ಪತ್ನಿ ಸುಂದರವಾಗಿದ್ದಾಳೆ, ಬೇರೆ ಸಂಬಂಧ ಬೆಳೆಸುತ್ತಾಳೆಂದು ಪತ್ನಿಯನ್ನೇ ಕೊಂದ ಪತಿ: 6 ವರ್ಷ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ
ಆರೋಪಿ ಚನ್ನೇಗೌಡ ತನ್ನ ಪತ್ನಿ ಮಂಜುಳಾಳನ್ನು ಸುಮಾರು 21 ವರ್ಷಗಳ ಹಿಂದೆ ಮದುವೆಯಾಗಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದು, ಸಂಸಾರ ಸಮೇತ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸನ್ಯಾಸಿ ಕ್ವಾರ್ಟಸ್‌ನ ಮನೆಯಲ್ಲಿ ವಾಸಗಿದ್ದರು.
ಬೆಂಗಳೂರು: ಪತ್ನಿ ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಮೇಲೆ ಆ್ಯಸಿಡ್(Acid) ಎರಚಿ ಪತಿಯೇ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ 46 ನೇ ಸಿಟಿ ಸಿವಿಲ್ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಕೆಂಪೇಗೌಡ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಯ ಆರೋಪಿ ಚನ್ನೇಗೌಡ ತನ್ನ ಪತ್ನಿ ಮಂಜುಳಾಳನ್ನು ಸುಮಾರು 21 ವರ್ಷಗಳ ಹಿಂದೆ ಮದುವೆಯಾಗಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದು, ಸಂಸಾರ ಸಮೇತ ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸನ್ಯಾಸಿ ಕ್ವಾರ್ಟಸ್‌ನ ಮನೆಯಲ್ಲಿ ವಾಸಗಿದ್ದರು. ಚನ್ನೇಗೌಡ ತನ್ನ ಹೆಂಡತಿಯನ್ನು ನೀನು ಸುಂದರವಾಗಿದ್ದೀಯಾ, ನೀನು ಯಾವುದೋ ಬೇರೆ ಗಂಡಸಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ನಿಂದಿಸಿ, ದೈಹಿಕ ಹಲ್ಲೆ ನಡೆಸಿ ಪ್ರತಿ ದಿನ ಜಗಳ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ.
ಪತ್ನಿಯನ್ನು ನೀನು ಸುಂದರವಾಗಿದ್ದರೆ ತಾನೇ ಬೇರೆ ಗಂಡಸರ ಜೊತೆ ಮಾತನಾಡುವುದು ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲವೆಂದು ಹೇಳಿ, ಕುಮಾರೇಶ ಅಲಿಯಾಸ್ ಕುಮಾರ ಎಂಬುವರ ಮೂಲಕ ಆ್ಯಸಿಡ್ ಖರೀದಿಸಿ ಅದನ್ನು ಒಂದು ಪ್ಲಾಸ್ಟಿಕ್ ಕ್ಯಾನ್‌ಗೆ ಹಾಕಿಸಿಕೊಂಡು ಬಂದು 2017 ಜುಲೈ 14 ರಂದು ಮದ್ಯಾಹ್ನ 3 ಗಂಟೆಗೆ ತನ್ನ ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಆಕೆಯ ಮೈ ಮೇಲೆ ಆ್ಯಸಿಡ್ ಸುರಿದು ಕೊಲೆಗೆ ಯತ್ನಿಸಿದ್ದ. ಘಟನೆಯಲ್ಲಿ ಮಂಜುಳಾರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ 2017 ಸೆಪ್ಟಂಬರ್ 29 ರಂದು ಮೃತಪಟ್ಟಿದ್ದರು.
ಈ ಘಟನೆ ಸಂಬಂಧ ಆರೋಪಿಯ ಮೇಲೆ ಕೆ.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ, ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಬೆಂಗಳೂರು ನಗರದ ಮಾನ್ಯ 46 ನೇ ಸಿ.ಸಿ.ಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ್ ರವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ವರದಿ: ಶಿವ ಪ್ರಸಾದ್, ಟಿವಿ9 ಬೆಂಗಳೂರು
Published On - 5:13 pm, Fri, 29 July 22