ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಜೂನ್ 20ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಮೋದಿ ಆಗಮಿಸುತ್ತಿದ್ದಾರೆಂದು ಕಳಪೆ ರಸ್ತೆ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಬಿಎಂಪಿ (BBMP) 3 ಲಕ್ಷ ರೂ. ದಂಡ ವಿಧಿಸಿದೆ. ಕಳಪೆ ಕಾಮಗಾರಿ ಹಿನ್ನೆಲೆ ಬಿಬಿಎಂಪಿ ಮೂವರು ಅಧಿಕಾರಿಗಳಿಗೆ ಮುಖ್ಯ ಅಭಿಯಂತರ ಪ್ರಹ್ಲಾದ್ ಅವರು ಶೋಕಾಸ್ ನೋಟಿಸ್ ಜಾರಿ ಮಾಡಿ ನಿನ್ನೆ ಆದೇಶ ಹೊರಡಿಸಿದ್ದರು. ನೋಟಿಸ್ ಜಾರಿ ಮಾಡಿದ ಬೆನ್ನಲ್ಲೆ ಗುತ್ತಿಗೆದಾರ ರಮೇಶ್ ಎಂಬುವವರಿಗೆ ಬಿಬಿಎಂಪಿ ದಂಡ ಹಾಕಿದೆ.
11.50 ಕೋಟಿ ರೂ. ವೆಚ್ಚದಲ್ಲಿ 9 ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ನಿರ್ಮಾಣಗೊಂಡು ವಾರದೊಳಗೆ ಕಿತ್ತು ಹೋಗುತ್ತಿದೆ. ಈ ಹಿನ್ನೆಲೆ ಪಿಎಂ ಕಾರ್ಯಾಲಯ ಕಾಮಗಾರಿ ಬಗ್ಗೆ ವರದಿ ಕೇಳಿತ್ತು. ಇನ್ನು ಕಳಪೆ ಕಾಮಗಾರಿ ಬಗ್ಗೆ ಟಿವಿ9 ಕನ್ನಡ ವರದಿ ಪ್ರಸಾರ ಮಾಡಿತ್ತು. ಟಿವಿ9 ಸುದ್ದಿ ಆಧರಿಸಿ ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದು, ಶೋಕಾಸ್ ನೋಟಿಸ್ನಲ್ಲಿ ಟಿವಿ9 ಹೆಸರು ಉಲ್ಲೇಖ ಆಗಿತ್ತು.
ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿಗೆ ಬಂತು ಮತ್ತಷ್ಟು ಬಲ; ಕನ್ನಡದಲ್ಲೂ ಬರುವ ಹೊಸ ಚಿತ್ರಕ್ಕೆ ಕೈ ಜೋಡಿಸಿದ ಸೂರ್ಯ-ಜ್ಯೋತಿಕಾ
ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ಬೆಂಗಳೂರಿಗೆ ಬಂದಾಗ, ಅವರು ಸಂಚರಿಸುವ ರಸ್ತೆಗಳು ಲಕಲಕ ಅಂತ ಹೊಳೆಯುತ್ತಿದ್ದವು. ಆದರೆ ಮೋದಿ ವಾಪಸ್ ಹೋದ ಮೇಲೆ ತರಾತುರಿಯಲ್ಲಿ ಮಾಡಿದ್ದ ರಸ್ತೆಗಳು ಅದ್ವಾನ ಎದ್ದುಹೋಗಿವೆ. 23 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ರಸ್ತೆಯ ಸ್ಥಿತಿ ನೋಡುವಂತಿಲ್ಲ. ಸದ್ಯ ಬಿಬಿಎಂಪಿ ಡಾಂಬರ್ ರಸ್ತೆ ಕಳಪೆ ಕಾಮಗಾರಿ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ, ಪ್ರಧಾನಿ ಕಾರ್ಯಾಲಯ ವರದಿ ಕೇಳಿದ್ದು ಬಿಬಿಎಂಪಿ ಆಯುಕ್ತರಿಗೆ ವರದಿ ನೀಡುವಂತೆ ಸಿಎಂ ಕಚೇರಿ ಸೂಚನೆ ನೀಡಿತ್ತು.
ಬೆಂಗಳೂರಿನ ವಿವಿಯಿಂದ ಮರಿಯಪ್ಪನಪಾಳ್ಯದ ಕಡೆ ಹೋಗುವ ರಸ್ತೆಯಲ್ಲಿ ಮೋದಿ ಬರುತ್ತಾರೆ ಎನ್ನುವ ಕಾರಣಕ್ಕೆ ಡಾಂಬರೀಕರಣ ಮಾಡಿದ್ದರು. ಆದರೆ ಮೋದಿ ಬಂದು ಹೋಗಿ ವಾರದೊಳಗೆ ಡಾಂಬರ್ ಕಿತ್ತುಕೊಂಡು ಬರುತ್ತಿದೆ. ಪ್ರಧಾನಿ ಭೇಟಿ ಕೊಟ್ಟ ಅಂಬೇಡ್ಕರ್ ಎಕನಾಮಿಕ್ ಕಾಲೇಜಿನ ರಸ್ತೆಯಲ್ಲೂ ಬೃಹತ್ ಗುಂಡಿ ಬಿದ್ದಿದೆ. ಅಂಬೇಡ್ಕರ್ ಕಾಲೇಜಿಗೆ ಮೋದಿ ಭೇಟಿ ಕೊಡುತ್ತಾರೆ ಅಂತಾ ಗುಂಡಿಗಳನ್ನ ಮುಚ್ಚಲಾಗಿತ್ತು. ಆದ್ರೀಗ ಮುಚ್ಚಿದ ಗುಂಡಿ ಕೂಡಾ ಬಾಯಿ ತೆರೆದಿದೆ.
Published On - 8:40 am, Sat, 25 June 22