ಲಸಿಕೆಯ ಶಕ್ತಿಯಿಂದಲೇ ಪೊಲೀಸರಿಗೆ ಕೊರೊನಾ ಸೋಂಕಿನ 2ನೇ ಅಲೆ ಎದುರಿಸಲು ಸಾಧ್ಯವಾಯ್ತು: ಪ್ರವೀಣ್ ಸೂದ್
ಮೊದಲ ಅಲೆಗೆ ಹೋಲಿಸಿದ್ರೆ ಎರಡನೇ ಅಲೆ ಎದುರಿಸಲು ಪೊಲೀಸ್ ಇಲಾಖೆ ಸಮರ್ಥವಾಗಿದೆ. ರಾಜ್ಯದ 90 ಸಾವಿರ ಪೊಲೀಸರ ಪೈಕಿ 80 ಸಾವಿರಕ್ಕಿಂತ ಹೆಚ್ಚು ಪೊಲೀಸರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು: ಆಕ್ಸಿಜನ್ ಸಾಗಣೆ ವಾಹನಗಳಿಗೆ ಗ್ರೀನ್ ಕಾರಿಡಾರ್ ಮೂಲಕ ಟ್ರಾಫಿಕ್ ಸಮಸ್ಯೆಯಿಲ್ಲದೆ ತ್ವರಿತವಾಗಿ ಆಸ್ಪತ್ರೆಗಳಿಗೆ ರವಾನಿಸಲು ಪೊಲೀಸರು ನೆರವಾಗುತ್ತಾರೆ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದರು. ‘ಟಿವಿ9’ ಕನ್ನಡ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ವಿವಿಧ ಭಾಗಗಳಿಂದ ಸರಬರಾಜು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಎಲ್ಲಿಯೂ, ಯಾರೊಬ್ಬರೂ ಆಕ್ಸಿಜನ್ ವಾಹನಗಳಿಗೆ ಸಮಸ್ಯೆ ಮಾಡುವಂತಿಲ್ಲ. ಅವಶ್ಯಕತೆಯಿದ್ದಲ್ಲಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿಕೊಟ್ಟು ಆಕ್ಸಿಜನ್ ವಾಹನಗಳ ತ್ವರಿತ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಇನ್ನೂ ಅವಶ್ಯಕತೆ ಇದ್ದಲ್ಲಿ ಪೊಲೀಸರು ಎಸ್ಕಾರ್ಟ್ ನೀಡಲಿದ್ದಾರೆ ಎಂದು ಹೇಳಿದರು.
ಮೊದಲ ಅಲೆಗೆ ಹೋಲಿಸಿದ್ರೆ ಎರಡನೇ ಅಲೆ ಎದುರಿಸಲು ಪೊಲೀಸ್ ಇಲಾಖೆ ಸಮರ್ಥವಾಗಿದೆ. ರಾಜ್ಯದ 90 ಸಾವಿರ ಪೊಲೀಸರ ಪೈಕಿ 80 ಸಾವಿರಕ್ಕಿಂತ ಹೆಚ್ಚು ಪೊಲೀಸರಿಗೆ ಲಸಿಕೆ ನೀಡಲಾಗಿದೆ. ರಾಜ್ಯದ ಇತರ ಇಲಾಖೆಗಳ ರೀತಿಯಲ್ಲೇ ಪೊಲೀಸರೂ ಸಹ ನಿತ್ಯ ರಸ್ತೆಯಲ್ಲಿ ನಿಂತು ಕೆಲಸ ಮಾಡ್ತಾರೆ. ಜನರ ಜೊತೆ ಸಂಪರ್ಕ ಇದ್ದೆ ಇರುತ್ತದೆ. ಕಳೆದ ಬಾರಿ 100ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕೊವಿಡ್ಗೆ ಬಲಿಯಾಗಿದ್ದರು. ಈ ಬಾರಿ ಸಾವಿನ ಸಂಖ್ಯೆ ಕಡಿಮೆ ಅಗಿದೆ. ಅದರೂ ಸಹ ರಾಜ್ಯದಲ್ಲಿ ಎರಡು ಸಾವಿರ ಸಿಬ್ಬಂದಿಗೆ ಕೊವಿಡ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿಸಿದರು.
ಬಹುತೇಕ ಪೊಲೀಸರು ಲಸಿಕೆ ತೆಗೆದುಕೊಂಡಿರುವ ಕಾರಣ ಶೇ 90ರಷ್ಟು ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತಿದ್ದಾರೆ. ರಾಜ್ಯದ ಜನತೆ ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬಾರದು. ಲಸಿಕೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆ ಪೊಲೀಸ್ ಇಲಾಖೆಯ ಉದಾಹರಣೆಯೇ ನಮ್ಮ ಕಣ್ಣ ಮುಂದೆ ಇದೆ. ವ್ಯಾಕ್ಸಿನೇಷನ್ ಪಡೆದವರಿಗೆ ಕೊವಿಡ್ ಬಂದರೂ ಹೆಚ್ಚಿನ ಸಮಸ್ಯೆ ಇಲ್ಲ. ಕೊವಿಡ್ ಎದುರಿಸಬೇಕು ಎಂದರೆ ಮಾಸ್ಕ್, ಸಾಮಾಜಿಕ ಅಂತರದ ಜೊತೆ ಲಸಿಕೆಯನ್ನೂ ಪಡೆದುಕೊಳ್ಳಬೇಕು. ಈ ಮೂರು ಅಸ್ತ್ರಗಳಿಂದ ನಾವು ಕೊವಿಡ್ ಮಣಿಸಬಹುದು ಎಂದರು.
ಆರೋಗ್ಯ ಭಾಗ್ಯ ಯೋಜನೆಯಡಿ ರಾಜ್ಯ ಪೊಲೀಸರ ಆರೋಗ್ಯಕ್ಕೆ ನೂರು ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಹಿಂದೆ ಈ ಯೋಜನೆಯಡಿ ಐವತ್ತು ಕೋಟಿ ನೀಡಲಾಗುತ್ತಿತ್ತು. ಇದೀಗ ಮುಖ್ಯಮಂತ್ರಿ ಅದನ್ನು ಹೆಚ್ಚಿಸಿದ್ದಾರೆ. ಯಾವೊಬ್ಬ ಪೊಲೀಸ್ ಸಿಬ್ಬಂದಿ ಹಾಗೂ ಅತನ ಕುಟುಂಬ ಅನಾರೋಗ್ಯದಿಂದ ಬಳಲಬಾರದು ಎಂಬುದು ಈ ಯೋಜನೆಯ ಉದ್ದೇಶ. ಪೊಲೀಸರು ಯಾವುದೇ ಖಾಸಗಿ ಅಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆದುಕೊಳ್ಳಬಹುದು. ರಾಜ್ಯದ ಖಾಸಗಿ ಅಸ್ಪತ್ರೆಗಳಿಗೆ ಬಾಕಿಯಾಗಿದ್ದ ಅರೋಗ್ಯ ಭಾಗ್ಯದ ಬಿಲ್ ಪಾವತಿಸಲಾಗಿದೆ ಎಂದು ತಿಳಿಸಿದರು.
ಭದ್ರತೆಗೆ ನಿಯೋಜನೆಗೊಳ್ಳುವ ಪೊಲೀಸರಿಗೆ ಫೀಡಿಂಗ್ ಬಿಲ್ ಆಗಿ ₹ 200 ನೀಡಲಾಗುತ್ತಿದೆ. ಈ ಹಿಂದೆ ಭದ್ರತೆ ಹಾಗೂ ಇತರ ಕೆಲಸಗಳಿಗೆ ನಿಯೋಜಿಸುವ ಪೊಲೀಸರಿಗೆ ₹ 100 ನೀಡಲಾಗುತ್ತಿದೆ. ಈಗ ಅದನ್ನು ಇನ್ನೂರು ರೂಪಾಯಿಗೆ ಹೆಚ್ಚಿಸಲಾಗಿದೆ. ಯಾವೊಬ್ಬ ಪೊಲೀಸ್ ಸಿಬ್ಬಂದಿಯೂ ಕೆಲಸಕ್ಕೆ ಬಂದ ಕಡೆ ಊಟ ತಿಂಡಿಗೆ ಕಷ್ಟಪಡಬಾರದು. ಈವರೆಗೆ ಬಾಕಿಯಿದ್ದ ಅಷ್ಟೂ ಟಿಎ ಬಿಲ್ ಕ್ಲಿಯರ್ ಮಾಡಲಾಗಿದೆ ಎಂದರು.
ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬವನ್ನು ಪ್ರತ್ಯೇಕ ಎಂದು ಪರಿಗಣಿಸಲು ಆಗುವುದಿಲ್ಲ. ಪೊಲೀಸ್ ಕುಟುಂಬದ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈಗಾಗಲೇ ನಲವತ್ತು ನಲವತ್ತೈದು ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಲಾಗಿದೆ. ಜೂನ್ ಅಂತ್ಯದ ಒಳಗೆ ಪೊಲೀಸ್ ಕುಟುಂಬಕ್ಕೆ ಸಹ ಕೊವಿಡ್ ಲಸಿಕೆ ಹಾಕಿಸಲಾಗುತ್ತದೆ. ಕುಟುಂಬ ಆರೋಗ್ಯವಾಗಿ ಇದ್ದರೆ ಮಾತ್ರ ಪೊಲೀಸ್ ಸಿಬ್ಬಂದಿ ಮನೆಯಿಂದ ಹೊರಗೆ ಬಂದು ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯ. ಎಲ್ಲರ ಅರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಅವರು ತಿಳಿಸಿದರು.
(Coronavirus Vaccine is Powerful That helps Karnataka police to withstand covid 2nd wave says DG IGP Praveen Sood)
ಇದನ್ನೂ ಓದಿ: 3ನೇ ಅಲೆ ಬರುವುದರೊಳಗೆ ಎಲ್ಲರಿಗೂ ಲಸಿಕೆ, ಹವಾಮಾನದಿಂದ ಆಕ್ಸಿಜನ್ ಉತ್ಪತ್ತಿ ಮಾಡ್ತೀವಿ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಇದನ್ನೂ ಓದಿ: Explainer: ಏನಿದು ವೈದ್ಯಕೀಯ ಆಮ್ಲಜನಕ? ಇದನ್ನು ಉತ್ಪಾದಿಸುವುದು ಹೇಗೆ?
Published On - 6:03 pm, Thu, 6 May 21