ಮಗು ಮತ್ತು ಲೋಹಿತ್ ಕುಮಾರ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಮೆಟ್ರೋ ನಿರ್ಲಕ್ಷ್ಯ, ಗುತ್ತಿಗೆದಾರನ ಬೇಜವಾಬ್ದಾರಿ, ಅಧಿಕಾರಿಗಳ ಕೆಲಸಗಳ್ಳತನಕ್ಕೆ ಇಬ್ಬರ ಬದುಕೇ ಅಂತ್ಯವಾಗಿದೆ. ಪತಿಯ ಜೊತೆಗೆ ಬೈಕ್‌ನಲ್ಲಿ ಹೋಗ್ತಿದ್ದ 28 ವರ್ಷದ ತಾಯಿ ತೇಜಸ್ವಿನಿ, ಮತ್ತಾಕೆಯ ಮಗ ವಿಹಾನ್ ಕೊನೆಯುಸಿರೆಳೆದಿದ್ದಾರೆ. ಅಷ್ಟಕ್ಕೂ, ಇಲ್ಲಿ ಮೆಟ್ರೋ ಅಧಿಕಾರಿಗಳ, ಗುತ್ತಿಗೆದಾರರ, ಕಾಮಗಾರಿ ನಡೆಸ್ತಿದ್ದ ಕಂಪನಿಯ ಸಿಬ್ಬಂದಿಯ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಅಷ್ಟು ದೊಡ್ಡ ರಾಡ್ ಕುಸಿದು ಬೀಳುತ್ತೆ ಎಂದು ಗೊತ್ತಿದ್ರೂ, ಬೇಜವಾಬ್ದಾರಿ ತೋರಿದ್ದಕ್ಕೆ ಇಂಥಾ ದುರಂತ ಸಂಭವಿಸಿದೆ.
Published On - 8:54 pm, Tue, 10 January 23