ಶೇ 25ರಷ್ಟು ಬಿಲ್ ಬಾಕಿ: ಬಿಬಿಎಂಪಿ ಕಚೇರಿಯಲ್ಲಿ ಗುತ್ತಿಗೆದಾರರ ಪ್ರತಿಭಟನೆ, ಸರ್ಕಾರದ ನಿರ್ಧಾರ ಎಂದ ಕಮಿಷನರ್

ಕಾಮಗಾರಿಗಳಿಗೆ ಶೇ 25ರಷ್ಟು ಬಾಕಿ ಬಿಲ್ ಕೊಡದ ಬಿಬಿಎಂಪಿಯ ವಿರುದ್ಧ ಸಮರ ಸಾರಿರುವ ಬಿಬಿಎಂಪಿಯ ಗುತ್ತಿಗೆದಾರರು ಸೋಮವಾರದಿಂದ ಬಿಬಿಎಂಪಿಯ ಕಾಮಗಾರಿಗಳಿಗೆ ಬ್ರೇಕ್ ಹಾಕಿದ್ದಾರೆ. ಬಿಲ್ ಕೊಡದೇ ನಿರ್ಲಕ್ಷ್ಯ ವಹಿಸಿರುವ ಪಾಲಿಕೆ ವಿರುದ್ಧ ಅಸಮಾಧಾನ ಹೊರಹಾಕಿರುವ ಗುತ್ತಿಗೆದಾರರು ಬಿಬಿಎಂಪಿಯ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಎಚ್ಚರಿಕೆ ಕೊಟ್ಟಿದ್ದಾರೆ. ಅತ್ತ ಸರ್ಕಾರದ ಮೇಲೆ ಹೊಣೆ ಹೊರಿಸಿರುವ ಪಾಲಿಕೆ, ಬಾಕಿ ಬಿಲ್ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಸಬೂಬು ಹೇಳಿದೆ.

ಶೇ 25ರಷ್ಟು ಬಿಲ್ ಬಾಕಿ: ಬಿಬಿಎಂಪಿ ಕಚೇರಿಯಲ್ಲಿ ಗುತ್ತಿಗೆದಾರರ ಪ್ರತಿಭಟನೆ, ಸರ್ಕಾರದ ನಿರ್ಧಾರ ಎಂದ ಕಮಿಷನರ್
ಬಿಬಿಎಂಪಿ ಕಚೇರಿಯಲ್ಲಿ ಗುತ್ತಿಗೆದಾರರ ಪ್ರತಿಭಟನೆ
Follow us
| Updated By: ಗಣಪತಿ ಶರ್ಮ

Updated on: Sep 03, 2024 | 7:02 AM

ಬೆಂಗಳೂರು, ಸೆಪ್ಟೆಂಬರ್ 3: ಬೆಂಗಳೂರಿನ ಕಾಮಗಾರಿಗಳಿಗೆ ಜೀವ ನೀಡುದ್ದ ಬಿಬಿಎಂಪಿ ಗುತ್ತಿಗೆದಾರರು ಇದೀಗ ಪಾಲಿಕೆ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಗುತ್ತಿಗೆದಾರರು ಮಾಡಿದ್ದ ಕಾಮಗಾರಿಗಳಿಗೆ ಶೇಕಡ 75 ರಷ್ಟು ಬಿಲ್ ಕೊಟ್ಟಿರೋ ಪಾಲಿಕೆ, ಉಳಿದ ಶೇ 25 ಬಾಕಿ ಉಳಿಸಿಕೊಂಡಿರುವುದನ್ನ ವಿರೋಧಿಸಿ ಗುತ್ತಿಗೆದಾರರು ಸೋಮವಾರದಿಂದ ಪಾಲಿಕೆಯ ಕೆಲಸಗಳಿಗೆ ಬ್ರೇಕ್ ಹಾಕಿದ್ದಾರೆ. ಬಾಕಿ ಬಿಲ್​ಗೆ ಡಿಸಿಎಂ ಬಳಿಯೂ ಮನವಿ ಮಾಡಿ ಸುಸ್ತಾದ ಗುತ್ತಿಗೆದಾರರು ಇಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ. ಬಿಲ್ ಬಾಕಿ ಬಿಡುಗಡೆಯಾಗುವ ತನಕ ಯಾವುದೇ ಕಾಮಗಾರಿ ಮಾಡಲ್ಲ, ನಾವು ಬಿಬಿಎಂಪಿಗಾಗಿ ದುಡಿದಿದ್ದೇವೆ, ಇಲ್ಲೇ ಪ್ರತಿಭಟಿಸ್ತೀವೆ ಎಂದಿರುವ ಗುತ್ತಿಗೆದಾರರು ಬಾಕಿ ಬಿಲ್ ಕೊಡೋ ತನಕ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ಇನ್ನು ಗುತ್ತಿಗೆದಾರರು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಗುತ್ತಿಗೆದಾರರನ್ನು ವಶಕ್ಕೆ ಪಡೆದರು. ಇತ್ತ ಪಟ್ಟುಬಿಡದ ಗುತ್ತಿಗೆದಾರರು ಮತ್ತೆ ಪಾಲಿಕೆ ಕಚೇರಿಗೆ ಬಂದು ಪ್ರತಿಭಟಿಸುವ ಮೂಲಕ ಆಕ್ರೋಶ ಹೊರಹಾಕಿದರು. ಯಾವುದೇ ಕೆಲಸ ಮಾಡಲ್ಲ ಅಂತಾ ಪಟ್ಟುಹಿಡಿದಿರುವ ಗುತ್ತಿಗೆದಾರರು, ಸರ್ಕಾರ ಹಾಗೂ ಪಾಲಿಕೆ ನಮ್ಮ ಸಮಸ್ಯೆ ಬಗೆಹರಿಸುವ ವರೆಗೂ ಪ್ರತಿಭಟನೆ ನಿಲ್ಲಿಸಲ್ಲ, ಅಲ್ಲದೇ ಪಾಲಿಕೆ ವ್ಯಾಪ್ತಿಯ ಯಾವುದೇ ಕಾಮಗಾರಿ ಮಾಡಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಕಾಮಗಾರಿಗಳ ಮೇಲೆ ಪರಿಣಾಮವಾಗಲ್ಲ: ಬಿಬಿಎಂಪಿ ಆಯುಕ್ತ

ಇತ್ತ ಗುತ್ತಿಗೆದಾರರ ಪ್ರತಿಭಟನೆಯನ್ನು ಸರಳವಾಗಿಯೇ ತೆಗೆದುಕೊಂಡಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸರ್ಕಾರದ ಸೂಚನೆಯಂತೆ, ನಾಗಮೋಹನ್ ದಾಸ್ ವರದಿಯಂತೆ ಶೇ 25 ಬಿಲ್ ತಡೆಹಿಡಿದಿದ್ದೇವೆ. ಸದ್ಯ ಗುತ್ತಿಗೆದಾರರ ಮನವಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದೇವೆ, ಬಾಕಿ ಬಿಡುಗಡೆ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೇ ಗುತ್ತಿಗೆದಾರರ ಪ್ರತಿಭಟನೆಯು ಕಾಮಗಾರಿಗೆ ಏನೂ ಪರಿಣಾಮ ಬೀರುವುದಿಲ್ಲ. ಇರುವ ಸಂಪನ್ಮೂಲ ಬಳಸಿಕೊಂಡು ಕೆಲಸ ಮಾಡಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪ್ರದಕ್ಷಿಣೆ ಹಾಕಿದ ಉಪಲೋಕಾಯುಕ್ತ ನ್ಯಾಯಮೂರ್ತಿಗಳು: ಪೊಲೀಸರು, ಬಿಬಿಎಂಪಿ ಅಧಿಕಾರಿಗಳಿಗೆ ಫುಲ್ ಕ್ಲಾಸ್

ಒಟ್ಟಿನಲ್ಲಿ, ಇಷ್ಟು ದಿನ ಕಾಮಗಾರಿಯ ಅರೆಬರೆ ಬಿಲ್ ಪಡೆದೇ ಕಾಮಗಾರಿ ಮುಂದುವರಿಸಿದ್ದ ಬಿಬಿಎಂಪಿಯ ಗುತ್ತಿಗೆದಾರರು, ಇದೀಗ ತಮ್ಮ ಹಕ್ಕಿಗಾಗಿ ಹೋರಾಟಕ್ಕಿಳಿದಿದ್ದಾರೆ. ಈಗಾಗಲೇ ಆಮೆಗತಿಯಲ್ಲಿ ಕಾಮಗಾರಿ ಸಾಗುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಲಿಕೆ, ಇದೀಗ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಬಗ್ಗೆ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ