ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕೊರೊನಾ ಸೋಂಕಿತ 56 ವರ್ಷದ ಹೊಸಕೋಟೆಯ ಮಹಿಳೆಯೋರ್ವರು ವಿಧಾನಸೌಧದ ಎದುರು ಆಗಮಿಸಿದ ಘಟನೆ ನಡೆದಿದೆ. ಸೋಂಕು ದೃಢಪಟ್ಟು 4 ದಿನವಾದರೂ ಬೆಡ್ ಸಿಗದ ಕಾರಣ ವಿಧಾನಸೌಧದ ಎದುರು ಆಗಮಿಸಿದ ಸೋಂಕಿತೆಯನ್ನು ಕೊವಿಡ್ ವಾರ್ ರೂಂಗೆ ಕಳುಹಿಸಲು ಪೊಲೀಸರು ಹರಸಾಹಸಪಟ್ಟರು. ಆದರೆ ಈ ವೇಳೆ ಯುವ ಕಾಂಗ್ರೆಸ್ ವತಿಯಿಂದ ಬಂದ ಆ್ಯಂಬುಲೆನ್ಸ್ ಸೋಂಕಿತೆಯನ್ನು ಪೊಲೀಸರ ಸೂಚನೆಯಂತೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿತು.
ಆ್ಯಂಬುಲೆನ್ಸ್ನಲ್ಲೇ ವಿಧಾನಸೌಧದ ಬಳಿ ಬಂದ ಮಹಿಳೆ, ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿ ನಾಲ್ಕು ದಿನ ಆದರೂ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂದು ದೂರಿದರು. ಪೊಲೀಸರು ಆಕೆಯನ್ನು ವಿಧಾನಸೌಧದ ಮುಂಭಾಗದಿಂದ ಕಳುಹಿಸಲು ಯತ್ನಿಸಿದರು. ಈ ವೇಳೆ ಕಾಂಗ್ರೆಸ್ನ ಮೊಹಮ್ಮದ್ ನಲಪಾಡ್ ಆಗಮಿಸಿ ಆಕ್ಸಿಜನ್ ಇಲ್ಲದೇ ಎಲ್ಲಿಗೆ ಕಳಿಸ್ತೀರಿ ಎಂದು ಪೊಲೀಸರನ್ನು ಪ್ರಶ್ನಿಸಿದರು.
ವಿಧಾನಸೌಧದ ಮುಂದೆ ಆ್ಯಂಬುಲೆನ್ಸ್ ನಿಲ್ಲಿಸಬಾರದು ಎಂದು ಪೊಲೀಸರು ಸೋಂಕಿತೆ ಮತ್ತು ಮೊಹಮ್ಮದ್ ನಲಪಾಡ್ ಅವರನ್ನು ಅಲ್ಲಿಂದ ಸಾಗಿಸಲು ಯತ್ನಿಸಿದ್ದಾರೆ. ಬಳಿಕ ಸ್ಥಳಕ್ಕೆ ಕಾಂಗ್ರೆಸ್ ಕೇರ್ಸ್ನ ಆಕ್ಸಿಜನ್ ಇರುವ ಆ್ಯಂಬುಲೆನ್ಸ್ ಮೂಲಕ ಸೋಂಕಿತೆಯನ್ನು ಪೊಲೀಸರ ಸೂಚನೆ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ತದನಂತರ ವಿಧಾನಸೌಧ ಮುಂಭಾಗ ಪೊಲೀಸರ ಜೊತೆ ವಾಗ್ವಾದ ನಡೆಸಿದ ಕಾರಣ ಕಾಂಗ್ರೆಸ್ನ ಮೊಹಮ್ಮದ್ ನಲಪಾಡ್ರನ್ನು ಪೊಲಿಸರು ವಶಕ್ಕೆ ಪಡೆದರು.
2 ದಿನಗಳಲ್ಲಿ 5 ಸಾವಿರ ಬೆಡ್ ವ್ಯವಸ್ಥೆ
ಖಾಸಗಿ ಹೋಟೆಲ್, ಇನ್ನಿತರ ಕಟ್ಟಡಗಳನ್ನು ಬಳಸಿ 2 ದಿನಗಳಲ್ಲಿ 5 ಸಾವಿರ ಬೆಡ್‌ಗಳ ಸ್ಟೆಪ್‌ಡೌನ್ ಆಸ್ಪತ್ರೆಯ ವ್ಯವಸ್ಥೆಯನ್ನುನಿರ್ಮಿಸಲಾಗುತ್ತದೆ ಎಂದು ವಿಧಾನಸೌಧದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೆಡಿಕಲ್ ಕಾಲೇಜುಗಳ ಜೊತೆ ಇಂದು ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. 1135 ಆಕ್ಷಿಜನ್ ಬೆಡ್ ನೀಡಲು ಮೆಡಿಕಲ್ ಕಾಲೇಜುಗಳಿಗೆ ಆದೇಶಿಸಿದ್ದೇವೆ. ಆಕ್ಸಿಜನ್ ಬೆಡ್‌ಗಳ ಶೇ 75ರಷ್ಟು ಖರ್ಚನ್ನು ಸರ್ಕಾರ ಭರಿಸಲಿದೆ. ಜತೆಗೆ ಸ್ಟೆಪ್‌ಡೌನ್ ಆಸ್ಪತ್ರೆಗಳನ್ನು ಸ್ಥಾಪಿಸಲು ನಿರ್ಧಾರ ಮಾಡಿದ್ದೇವೆ. 5,000 ಸಾವಿರ ಬೆಡ್ಗಳನ್ನು ಸ್ಟೆಪ್‌ಡೌನ್ ಆಸ್ಪತ್ರೆಗಳ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಸತಿ ನಿಲಯಗಳು, ಹಾಲ್ಗಳಲ್ಲೂ ಬೆಡ್ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಮಕ್ಕಳಿಗೆ ಅಪಾಯ ಎಂಬ ಆತಂಕವಿರುವ ಕೊವಿಡ್ 3ನೇ ಅಲೆಯನ್ನು ಹೇಗೆ ನಿಭಾಯಿಸ್ತೀರಿ? ಭಾರತ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
Coronavirus India Update: ಭಾರತದಲ್ಲಿ 4.12 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3980 ಮಂದಿ ಸಾವು
(Covid positive woman came to Vidhana Soudha for not getting beds in hospital bangaluru)