ಬೆಂಗಳೂರಿಗರೇ ಗಮನಿಸಿ; ನೀವು ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 112ಕ್ಕೆ ಕರೆ ಮಾಡಿ
Bengaluru News: 112ಕ್ಕೆ ಫೋನ್ ಮಾಡಿ ಕಳೆದ 3 ತಿಂಗಳಲ್ಲಿ 1,753 ಜನರು ದೂರು ದಾಖಲಿಸಿದ್ದಾರೆ. ಸೈಬರ್ ಅಪರಾಧಿಗಳಿಂದ 2.37 ಕೋಟಿ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಸೈಬರ್ ವಂಚನೆಯ (Cyber Fraud) ಪ್ರಕರಣಗಳು ಹೆಚ್ಚಾಗಿವೆ. ಈ ಸೈಬರ್ ಕ್ರೈಂ ಮೂಲಕ ನೀವು ಕೂಡ ಹಣ ಕಳೆದುಕೊಂಡಿದ್ದೀರಾ? ಹಾಗಾದರೆ, ಆತಂಕ ಪಡಬೇಡಿ. ನಿಮ್ಮ ಮೊಬೈಲ್ ತೆಗೆದುಕೊಂಡು 112 ನಂಬರ್ಗೆ ಫೋನ್ ಮಾಡಿ. ನಿಮ್ಮ ಕರೆ ಬಂದಕೂಡಲೆ ನಿಮ್ಮ ಖಾತೆಯ ಮಾಹಿತಿಯನ್ನು ಪಡೆಯುವ ಬೆಂಗಳೂರು ನಗರ ಪೊಲೀಸರು ಆ ಖಾತೆಯಿಂದ ಹಣ ವರ್ಗಾವಣೆಯನ್ನು ನಿರ್ಬಂಧಿಸುತ್ತಾರೆ. ಇದರಿಂದ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿದವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಈ ರೀತಿ ಕಳೆದ 3 ತಿಂಗಳಲ್ಲಿ ಬೆಂಗಳೂರು ಸಿಟಿ ಪೊಲೀಸ್ನ ಸೈಬರ್ ಕ್ರೈಂ ಇನ್ಸಿಡೆಂಟ್ ವಿಭಾಗ 2.37 ಕೋಟಿ ರೂ. ಹಣವನ್ನು ಸಂಗ್ರಹಿಸಿದ್ದಾರೆ.
ನಾನಾ ನಂಬರ್ಗಳಿಂದ, ಹಲವು ಹೆಸರುಗಳಿಂದ ಜನರನ್ನು ನಂಬಿಸಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸೈಬರ್ ಕ್ರೈಂ ತಡೆಗೆ ಬೆಂಗಳೂರು ಪೊಲೀಸರು ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ ಸಿಸ್ಟಂ ಅಳವಡಿಸಿಕೊಂಡಿದ್ದಾರೆ. ಯಾರಾದರೂ ಸೈಬರ್ ವಂಚನೆ ಮೂಲಕ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.
Lost your money in a cyber fraud?
Do not panic! Call 112? and @BlrCityPolice will act quickly to stop transfer of money that is siphoned off.
The Cyber Crime Incident (CIR) wing of @BlrCityPolice has recovered ₹2.37 Crore in the last 3 months.#Namma112 pic.twitter.com/nIMWZTXQB2
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 28, 2022
112ಕ್ಕೆ ಫೋನ್ ಮಾಡಿ ಕಳೆದ 3 ತಿಂಗಳಲ್ಲಿ 1,753 ಜನರು ದೂರು ದಾಖಲಿಸಿದ್ದಾರೆ. ಸೈಬರ್ ಅಪರಾಧಿಗಳಿಂದ 2.37 ಕೋಟಿ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ, ಮೊಬೈಲ್ ಕಂಪನಿ, ಲಕ್ಕಿ ಡ್ರಾ, ಮ್ಯಾಟ್ರಿಮೊನಿಯಲ್, ಓಎಲ್ಎಕ್ಸ್ ಮುಂತಾದ ಹೆಸರಿನಲ್ಲಿ ಫೋನ್ ಮಾಡಿ, ನಿಮ್ಮ ಖಾಸಗಿ ಮಾಹಿತಿ ಪಡೆದು ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ನೀವು ವಂಚನೆಗೊಳಗಾಗಿದ್ದೀರಿ ಎಂದು ಗೊತ್ತಾದ ಕೂಡಲೆ 112 ನಂಬರ್ಗೆ ಫೋನ್ ಮಾಡಿದರೆ ಅಲ್ಲಿನ ಸಿಬ್ಬಂದಿ ನಿಮಗೆ ಸಹಾಯ ಮಾಡುತ್ತಾರೆ. ನೀವು ಎಷ್ಟು ಬೇಗ ಕರೆ ಮಾಡುತ್ತೀರೋ ಅಷ್ಟು ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ನೀವು ಫೋನ್ ಮಾಡಿ ದೂರು ನೀಡುವುದು ತಡವಾದರೆ ನಿಮ್ಮ ಹಣವನ್ನು ಸೈಬರ್ ಅಪರಾಧಿಗಳು ಡ್ರಾ ಮಾಡಾಗಿರುತ್ತದೆ.
ಇದನ್ನೂ ಓದಿ: Cyber Fraud: ಸೈಬರ್ ವಂಚಕರು ಸುಲಭವಾಗಿ ಬ್ಯಾಂಕ್ ಖಾತೆಗೆ ಕಣ್ಣ ಹಾಕುವುದು ಹೇಗೆ? ವಂಚನೆಯಿಂದ ಪಾರಾಗಲು ಇಲ್ಲಿದೆ ಉಪಾಯ
ಭಾರತ ಸರ್ಕಾರ 2020ರಲ್ಲಿ ಒಂದೇ ಭಾರತ ಒಂದೇ ತುರ್ತು ಕರೆ ಸಂಖ್ಯೆ 112 ಅನ್ನು ಜಾರಿಗೊಳಿಸಿತ್ತು. ಈ ಹಿಂದೆ ತುರ್ತು ಸಮಯದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್ ಸೇವೆಗೆ ವಿವಿಧ ಬೇರೆ ಬೇರೆ ನಂಬರ್ಗೆ ಕರೆ ಮಾಡಬೇಕಿತ್ತು. ಇದರಿಂದ ಸಾರ್ವಜನಿಕರಿಗೆ ಗೊಂದಲ ಉಂಟಾಗುತ್ತಿತ್ತು. ಈಗ ಎಲ್ಲಾ ಇಲಾಖೆಗಳಿಗೆ ಒಂದೇ ತುರ್ತು ಕರೆ ಸಂಖ್ಯೆ 112 ಆಗಿ ಬದಲಾಯಿಸಲಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 112 ತುರ್ತು ಕರೆ ವ್ಯವಸ್ಥೆ ಜಾರಿ ಮಾಡಲಾಗಿದೆ.
ಪೊಲೀಸ್ ಇಲಾಖೆ 112 ತುರ್ತು ಕರೆಯ ಪೋರ್ಟಲ್ ವ್ಯವಸ್ಥೆ ಜಾರಿಗೆ ತಂದಿದೆ. 112 ಆ್ಯಪ್ ಅನ್ನು ಸಹ ಬಿಡುಗಡೆ ಮಾಡಿದೆ. ಸ್ಮಾರ್ಟ್ ಫೋನ್ನಲ್ಲಿ ಈ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ನಲ್ಲಿ ನಿಮ್ಮ ವಿಳಾಸ ಮತ್ತು ಸಂಬಂಧಿಕರು ಮತ್ತು ಸ್ನೇಹಿತರ ಮೊಬೈಲ್ ನಂಬರ್ ದಾಖಲು ಮಾಡಬೇಕು. ಒಂದು ವೇಳೆ ನೀವು ಅಪಾಯಕ್ಕೆ ಸಿಲುಕಿದರೆ ತಕ್ಷಣವೇ ಈ ಆ್ಯಪ್ ಓಪನ್ ಮಾಡಿ 112ಗೆ ಕರೆ ಮಾಡಿದಾಗ ಕಂಟ್ರೋಲ್ ರೂಮಿಗೆ ಕರೆ ಹೋಗುತ್ತದೆ. ಆಗ ನಿಮಗೆ ಅಗತ್ಯವಿರುವ ಮಾಹಿತಿಯನ್ನು ಅವರು ನೀಡುತ್ತಾರೆ. ನಿಮ್ಮ ಸಮಸ್ಯೆಗೆ ಪರಿಹಾರ ಕೂಡ ನೀಡುತ್ತಾರೆ,