ಗ್ರೇಟೆಸ್ಟ್ ಕಂಬ್ಯಾಕ್… RCB ಯಂತೆ ಪುಟಿದೆದ್ದ ಮೆಲ್ಬೋರ್ನ್ ಸ್ಟಾರ್ಸ್
Melbourne Stars and RCB: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರ ಮೊದಲ 8 ಪಂದ್ಯಗಳಲ್ಲಿ ಆರ್ಸಿಬಿ ತಂಡ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದುಕೊಂಡಿತ್ತು. ಆದರೆ ಬಳಿಕ ಸತತ 6 ಮ್ಯಾಚ್ಗಳಲ್ಲಿ ಜಯ ಸಾಧಿಸಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದ್ದು ಈಗ ಇತಿಹಾಸ. ಇದೀಗ ಇದೇ ಮಾದರಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಸತತ ಸೋಲುಗಳ ಬಳಿಕ ಜಯದ ಸರಮಾಲೆಯೊಂದಿಗೆ ನಾಕೌಟ್ ಹಂತಕ್ಕೇರಿದೆ.
ಸತತ 6 ಪಂದ್ಯಗಳಲ್ಲಿ ಸೋಲು, ಆ ಬಳಿಕ ಸತತ 6 ಮ್ಯಾಚ್ಗಳಲ್ಲಿ ಜಯ ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024 ರಲ್ಲಿ ಪ್ಲೇಆಫ್ಗೆ ಪ್ರವೇಶಿಸಿದ್ದು ಯಾರು ತಾನೆ ಮರೆಯಲು ಸಾಧ್ಯ. ಇದೀಗ ಇಂತಹದ್ದೇ ಗ್ರೇಟೆಸ್ಟ್ ಕಂಬ್ಯಾಕ್ ಬಿಗ್ ಬ್ಯಾಷ್ ಲೀಗ್ನಲ್ಲೂ ಕಂಡು ಬಂದಿದೆ. ಹೀಗೆ ಸೋತು ಸುಣ್ಣವಾಗಿ ಆ ಬಳಿಕ ಪುಟಿದೆದ್ದ ತಂಡ ಮೆಲ್ಬೋರ್ನ್ ಸ್ಟಾರ್ಸ್. ಈ ಬಾರಿಯ ಬಿಗ್ ಬ್ಯಾಷ್ ಲೀಗ್ನಲ್ಲಿ ಮಾರ್ಕಸ್ ಸ್ಟೊಯಿನಿಸ್ ನೇತೃತ್ವದ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿತ್ತು.
- ಮೊದಲ ಪಂದ್ಯದಲ್ಲಿ ಪರ್ತ್ ಸ್ಕಾಚರ್ಸ್ ವಿರುದ್ಧ 6 ವಿಕೆಟ್ಗಳಿಂದ ಸೋತು ಮೆಲ್ಬೋರ್ನ್ ಸ್ಟಾರ್ಸ್ ಈ ಬಾರಿಯ ಬಿಬಿಎಲ್ ಅಭಿಯಾನ ಶುರು ಮಾಡಿತ್ತು.
- ಆ ಬಳಿಕ ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ 8 ವಿಕೆಟ್ಗಳಿಂದ ಪರಾಜಯಗೊಂಡಿದೆ.
- ಇನ್ನು ಮೂರನೇ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡವು ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು 15 ರನ್ಗಳಿಂದ ಸೋಲಿಸಿದೆ.
- ನಾಲ್ಕನೇ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ ಸಿಡ್ನಿ ಸಿಕ್ಸರ್ಸ್ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
- ಐದನೇ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಸಿಡ್ನಿ ಥಂಡರ್ ತಂಡವು 18 ರನ್ಗಳಿಂದ ಮಣಿಸಿದೆ.
ಹೀಗೆ ಸತತ 5 ಸೋಲುಂಡ ಮೆಲ್ಬೋರ್ನ್ ಸ್ಟಾರ್ಸ್ ನಾಕೌಟ್ ಹಂತಕ್ಕೇರುವುದಿಲ್ಲ ಎಂದು ಎಲ್ಲರೂ ಷರಾ ಬರೆದಿದ್ದರು. ಆದರೆ ಬಳಿಕ ನಡೆದಿದ್ದೇ ಗ್ರೇಟೆಸ್ಟ್ ಕಂಬ್ಯಾಕ್.
ಹೊಸ ವರ್ಷದ ಮೊದಲ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿದ ಮೆಲ್ಬೋರ್ನ್ ಸ್ಟಾರ್ಸ್, ಆ ಬಳಿಕ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ 5 ವಿಕೆಟ್ಗಳ ಗೆಲುವು ದಾಖಲಿಸಿತು.
ಇನ್ನು ಸಿಡ್ನಿ ಸಿಕ್ಸರ್ಸ್ ತಂಡವನ್ನು 16 ರನ್ಗಳಿಸಿ ಮಣಿಸಿ ಮೆಲ್ಬೋರ್ನ್ ತಂಡವು ಮೂರನೇ ಗೆಲುವು ದಾಖಲಿಸಿತು. ಇದರ ಬೆನ್ನಲ್ಲೇ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ 42 ರನ್ಗಳ ಸೋಲುಣಿಸಿತು.
ನಾಕೌಟ್ ಹಂತಕ್ಕೇರಲು ನಿರ್ಣಾಯಕವಾಗಿದ್ದ ಹೋಬಾರ್ಟ್ ಹರಿಕೇನ್ಸ್ ವಿರುದ್ಧದ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವು 40 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಮೆಲ್ಬೋರ್ನ್ ಸ್ಟಾರ್ಸ್ ತಂಡವು ನಾಕೌಟ್ ಹಂತಕ್ಕೇರಿದೆ. ಅದರಂತೆ ಜನವರಿ 22 ರಂದು ನಡೆಯಲಿರುವ ನಾಕೌಟ್ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಸಿಡ್ನಿ ಥಂಡರ್ ತಂಡಗಳು ಮುಖಾಮುಖಿಯಾಗಲಿದೆ.
ಸತತ ಸೋಲುಗಳ ಬಳಿಕ ಸತತ ಗೆಲುವು ಸಾಧಿಸಿ ನಾಕೌಟ್ ಹಂತಕ್ಕೆ ಪ್ರವೇಶಿಸಿರುವ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪ್ರದರ್ಶನವನ್ನು ಬಿಗ್ ಬ್ಯಾಷ್ ಲೀಗ್ನಲ್ಲಿ ಕಂಡು ಬಂದ ಗ್ರೇಟೆಸ್ಟ್ ಕಂಬ್ಯಾಕ್ ಎಂದು ವರ್ಣಿಸಲಾಗುತ್ತಿದೆ.
ಇದನ್ನೂ ಓದಿ: Champions Trophy 2025: ಟೀಮ್ ಇಂಡಿಯಾದಲ್ಲಿ 6 ಹಳೆ ಹುಲಿಗಳು
ಮೆಲ್ಬೋರ್ನ್ ಸ್ಟಾರ್ಸ್ ತಂಡ: ಮಾರ್ಕಸ್ ಸ್ಟೊಯಿನಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ಬೆನ್ ಡಕೆಟ್, ಹಿಲ್ಟನ್ ಕಾರ್ಟ್‌ರೈಟ್ , ಬ್ರಾಡಿ ಕೌಚ್ , ಟಾಮ್ ಕರನ್ , ಸ್ಯಾಮ್ ಹಾರ್ಪರ್ , ಕ್ಯಾಂಪ್‌ಬೆಲ್ ಕೆಲ್ಲವೇ, ಹ್ಯಾಮಿಶ್ ಮೆಕೆಂಜಿ , ಜೋಯಲ್ ಪ್ಯಾರಿಸ್ , ಮಾರ್ಕ್ ಸ್ಟೆಕೆಟೀ , ಬ್ಯೂ ವೆಬ್‌ಸ್ಟರ್ , ಆಸ್ಟಿನ್ ಅನ್ಲೆಜಾರ್ಕ್ , ಆ್ಯಡಮ್ ಮಿಲ್ನ್, ಪೀಟರ್ ಸಿಡ್ಲ್, ಜೋ ಕ್ಲಾರ್ಕ್ , ಜೊನಾಥನ್ ಮೆರ್ಲೊ , ಥಾಮಸ್ ಫ್ರೇಸರ್ ರೋಜರ್ಸ್ , ಬ್ಲೇಕ್ ಮೆಕ್ಡೊನಾಲ್ಡ್, ಉಸಾಮಾ ಮಿರ್ , ಡೇನಿಯಲ್ ಲಾರೆನ್ಸ್.