Crime News: ಒಮಿಕ್ರಾನ್ ಪಾಸಿಟಿವ್ ವ್ಯಕ್ತಿ ಎಸ್ಕೇಪ್ ಪ್ರಕರಣದಲ್ಲಿ ನಾಲ್ವರ ಸೆರೆ, ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯ ಹತ್ಯೆ

Omicron Case: ನವೆಂಬರ್ 20 ಕ್ಕೆ ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಪ್ರಜೆಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಶಾಂಗ್ರೀಲಾ ಹೊಟೇಲ್​ನಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು.

Crime News: ಒಮಿಕ್ರಾನ್ ಪಾಸಿಟಿವ್ ವ್ಯಕ್ತಿ ಎಸ್ಕೇಪ್ ಪ್ರಕರಣದಲ್ಲಿ ನಾಲ್ವರ ಸೆರೆ, ಬೆಂಗಳೂರಿನಲ್ಲಿ ವಿದೇಶಿ ಪ್ರಜೆಯ ಹತ್ಯೆ
ಸಾಂದರ್ಭಿಕ ಚಿತ್ರ
Edited By:

Updated on: Dec 12, 2021 | 10:49 PM

ಬೆಂಗಳೂರು: ದಕ್ಷಿಣ ಆಫ್ರಿಕಾದ ಮಹೇಂದ್ರ ಚಿಬಾಬಾಯಿ ಎಸ್ಕೇಪ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಸಿಂಜಿನ್ ಲ್ಯಾಬ್‌ನ ನಾಲ್ವರು ಸಿಬ್ಬಂದಿ ಸೆರೆ ಹಿಡಿಯಲಾಗಿದೆ. ನಕಲಿ ರಿಪೋರ್ಟ್ ಕೊಟ್ಟ ಆರೋಪ ಮೇಲೆ ನಾಲ್ವರ ಸೆರೆಯಾಗಿದೆ. ಸ್ವ್ಯಾಬ್‌ ಪಡೆದು ನೆಗೆಟಿವ್ ವರದಿ ಕೊಟ್ಟಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ ಹೈಗ್ರೌಂಡ್ಸ್ ಪೊಲೀಸರಿಂದ ತನಿಖೆ ಆರಂಭವಾಗಿದೆ.

ಒಮಿಕ್ರಾನ್ ಪಾಸಿಟಿವ್ ಆಗಿದ್ದರೂ ದೇಶ ತೊರೆದಿದ್ದ ಆಫ್ರಿಕಾ ಪ್ರಜೆ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ. ಆಫ್ರಿಕಾ ಪ್ರಜೆ ಹಾಗೂ ಶಾಂಗ್ರಿಲಾ ಹೊಟೇಲ್ ಆಡಳಿತ ಮಂಡಳಿ ವಿರುದ್ದ ಎಫ್​ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 269, 271, 114 ಹಾಗೂ ಕರ್ನಾಟಕ ಎಪಿಡಿಮಿಕ್ ಡಿಸಿಸ್ ಆಕ್ಟ್ ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ನವೀನ್ ಎಂಬುವರಿಂದ ದೂರು ದಾಖಲಾಗಿದೆ.

ನವೆಂಬರ್ 20 ಕ್ಕೆ ಬೆಂಗಳೂರಿಗೆ ಬಂದಿದ್ದ ಆಫ್ರಿಕಾ ಪ್ರಜೆಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಶಾಂಗ್ರೀಲಾ ಹೊಟೇಲ್​ನಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ನವೆಂಬರ್ 27 ರಂದು ಹೋಟೆಲ್ ತೊರೆದು ದೇಶ ಬಿಟ್ಟಿದ್ದ. ನಂತರ ಈತನಿಗೆ ಓಮಿಕ್ರಾನ್ ಇರುವುದು ಪತ್ತೆಯಾಗಿತ್ತು. ಆದರೆ ಆ ವೇಳೆಗೆ ಆಫ್ರಿಕಾ ಪ್ರಜೆ ದುಬೈ ಸೇರಿದ್ದ.

ಚಿಬಾಬಾಯಿ, 72 ಗಂಟೆಯಲ್ಲಿ 2 ಕಡೆ ಟೆಸ್ಟ್ ಮಾಡಿಸಿದ್ದ. ಆತನಿಗೆ ಜಯನಗರದ ಎಸ್.ಆರ್. ಲ್ಯಾಬ್‌ ಪಾಸಿಟಿವ್ ವರದಿ ನೀಡಿತ್ತು. ಏರ್‌ಪೋರ್ಟ್‌ ರಸ್ತೆ ಸಿಂಜಿನ್‌ ಲ್ಯಾಬ್‌ನಿಂದ ನೆಗೆಟಿವ್ ವರದಿ ಬಂದಿತ್ತು. ಹೀಗಾಗಿ, ಆತ ಹೋಟೆಲ್‌ನಲ್ಲಿ ನೆಗೆಟಿವ್ ವರದಿ ತೋರಿಸಿ ಎಸ್ಕೇಪ್ ಆಗಿದ್ದ ಎಂದು ತಿಳಿದುಬಂದಿದೆ.

ಬೆಂಗಳೂರಲ್ಲಿ ವಿದೇಶಿ ಪ್ರಜೆಗಳ ಕಿತ್ತಾಟ ಕೊಲೆಯಲ್ಲಿ ಅಂತ್ಯ
ಬೆಂಗಳೂರಲ್ಲಿ ವಿದೇಶಿ ಪ್ರಜೆಗಳ ಕಿತ್ತಾಟ ಕೊಲೆಯಲ್ಲಿ ಅಂತ್ಯವಾದ ದುರ್ಘಟನೆ ನಡೆದಿದೆ. ರಾತ್ರಿ 10 ಗಂಟೆ ಸುಮಾರಿಗೆ ವಿದೇಶಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿದ್ದಾನೆ. ಕಮ್ಮನಹಳ್ಳಿ ಕುಳ್ಳಪ್ಪ ಸರ್ಕಲ್​ನಲ್ಲಿ ಚಾಕುವಿನಿಂದ ಇರಿದು ಆಫ್ರಿಕನ್ ಪ್ರಜೆ ವಿಕ್ಟರ್‌ (35) ಹತ್ಯೆ ಆಗಿದ್ದಾನೆ. ಮತ್ತೋರ್ವ ಆಫ್ರಿಕನ್ ಪ್ರಜೆಯಿಂದಲೇ ಕೊಲೆ ನಡೆದಿರುವ ಬಗ್ಗೆ ತಿಳಿದುಬಂದಿದೆ. ಒಟ್ಟಿಗೆ ನಡೆದುಕೊಂಡು ಬರುತ್ತಿದ್ದಾಗ ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿದೆ. ಮಾತಿಗೆ ಮಾತು ಬೆಳೆದು ಘಟನೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ನಗರದ ಬಾಣಸವಾಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Crime News: ಆಸ್ಪತ್ರೆಯಲ್ಲಿ ರೋಗಿಯ ಮಾಂಗಲ್ಯ ಕದ್ದ ಆರೋಪಿ ಬಂಧನ, ಕಾರಣ ಇಲ್ಲದೇ ತಮಟೆ ಬಾರಿಸಿದ್ದಕ್ಕೆ ಹಲ್ಲೆ

ಇದನ್ನೂ ಓದಿ: Bengaluru Crime: ಮನೆಯೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆ